ADVERTISEMENT

ಜೆಡಿಎಸ್‌ ಮುಖಂಡರು ತಟಸ್ಥವಾಗಿದ್ದರೆ ಒಳ್ಳೆಯದು

ಸಚಿವರಾದ ನಂತರ ಮೊದಲ ಭೇಟಿ; ಕೆ.ಸಿ.ನಾರಾಯಣಗೌಡ ಪರೋಕ್ಷ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2020, 10:55 IST
Last Updated 10 ಫೆಬ್ರುವರಿ 2020, 10:55 IST
ಕೆ.ಸಿ.ನಾರಾಯಣಗೌಡ
ಕೆ.ಸಿ.ನಾರಾಯಣಗೌಡ   

ಮಂಡ್ಯ: ‘ನಾನು ಯಾರ ವಿರುದ್ಧವೂ ಟೀಕೆ ಮಾಡಲು ಹೋಗುವುದಿಲ್ಲ. ಜೆಡಿಎಸ್‌ ಮುಖಂಡರು ನನ್ನ ವಿರುದ್ಧ ಟೀಕೆ ಮಾಡುವುದನ್ನು ಬಿಟ್ಟು ತಟಸ್ಥವಾಗಿ ಉಳಿದರೆ ಒಳ್ಳೆಯದು’ ಎಂದು ನೂತನ ಸಚಿವ ಕೆ.ಸಿ.ನಾರಾಯಣಗೌಡ ಭಾನುವಾರ ಪರೋಕ್ಷ ಎಚ್ಚರಿಕೆ ನೀಡಿದರು.

ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಮೊದಲ ಬಾರಿಗೆ ನಗರಕ್ಕೆ ಭೇಟಿ ನೀಡಿ, ಲಕ್ಷ್ಮಿ ಜನಾರ್ಧನಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಸುದ್ದಿಗಾರರ ಜೊತೆ ಮಾತನಾಡಿದರು.

‘ಬಾಯಿ ಬಿಟ್ಟರೆ ಎಲ್ಲಗೋ ಹೋಗಿಬಿಡುತ್ತದೆ, ಹೀಗಾಗಿ ಎಲ್ಲರೂ ಸುಮ್ಮನಿದ್ದರೆ ಒಳ್ಳೆಯದು. ಸಚಿವನಾದ ನಂತರ ಮೊದಲ ಬಾರಿಗೆ ಮಂಡ್ಯಕ್ಕೆ ಬರುತ್ತಿರುವುದು ಖುಷಿ ತಂದಿದೆ. ಜಿಲ್ಲೆಯ ಅಭಿವೃದ್ಧಿ ಮಾಡುವುದೇ ನನ್ನ ಗುರಿ. ಮೈಷುಗರ್‌ ಹಾಗೂ ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಮೊದಲು ಆರಂಭಿಸಬೇಕು. ಈ ಕುರಿತು ಈಗಾಗಲೇ ಜಿಲ್ಲಾಧಿಕಾರಿಗಳ ಜೊತೆ ಚರ್ಚೆ ಮಾಡಿದ್ದು ಶೀಘ್ರ ಕಾರ್ಖಾನೆ ಆರಂಭಿಸಲಾಗುವುದು’ ಎಂದು ಹೇಳಿದರು.

ADVERTISEMENT

‘ಜಿಲ್ಲೆಯಲ್ಲಿ ಬಿಜೆಪಿ ಸಂಘಟನೆಗೆ ಒತ್ತು ನೀಡಲಾಗುವುದು. ಹಂತಹಂತವಾಗಿ ಮುಖಂಡರು, ಕಾರ್ಯಕರ್ತರನ್ನು ವಿಶ್ವಾಸಕ್ಕೆ ಪಡೆದು ಪಕ್ಷ ಕಟ್ಟಲಾಗುವುದು. ಈ ಕುರಿತು ಕಾರ್ಯಕರ್ತರೊಂದಿಗೆ ಚರ್ಚಿಸಲಾಗುವುದು’ ಎಂದು ಹೇಳಿದರು.

ಖಾತೆ ಯಾವುದೇ ಆಗಿರಲಿ: ‘ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಯಾವುದೇ ಖಾತೆ ಕೊಟ್ಟರೂ ಅದನ್ನು ಸಮರ್ಥವಾಗಿ ನಿಭಾಯಿಸುತ್ತೇನೆ. ನನಗೆ ಯಾವ ಖಾತೆ ಕೊಡಬೇಕು ಎಂಬುದು ಮುಖ್ಯಮಂತ್ರಿಗಳಿಗೆ ಗೊತ್ತಿದೆ. ಇದೇ ಖಾತೆ ಬೇಕು ಎಂದು ನಾನು ಬೇಡಿಕೆ ಇಡುವುದಿಲ್ಲ. ನಮ್ಮ ಜಿಲ್ಲೆಯವರೇ ಆದ ಮುಖ್ಯಮಂತ್ರಿಗಳಿಗೆ ಹೆಸರು ತರುವ ರೀತಿಯಲ್ಲಿ ಸಚಿವನಾಗಿ ಕೆಲಸ ಮಾಡುತ್ತೇನೆ’ ಎಂದು ಹೇಳಿದರು.

ಮೊದಲ ಬಾರಿಗೆ ಬಂದ ಸಚಿವರನ್ನು ಬಿಜೆಪಿ ಕಾರ್ಯಕರ್ತರು, ಕೆಲವು ಅಧಿಕಾರಿಗಳು ಹೂಗುಚ್ಛ ನೀಡಿ ಸ್ವಾಗತಿಸಿದರು.

ಮತ್ತೆ ಸಚಿವರಾಗುವಂತೆ ಆಶೀರ್ವದಿಸಿ

ನಾರಾಯಣಗೌಡರು ಲಕ್ಷ್ಮಿಜನಾರ್ಧನ ದೇವಾಲಯಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ‘ಮುಂದಿನ ಬಾರಿಯೂ ಸಚಿವರಾಗುವಂತೆ ಆಶೀರ್ವಾದ ಮಾಡಿ ಪೂಜೆ ಸಲ್ಲಿಸಿ’ ಎಂದು ಅರ್ಚಕರನ್ನು ಕೋರಿದರು. ಜಿಲ್ಲಾಧಿಕಾರಿ ಕೋರಿಕೆಯಂತೆ ಅರ್ಚಕರು, ಆರೋಗ್ಯ, ಅತ್ಯುನ್ನತ ಪದವಿ ದೊರೆಯಲಿ ಎಂದು ಆಶೀರ್ವದಿಸಿದರು.

ಜಿಲ್ಲಾಧಿಕಾರಿಗಳ ಕೋರಿಕೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಪರ–ವಿರೋಧ ಚರ್ಚೆ ಆರಂಭವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.