ದರ್ಶನ್ ಪುಟ್ಟಣ್ಣಯ್ಯ
ಪಾಂಡವಪುರ: ತಾಲ್ಲೂಕಿನ ಕೆರೆತೊಣ್ಣೂರು ಮೊರಾರ್ಜಿ ವಸತಿ ಶಾಲೆಗೆ ಗುರುವಾರ ರಾತ್ರಿ ದಿಢೀರ್ ಭೇಟಿ ನೀಡಿದ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಅಲ್ಲಿನ ಅವ್ಯವಸ್ಥೆಯನ್ನು ಕಣ್ಣಾರೆ ಕಂಡು ವಾರ್ಡ್‌ನ್‌ಗೆ ದೂರವಾಣಿ ಕರೆ ಮಾಡಿ ತರಾಟೆಗೆ ತೆಗೆದುಕೊಂಡರು.
ಶಾಸಕ ಭೇಟಿ ನೀಡಿದ ಸಂದರ್ಭ ವಾರ್ಡನ್ ಇರಲಿಲ್ಲ. ಹಾಸ್ಟೆಲ್ ವಿದ್ಯಾರ್ಥಿಗಳು ಶಾಸಕರ ಬಳಿ ತಮ್ಮ ಸಮಸ್ಯೆಗಳನ್ನು ತೋಡಿಕೊಂಡರು.
ಇದರಿಂದ ಕೆರಳಿದ ಶಾಸಕ ದರ್ಶನ್, 'ವಾರ್ಡ್‌ನ್ ಅಂದ್ರೆ ನಿನ್ನ ಜವಾಬ್ದಾರಿ ಏನು? ನೀನು ವಾಸ ಎಲ್ಲಿರಬೇಕು. ಮಕ್ಕಳು ಹೇಳುತ್ತಿದ್ದಾರೆ. ನೀನು ನಿನ್ನೆ ಬಂದು ಹೋಗಿದ್ದೀಯ, ಆದರೆ ಇದುವರೆಗೂ ಬಂದಿಲ್ಲ ನಿಮ್ಮ ಅಮ್ಮ ಏಕೆ ಇಲ್ಲಿರಬೇಕು. ನಿಮ್ಮಮ್ಮನಿಗೂ ಹಾಸ್ಟಲ್‌ಗೂ ಏನು ಸಂಬಂಧ, ಏನ್ ಫ್ಯಾಮಿಲಿ ಬಿಸಿನೆಸ್ ಮಾಡ್ತಿದ್ದಿಯಾ?’ ಎಂದು ತರಾಟೆಗೆ ತೆಗೆದುಕೊಂಡರು.
‘ನಿಮ್ಮಮ್ಮನ ಇಲ್ಲಿ ಬಿಟ್ಟು ನೀನು ಬೇರೆ ಯಾವ ಬಿಸಿನೆಸ್ ಮಾಡ್ತಿದ್ದೀಯಾ? ನೀನಾಗಲಿ, ನಿಮ್ಮ ಕುಟುಂಬದವರು ಯಾರೂ ಇನ್ನು ಮುಂದೆ ಇಲ್ಲಿಗೆ ಕಾಲು ಹಾಕುವ ಆಗಿಲ್ಲ. ಬಂದರೆ ಕಾಲು ಕತ್ತರಿಸಿಬಿಡ್ತಿನಿ’ ಎಂದು ಗದರಿದರು.
ಬಳಿಕ ಮಕ್ಕಳ ಮತ್ತಷ್ಟು ಸಮಸ್ಯೆಗಳನ್ನು ಆಲಿಸಿದರು.
‘ವಾರ್ಡ್‌ನ್ ಅಮ್ಮ ನಮ್ಮನ್ನು ಗದರಿಸುತ್ತಾರೆ. ಬೆದರಿಕೆಯಿಂದ ನಮ್ಮನ್ನು ಇಟ್ಟಿದ್ದಾರೆ. ಹಾಲಿಗೆ ಹೆಚ್ಚು ನೀರು ಬೆರೆಸಿಕೊಡುತ್ತಾರೆ. ಮಧ್ಯಾಹ್ನದ ಚಪಾತಿಯನ್ನು ರಾತ್ರಿ ಕೊಡುತ್ತಾರೆ. ಮೆನು ಪ್ರಕಾರ ತಿಂಡಿ, ಊಟ ಕೊಡುವುದಿಲ್ಲ ಎಂದು ಸೇರಿದಂತೆ ಹಲವು ಸಮಸ್ಯೆಗಳನ್ನು ಅಲವತ್ತುಕೊಂಡರು.
ಶಾಸಕರು ಮಾತನಾಡಿ ‘ಇನ್ನು ಮುಂದೆ ಹೆದರಬೇಡಿ, ನಿಮಗೆ ಮೆನು ಪ್ರಕಾರವೇ ತಿಂಡಿ, ಊಟ ಕೊಡುತ್ತಾರೆ. ವಾರ್ಡನ್ ಅಮ್ಮ ಇಲ್ಲಿ ಇರುವುದಿಲ್ಲ. ಧೈರ್ಯವಾಗಿರಿ, ನಿಮಗೆ ಸಮಸ್ಯೆ ಎದುರಾದರೆ ತಕ್ಷಣ ನನಗೆ ಕರೆ ಮಾಡಿ’ ಎಂದು ಧೈರ್ಯ ತುಂಬಿ ಸಾಂತ್ವನ ಹೇಳಿದರು.
ಅಡುಗೆ ಮನೆಗೆ ತೆರಳಿ ‘ಮಕ್ಕಳಿಗೆ ಮೆನು ಪ್ರಕಾರವೇ ತಿಂಡಿ ಊಟ ನೀಡಿ, ಯಾರಿಗೂ ಹೆದರಬೇಡಿ, ನಿಮ್ಮ ಸಮಸ್ಯೆಗಳಿದ್ದರೆ ನನ್ನೊಂದಿಗೆ ಹೇಳಿಕೊಳ್ಳಿ’ ಎಂದು ಅಡುಗೆ ಮಾಡುವವರಿಗೆ ಧೈರ್ಯ ತುಂಬಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.