ಮಂಡ್ಯ: ‘ಕೃಷ್ಣರಾಜಸಾಗರ ಜಲಾಶಯ ಭರ್ತಿಯಾಗಿ ಒಂದೂವರೆ ತಿಂಗಳು ಕಳೆದರೂ ಮಳವಳ್ಳಿ ಮತ್ತು ಮದ್ದೂರು ತಾಲ್ಲೂಕಿನ ಕೊನೇ ಭಾಗದ ರೈತರಿಗೆ ನೀರು ತಲುಪಿಲ್ಲ. ಕೆರೆ– ಕಟ್ಟೆಗಳನ್ನು ತುಂಬಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ. ತಮಿಳುನಾಡಿಗೆ ಹೆಚ್ಚುವರಿಯಾಗಿ ನೀರು ಹರಿದು ಹೋಗುತ್ತಿದ್ದರೂ, ಇದನ್ನು ಸದ್ಬಳಕೆ ಮಾಡಿಕೊಳ್ಳುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ’ ಎಂದು ಮಳವಳ್ಳಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಜಿಲ್ಲಾ ಪಂಚಾಯಿತಿಯ ಕಾವೇರಿ ಸಭಾಂಗಣದಲ್ಲಿ ಶನಿವಾರ ನಡೆದ ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿ, ‘ನೀರು ನಿರ್ವಹಣೆಯಲ್ಲಿ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಎಡವಿದ್ದಾರೆ’ ಎಂದು ದೂರಿದರು.
ಸಚಿವ ಚಲುವರಾಯಸ್ವಾಮಿ ಮಾತನಾಡಿ, ‘ಜಲಾಶಯ ಭರ್ತಿಯಾದ ಸಂದರ್ಭದಲ್ಲೂ ಕೆರೆ–ಕಟ್ಟೆಗಳನ್ನು ತುಂಬಿಸದೇ ಇರುವುದು ಸರಿಯಲ್ಲ. ಮದ್ದೂರು ಮತ್ತು ಮಳವಳ್ಳಿ ತಾಲ್ಲೂಕಿನ ಕೊನೆಯ ಭಾಗದ ಕೆರೆಗಳಿಗೆ ನೀರು ತುಂಬಿಸಲು ನೀರು ಅಚ್ಚುಕಟ್ಟು ಪ್ರದೇಶಕ್ಕೆ ಹೋಗಿ ನಂತರ ಹೋಗಬೇಕು ಎಂದಿದ್ದರೆ ಅಥವಾ ಬೇರೆ ತೊಂದರೆಯಿದ್ದಲ್ಲಿ, ಆಯಾ ತಾಲ್ಲೂಕಿನ ಶಾಸಕರನ್ನು ಭೇಟಿ ಮಾಡಿ ತೊಂದರೆಗಳನ್ನು ನಿವಾರಿಸಬೇಕು ಎಂದರು.
ಜಿಲ್ಲೆಯಲ್ಲಿ ಈ ಬಾರಿ ಮಳೆಯಿಂದ 4 ಸಂಪೂರ್ಣ ಶಿಥಿಲ, 60 ಭಾಗಶಃ ಶಿಥಿಲ ಸೇರಿದಂತೆ ಒಟ್ಟು 66 ಮನೆಗಳಿಗೆ ಹಾನಿಯಾಗಿದೆ ಎಂದು ಜಿಲ್ಲಾಧಿಕಾರಿ ಕುಮಾರ ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘ಕೊಡುತ್ತಿರುವ ಅನುದಾನ ಕಡಿಮೆಯಿದೆ. ಹೀಗಾಗಿ ಪೂರ್ಣ ಶಿಥಿಲಗೊಂಡ ಮನೆಯ ಸಂತ್ರಸ್ತರಿಗೆ ರಾಜೀವ್‌ಗಾಂಧಿ ವಸತಿ ಯೋಜನೆಯಡಿ ಸೌಲಭ್ಯ ಕಲ್ಪಿಸಬೇಕು. ಮನೆ ಬಿದ್ದ ಸಂದರ್ಭದಲ್ಲಿ ಅಧಿಕಾರಿಗಳು ಕೂಡಲೇ ಸರ್ವೆ ಮಾಡಿಸಿ, ವಾರದೊಳಗೆ ಪರಿಹಾರ ನೀಡಬೇಕು’ ಎಂದು ತಾಕೀತು ಮಾಡಿದರು.
ಮಂಡ್ಯ ಜಿಲ್ಲೆಯಲ್ಲಿ 32,899 ಹೆಕ್ಟೇರ್ ಡೀಮ್ಡ್ ಅರಣ್ಯ ಪ್ರದೇಶವಿದ್ದು, ಈ ಪ್ರದೇಶವನ್ನು ಕಂದಾಯ ಹಾಗೂ ಅರಣ್ಯ ಇಲಾಖೆಯಿಂದ ಒಂದು ತಿಂಗಳ ಅವಧಿಯಲ್ಲಿ ಸಮೀಕ್ಷೆ ನಡೆಸಿ, ನ್ಯಾಯಾಲಯಕ್ಕೆ ವರದಿ ನೀಡಬೇಕಿರುತ್ತದೆ. ಇದನ್ನು ನಿಖರವಾಗಿ ಸಮೀಕ್ಷೆ ನಡೆಸಿ ವರದಿ ನೀಡಿ ಎಂದರು.
ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ. ರೇವಣ್ಣ ಮಾತನಾಡಿ, ‘ರಾಜ್ಯದಲ್ಲಿ 1.20 ಲಕ್ಷ ಮಂದಿ ಐಟಿ ಮತ್ತು ಜಿ.ಎಸ್.ಟಿ ಪಾವತಿದಾರರು ಎಂದು ಗೃಹಲಕ್ಷ್ಮಿ ಹಣ ತಡೆಹಿಡಿಯಲಾಗಿತ್ತು. ಈ ಕುರಿತಂತೆ ಸಭೆ ನಡೆಸಿ ದಾಖಲೆ ಪರಿಶೀಲಿಸಿ 59 ಸಾವಿರ ಮಹಿಳೆಯರು ಜಿ.ಎಸ್.ಟಿ ಪಾವತಿದಾರರಲ್ಲ ಎಂದು ತೀರ್ಮಾನಿಸಿ ಅವರಿಗೆ ಗೃಹಲಕ್ಷ್ಮಿ ಹಣ ಪಾವತಿಸಲು ಕ್ರಮವಹಿಸಲಾಗಿದೆ. ಇನ್ನುಳಿದ ಅರ್ಜಿಗಳನ್ನು ಸದ್ಯದಲ್ಲೇ ಪರಿಶೀಲಿಸಲಾಗುವುದು ಎಂದರು.
ಆರ್‌ಟಿಐ ಹೆಸರಿನಲ್ಲಿ ಕೆಲವು ವ್ಯಕ್ತಿಗಳು ಮಹಿಳಾ ಅಧಿಕಾರಿಗಳಿಗೆ ಕಿರುಕುಳ ನೀಡಿ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ. ಇಂಥವರ ವಿರುದ್ಧ ಎಸ್ಪಿ ಅವರು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು– ಪಿ.ಎಂ.ನರೇಂದ್ರಸ್ವಾಮಿ ಮಳವಳ್ಳಿ ಶಾಸಕ
ಮೈಸೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆಗಳಲ್ಲಿ ಅಪಘಾತ ಹೆಚ್ಚಾಗುತ್ತಿವೆ. ಸರ್ವಿಸ್ ರಸ್ತೆಗಳಿಗೂ ಸಿಸಿವಿಟಿ ಕ್ಯಾಮೆರಾ ಹಾಕಿಸಿ ಅಪೂರ್ಣ ಕಾಮಗಾರಿ ಪೂರ್ಣಗೊಳಿಸಿ– ರಮೇಶ ಬಂಡಿಸಿದ್ದೇಗೌಡ ಶ್ರೀರಂಗಪಟ್ಟಣ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.