ADVERTISEMENT

ಸಚಿವ ನಾರಾಯಣಗೌಡ ಕಾಂಗ್ರೆಸ್‌ನಿಂದ ಕಣಕ್ಕೆ?

ಪ್ರಧಾನಿ ನರೇಂದ್ರ ಮೋದಿ ಭೇಟಿ ವೇಳೆ ಸಂಚಲನ ಸೃಷ್ಟಿಸಿದ ಕೆಸಿಎನ್‌ ಹೇಳಿಕೆ

ಎಂ.ಎನ್.ಯೋಗೇಶ್‌
Published 3 ಮಾರ್ಚ್ 2023, 11:20 IST
Last Updated 3 ಮಾರ್ಚ್ 2023, 11:20 IST
ಕೆ.ಸಿ.ನಾರಾಯಣಗೌಡ
ಕೆ.ಸಿ.ನಾರಾಯಣಗೌಡ   

ಮಂಡ್ಯ: ಜಿಲ್ಲೆಯಲ್ಲಿ ಮೊದಲ ಬಾರಿಗೆ ಬಿಜೆಪಿ ಗೆಲ್ಲಿಸಿ ಇತಿಹಾಸ ಸೃಷ್ಟಿಸಿದ್ದ ಕ್ರೀಡೆ ಮತ್ತು ಯುವಜನ ಸೇವೆ ಇಲಾಖೆ ಸಚಿವ ಕೆ.ಸಿ.ನಾರಾಯಣಗೌಡ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸುವುದು ಖಚಿತ ಎಂಬ ಸುದ್ದಿ ಜಿಲ್ಲೆಯಾದ್ಯಂತ ಹರಿದಾಡುತ್ತಿದೆ.

ಬಿಜೆಪಿ ಸರ್ಕಾರ ರಚನೆಯಾಗಲು ಸಹಾಯ ಮಾಡಿದ್ದ 12 ಮಂದಿ ಶಾಸಕರಲ್ಲಿ ಕೆ.ಆರ್‌.ಪೇಟೆ ಶಾಸಕ ನಾರಾಯಣಗೌಡ ಕೂಡ ಒಬ್ಬರು. 2018ರ ಚುನಾವಣೆಯಲ್ಲಿ ಜೆಡಿಎಸ್‌ ನಿಂದ ಗೆದ್ದಿದ್ದ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಉಪ ಚುನಾ ವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.

ಆ ಮೂಲಕ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತವರು ಕೆ.ಆರ್‌.ಪೇಟೆ ಕ್ಷೇತ್ರದಲ್ಲಿ ಕಮಲ ಅರಳಿಸಿ ದಾಖಲೆ ಸೃಷ್ಟಿಸಿದ್ದರು.

ADVERTISEMENT

ಕಳೆದ ಮೂರು ವರ್ಷಗಳಿಂದ ಸಚಿವರಾಗಿ ಕೆಲಸ ಮಾಡುತ್ತಿದ್ದರೂ ಕೆ.ಆರ್‌.ಪೇಟೆ ಕ್ಷೇತ್ರದಲ್ಲಿ ಬಿಜೆಪಿ ಪರ ವಾತಾವರಣ ಇಲ್ಲ. ಇದನ್ನು ಮನಗಂಡ ನಾರಾಯಣಗೌಡ ಕಾಂಗ್ರೆಸ್‌ ಕದ ತಟ್ಟಿದ್ದರು, ವಿಧಾನಸಭಾ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಹೊಗಳಿಕೊಂಡು ಓಡಾಡುತ್ತಿದ್ದರು ಎಂಬ ಕಾರಣಕ್ಕೆ ಅವರು ಕಾಂಗ್ರೆಸ್‌ ಸೇರುತ್ತಾರೆ ಎಂಬ ಅನುಮಾನ ಜನರನ್ನು ಕಾಡುತ್ತಿತ್ತು.

ಇದಕ್ಕೆ ಪುಷ್ಟಿ ನೀಡುವಂತೆ ನಾರಾಯಣಗೌಡ ಗುರುವಾರ ಕೆ.ಆರ್‌.ಪೇಟೆಯಲ್ಲಿ ನೀಡಿರುವ ಹೇಳಿಕೆ ಹಲವು ಚರ್ಚೆಗಳನ್ನು ಹುಟ್ಟಹಾಕಿದೆ.

‘ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಆಹ್ವಾ ನವಿದೆ. ಆದರೆ ಈ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಆಪ್ತರು, ಹಿತೈಷಿಗಳ ಜೊತೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳುತ್ತೇನೆ. ಜನಾಭಿ ಪ್ರಾಯ ಸಂಗ್ರಹಿಸಿ ನಂತರ ಕಾಂಗ್ರೆಸ್‌ ಸೇರುವ ಬಗ್ಗೆ ನಿರ್ಧಾರ ಮಾಡುತ್ತೇನೆ’ ಎಂದು ಸಚಿವ ನಾರಾಯಣಗೌಡ ಹೇಳಿದ್ದಾರೆ.

‘ಕೆ.ಆರ್‌.ಪೇಟೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ನಾಯಕತ್ವದ ಕೊರತೆ ಇದೆ. ಅದಕ್ಕಾಗಿಯೇ ಕಾಂಗ್ರೆಸ್‌ ಮುಖಂಡ ರು ಪಕ್ಷ ಸೇರುವಂತೆ ಒತ್ತಾಯ ಮಾಡು ತ್ತಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲ ವನ್ನೂ ತಿಳಿಸುತ್ತೇನೆ’ ಎಂದು ಅವರು ಹೇಳಿದ್ದಾರೆ. ಸಚಿವರ ಈ ಮಾತು ಕಾಂಗ್ರೆಸ್‌ ಸೇರುವ ಮುನ್ಸೂಚನೆಯಾಗಿದೆ ಎಂದೇ ಬಣ್ಣಿಸಲಾಗುತ್ತಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಮಾರ್ಚ್‌ 12ರಂದು ಜಿಲ್ಲೆಗೆ ಭೇಟಿ ನೀಡುತ್ತಿದ್ದು ಈ ಸಮಯದಲ್ಲಿ ಕಾಂಗ್ರೆಸ್‌ ಸೇರುವ ಮಾತನಾಡುತ್ತಿರುವುದು ಬಿಜೆಪಿ ಮುಖಂಡರಲ್ಲಿ ಗೊಂದಲ ಸೃಷ್ಟಿಸಿದೆ.

‘ನಾರಾಯಣಗೌಡರು ಬಿಜೆಪಿ ಯಿಂದಲೇ ಸ್ಪರ್ಧಿಸುತ್ತಾರೆ ಎಂಬ ವಿಶ್ವಾಸವಿದೆ. ನಮ್ಮ ವರಿಷ್ಠರು ಅವರ ಜೊತೆ ಚರ್ಚಿಸಲಿದ್ದಾರೆ’ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ ತಿಳಿಸಿದರು.

ನಾರಾಯಣಗೌಡರಿಗೆ ಸೊಲುವ ಭೀತಿ

‘ಕಳೆದ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ಕೆ.ಸಿ.ನಾರಾಯಣಗೌಡರದ್ದಲ್ಲ. ಯಡಿಯೂರಪ್ಪ ಅವರ ಮಗ ಬಿ.ವೈ.ವಿಜಯೇಂದ್ರ, ಹಾಸನ ಶಾಸಕ ಪ್ರೀತಂಗೌಡ ಕೆ.ಆರ್‌.ಪೇಟೆಯಲ್ಲಿ ಕ್ಯಾಂಪ್‌ ಹಾಕಿ, ಹಣ ಹಂಚಿ ಗೆಲ್ಲಿಸಿದ್ದರು. ಆದರೆ ಈ ಬಾರಿ ಅವರಾರೂ ಬರುತ್ತಿಲ್ಲ. ಸೋಲುವ ಭೀತಿಯಿಂದ ಅವರು ಪಕ್ಷಾಂತರ ಮಾಡುತ್ತಿದ್ದಾರೆ. ಬಿಎಸ್‌ಪಿ, ಜೆಡಿಎಸ್‌, ಬಿಜೆಪಿ ಮುಗಿಸಿ ಈಗ ಕಾಂಗ್ರೆಸ್‌ ಕದ ತಟ್ಟುತ್ತಿದ್ದಾರೆ’ ಎಂದು ಕೆ.ಆರ್‌.ಪೇಟೆಯ ಜೆಡಿಎಸ್‌ ನಾಯಕ ಕೃಷ್ಣೇಗೌಡ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.