ಮಂಡ್ಯ ನಗರದಲ್ಲಿ ಶನಿವಾರ ನಡೆದ ಪ್ರತಿಭಟನಾ ಸಭೆಯಲ್ಲಿ ಜಾಗೃತಿ ಕರ್ನಾಟಕದ ರಾಜ್ಯ ಮುಖಂಡ ವಾಸು ಮಾತನಾಡಿದರು
ಮಂಡ್ಯ: ‘ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ವಕ್ಫ್ ಎಂದರೆ ಧರ್ಮ, ಮಾನವೀಯತೆ ಎಂಬುದೇ ಅರ್ಥವಾಗಿಲ್ಲ. ಹಾಗಾಗಿ ಇದನ್ನು ತಿದ್ದುಪಡಿ ಮಾಡಿದ್ದಾರೆ’ ಎಂದು ಜಾಗೃತಿ ಕರ್ನಾಟಕದ ರಾಜ್ಯ ಮುಖಂಡ ವಾಸು ಆಕ್ರೋಶ ವ್ಯಕ್ತಪಡಿಸಿದರು.
ನಗರದ ಮೈಷುಗರ್ ವೃತ್ತ ಸಮೀಪದ ಮೈದಾನದಲ್ಲಿ ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್‌ನಿಂದ ವಕ್ಫ್ ತಿದ್ದುಪಡಿ ವಿರೋಧಿಸಿ ಶನಿವಾರ ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
ವಕ್ಫ್ ಕಡ್ಡಾಯವಲ್ಲ ಅಥವಾ ಝಖಾತ್ ಕಡ್ಡಾಯವಲ್ಲ. ಆದರೆ ದೇವರ ಮಕ್ಕಳ ಹೆಸರಿನ ಮೂಲಕ ಇಸ್ಲಾಂ ಸಮುದಾಯದಲ್ಲಿ ನೀಡಿದ ಸ್ಥಳವನ್ನು ನೊಂದವರಿಗೆ, ಅಸಾಯಕರಿಗೆ, ಬಡವರಿಗೆ ಬಳಸಬೇಕೆಂಬುದಿದೆ. ಈ ಮಾನವೀಯತೆಯು ಬಿಜೆಪಿ ಮತ್ತು ಆರ್‌ಎಸ್‌ಎಸ್‌ನವರಿಗೆ ಗೊತ್ತಿಲ್ಲ. ಏಕೆಂದರೆ ಇವರು ಧರ್ಮವಂತರಲ್ಲ. ಇವರು ಹಿಂದೂಗಳನ್ನು ಪ್ರತಿನಿಧಿಸುವುದಿಲ್ಲ. ಜೊತೆಗೆ ರಾಷ್ಟ್ರೀಯತೆಯನ್ನು ಪ್ರತಿನಿಧಿಸುವುದಿಲ್ಲ ಎಂದು ಆರೋಪಿಸಿದರು.
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಳ್ಳದೇ ಇದ್ದವರು ಬಿಜೆಪಿ ಮತ್ತು ಆರ್‌ಎಸ್‌ಎಸ್‌ನವರು. ಹಾಗಾಗಿ ಈ ದೇಶವನ್ನು ಪ್ರತಿನಿಧಿಸುವುದಿಲ್ಲ. 2014ರಲ್ಲಿ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿ ಆದ ಮೇಲೆ ದೇಶವನ್ನು ದುರ್ಬಲಗೊಳಿಸುತ್ತಿದ್ದಾರೆ ಎಂದು ದೂರಿದರು.
ವಕ್ಫ್ ಕಾಯಿದೆಯನ್ನು ನೇರವಾಗಿ ಉಲ್ಲಂಘಿಸುವ ಮೂಲಕ ಇದರ ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನೇ ತಿದ್ದುಪಡಿ ಮಾಡಿ ಹೊಸ ಕಾಯಿದೆ ತರಲಾಗಿದೆ. ಸಂವಿಧಾನದ 14,15,16ನೇ ವಿಧಿಯನ್ನು ವಿರೋಧಿಸುವುದರಿಂದ ಈ ಸ್ವಾತಂತ್ರ್ಯ ಸಂಗ್ರಾಮ ಶುರುವಾಗಿದೆ. ಮತ್ತೆ ಚಳವಳಿ ತೀವ್ರಗೊಳಿಸಬೇಕಿದೆ. ಸಂವಿಧಾನದ ಮೂಲ ಆಶಯವೇ ಮೋದಿ ಅವರಿಗೆ ಗೊತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಗರಸಭೆ ಸದಸ್ಯರಾದ ವಸೀಂ, ಜಾಕೀರ್ ಪಾಷ, ದಸ್ತಗೀರ್, ಕರ್ನಾಟಕ ಪ್ರದೇಶ್ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಜ್ಮಾ ನಜೀರ್, ಮುಖಂಡರಾದ ಜಬೀವುಲ್ಲಾ, ಅಮ್ಜದ್ ಪಾಷ, ವಕ್ತಾರ್ ಅಹಮದ್, ಮಹಮದ್ ಕಲೀಂವುಲ್ಲಾ, ಸಿದ್ದರಾಜು, ಕೃಷ್ಣಪ್ರಸಾದ್ ಭಾಗವಹಿಸಿದ್ದರು.
‘ಬಾನು’ ಹೊಗಳದವರು ಕನ್ನಡಿಗರಾ?
ಎಸ್‌ಡಿಪಿಐ ರಾಜ್ಯ ಘಟಕದ ಅಧ್ಯಕ್ಷ ಅಬ್ದುಲ್ ಮುಜೀದ್ ಮಾತನಾಡಿ ದೇಶದಲ್ಲಿ 20 ಕೋಟಿ ಮುಸಲ್ಮಾನರಿದ್ದಾರೆ. ಈ ಕಾಯ್ದೆ ಜಾರಿಗೆ ತನ್ನಿ ಎಂಬುದನ್ನು ನರೇಂದ್ರ ಮೋದಿ ಅವರಿಗೆ ಯಾರೂ ಅರ್ಜಿ ಹಾಕಲಿಲ್ಲ. ಆದರೆ ಬಲವಂತಾಗಿ 20 ಕೋಟಿ ಮುಸಲ್ಮಾನರ ಮೇಲೆ ಕಾಯ್ದೆಯನ್ನು ಹೇರಲಾಗಿದೆ ಎಂದು ದೂರಿದರು.
‘ಕನ್ನಡಕ್ಕೆ ಬೂಕರ್ ಪ್ರಶಸ್ತಿ ತಂದುಕೊಟ್ಟ ಲೇಖಕಿ ಬಾನು ಮುಷ್ತಾಕ್ ಬಗ್ಗೆ ಸಿ.ಟಿ.ರವಿ, ಪ್ರತಾಪ ಸಿಂಹ, ಯಡಿಯೂರಪ್ಪ ಸೇರಿದಂತೆ ಯಾರು ಕೂಡ ಒಂದು ಹೊಗಳಿಕೆ ಮಾತನ್ನು ಹೇಳಲಿಲ್ಲ. ಇವರೆಲ್ಲಾ ಕನ್ನಡ ಪ್ರೇಮಿಗಳಾ’ ಎಂದು ಪ್ರಶ್ನಿಸಿದರು.
‘ಮತದಾನದ ಹಕ್ಕು ಕಿತ್ತುಕೊಳ್ಳುವ ಆತಂಕ’
ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಮಾತನಾಡಿ ‘ದೇಶದಲ್ಲಿ 37 ಲಕ್ಷ ವಕ್ಫ್ ಎಕರೆ ಇದೆ. ಕರ್ನಾಟಕದಲ್ಲಿ 6 ಲಕ್ಷಕ್ಕೂ ಹೆಚ್ಚು ಎಕರೆ ಇದೆ. ಕೇವಲ ಮುಸಲ್ಮಾನರದ್ದಷ್ಟೇ ಅಲ್ಲ ಹಿಂದೂಗಳದ್ದೂ ಇದೆ. ಆದರೆ ಮುಸ್ಲಿಂ ಅವರ ಆಸ್ತಿಯನ್ನು ಮಾತ್ರ ಕಿತ್ತುಕೊಳ್ಳಲಾಗುತ್ತಿದೆ. ವಕ್ಫ್ ಹೋರಾಟವು ಕೇವಲ ಒಂದು ಹೋರಾಟಕ್ಕೆ ಸೀಮಿತವಾಗಬಾರದು. ನಿರಂತರವಾಗಿ ಹೋರಾಟ ನಡೆಸಬೇಕು. ಇಲ್ಲವಾದರೆ ಎಲ್ಲವನ್ನೂ ಕಿತ್ತುಕೊಂಡ ಹಾಗೆ ನಿಮ್ಮ ಮತದಾನದ ಹಕ್ಕನ್ನು ಕಿತ್ತುಕೊಳ್ಳುತ್ತಾರೆ. ಹಾಗಾಗಿ ಬೀದಿಗಿಳಿದು ಪ್ರತಿಭಟನೆ ನಡೆಸೋಣ ಎಂದು ಕರೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.