ADVERTISEMENT

ಗಣಿ ಸ್ಫೋಟ ನಡೆಯುತ್ತಿದ್ದರೂ ಕೆಆರ್‌ಎಸ್ ಹೇಗೆ ಸುರಕ್ಷಿತ: ಸಂಸದೆ ಸುಮಲತಾ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 14 ಜುಲೈ 2021, 14:28 IST
Last Updated 14 ಜುಲೈ 2021, 14:28 IST
ಸಂಸದೆ ಸುಮಲತಾ ಬುಧವಾರ ಕೆಆರ್‌ಎಸ್‌ ಜಲಾಶಯ ಪರಿಶೀಲಿಸಿದರು
ಸಂಸದೆ ಸುಮಲತಾ ಬುಧವಾರ ಕೆಆರ್‌ಎಸ್‌ ಜಲಾಶಯ ಪರಿಶೀಲಿಸಿದರು   

ಮಂಡ್ಯ: ‘ಬೇಬಿಬೆಟ್ಟದಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆಯಿಂದ ಕೆಆರ್‌ಎಸ್‌ ಜಲಾಶಯಕ್ಕೆ ಧಕ್ಕೆ ಇಲ್ಲ ಎಂದು ಯಾವ ಸಂಸ್ಥೆಯೂ ಹೇಳಿಲ್ಲ. ಆದರೂ ಜಲಾಶಯ ಸುರಕ್ಷಿತವಾಗಿದೆ ಎಂದು ಹೇಗೆ ಸ್ಪಷ್ಟನೆ ನೀಡುತ್ತೀರಿ’ ಎಂದು ಸಂಸದೆ ಸುಮಲತಾ ಬುಧವಾರ ನಿಗಮದ ಅಧಿಕಾರಿಗಳನ್ನು ಪ್ರಶ್ನಿಸಿದರು.

ಕೆಆರ್‌ಎಸ್‌ ಜಲಾಶಯಕ್ಕೆ ಭೇಟಿ ನೀಡಿ, ಸುರಕ್ಷತೆ ಪರಿಶೀಲಿಸಿ ನಂತರ ಅಧಿಕಾರಿಗಳ ಜೊತೆ ಸಭೆ ನಡೆಸಿದರು.

‘ಕೆಆರ್‌ಎಸ್‌ ಆಸುಪಾಸಿನಲ್ಲಿ ನಡೆಯುತ್ತಿರುವ ಸ್ಫೋಟದಿಂದ ಜಲಾಶಯಕ್ಕೆ ಧಕ್ಕೆ ಇದೆ ಎಂಬುದನ್ನು ಭೂವಿಜ್ಞಾನಿಗಳು, ಎಂಜಿನಿಯರ್‌ಗಳು ತಿಳಿಸಿದ್ದಾರೆ. ಅದರ ಆಧಾರದ ಮೇಲೆಯೇ ನಾನು ಕೆಆರ್‌ಎಸ್‌ ಬಿರುಕು ಬಿಟ್ಟಿದೆ ಎಂದು ಹೇಳಿಕೆ ನೀಡಿದ್ದೇನೆ. ಈಗಲೂ ನನ್ನ ಹೇಳಿಕೆಗೆ ಬದ್ಧಳಾಗಿದ್ದೇನೆ. ಆದರೆ ನೀರಾವರಿ ನಿಗಮದ ಅಧಿಕಾರಿಗಳು ಜಲಾಶಯ ಸುರಕ್ಷಿತವಾಗಿದೆ ಎಂದು ಸ್ಪಷ್ಟನೆ ನೀಡಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ’ ಎಂದರು.

ADVERTISEMENT

‘ನಾನು ಜಲಾಶಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮೇಲ್ನೋಟಕ್ಕೆ ಯಾವುದೇ ರೀತಿಯಾದ ಬಿರುಕು ಕಾಣಲಿಲ್ಲ. ಆದರೆ ಒಳಗೆ ಬಿರುಕು ಇರುವ ಕಾರಣದಿಂದಲೇ ಕಳೆದ ವರ್ಷ ₹ 76 ಕೋಟಿ ವೆಚ್ಚದಲ್ಲಿ ಬಿರುಕು ಮುಚ್ಚುವ ಕಾಮಗಾರಿ ನಡೆಸಲಾಗಿದೆ. ಹೀಗಾಗಿ ಬಿರುಕು ಇಲ್ಲವೇ ಇಲ್ಲ ಎಂದು ಹೇಳುವುದನ್ನು ನಾನು ಒಪ್ಪುವುದಿಲ್ಲ. ಇದರ ಬಗ್ಗೆ ಸಂಪೂರ್ಣ ತನಿಖೆ ನಡೆಯಬೇಕು, ಜೊತೆಗೆ ಕಳೆದ ವರ್ಷ ನಡೆಸಿರುವ ಕಾಮಗಾರಿಯ ಸಂಪೂರ್ಣ ವಿವರ, ರಶೀತಿಗಳನ್ನು ನನಗೆ ಸಲ್ಲಿಸಬೇಕು’ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

‘ನಿಗಮದ ಅಧಿಕಾರಿಗಳು ಕೇವಲ ಜಲಾಶಯದ ಆವರಣಕ್ಕೆ ಮಾತ್ರ ಸೀಮಿತವಾಗಿದ್ದಾರೆ. ಆದರೆ ಆಸುಪಾಸಿನಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯ ಬಗ್ಗೆ ಮಾಹಿತಿ ಇಲ್ಲ. ಕಲ್ಲು ಗಣಿ ಸ್ಫೋಟದಿಂದ ಜಲಾಶಯಕ್ಕೆ ತೊಂದರೆ ಇರುವ ಯಾವುದೇ ದೂರು ನೀಡಿಲ್ಲ, ಈ ಬಗ್ಗೆ ಗಣಿ ಇಲಾಖೆ ಅಧಿಕಾರಿಗಳ ಬಗ್ಗೆ ಚರ್ಚಿಸಿಲ್ಲ. ಸಮನ್ವಯತೆಗಾಗಿ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ಟಾಸ್ಕ್‌ಫೋರ್ಸ್‌ ಸಮಿತಿ ರಚನೆ ಮಾಡಬೇಕು’ ಎಂದರು.

ಪರೀಕ್ಷಾರ್ಥ ಸ್ಫೋಟ ಬೇಕು: ‘ಗಣಿಗಾರಿಕೆಯಿಂದ ಜಲಾಶಯಕ್ಕೆ ಧಕ್ಕೆಯಾಗುವ ಸಾಧ್ಯತೆ ಇದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಮತ್ತು ಉಸ್ತುವಾರಿ ಕೇಂದ್ರ ಕೇವಲ ಶಿಫಾರಸುಗಳನ್ನಷ್ಟೇ ಮಾಡಿದೆ. ಆದರೆ ಈ ಬಗ್ಗೆ ವೈಜ್ಞಾನಿಕ ರೀತಿಯಲ್ಲಿ ಪರೀಕ್ಷೆ ನಡೆಯಬೇಕಾಗಿದೆ. ಅದಕ್ಕಾಗಿ ಪರೀಕ್ಷಾರ್ಥ ಸ್ಫೋಟ ನಡೆಯಬೇಕು. ಇದಕ್ಕೆ ವಿರೋಧಿಸುತ್ತಿರುವ ರೈತರನ್ನು ಮನವೊಲಿಸಲಾಗುವುದು’ ಎಂದರು.

ಬೇಬಿಬೆಟ್ಟಕ್ಕೆ ಬೇಟಿ: ನಂತರ ಬೇಬಿಬೆಟ್ಟದಲ್ಲಿರುವ ಗಣಿಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಅಲ್ಲಿ ಪರ–ವಿರೋಧ ಘೋಷಣೆಗಳು ಕೇಳಿ ಬಂದವು. ಗಣಿಗಾರಿಕೆಗೆ ಅವಕಾಶ ನೀಡಬೇಕು ಎಂದು ಕೆಲವರು ಕೂಗಿದರೆ ಇನ್ನೂ ಕೆಲವರು ಗಣಿಗಾರಿಕೆ ನಿಷೇಧಿಸಬೇಕು ಎಂದು ಕೂಗಿದರು.

ಬದಲಾದ ಸಂಸದೆ ಮಾತು
ಬುಧವಾರ ಬೆಳಿಗ್ಗೆ ಮೈಸೂರಿನಲ್ಲಿ ಸುಮಲತಾ ‘ಕೆಆರ್‌ಎಸ್‌ ಬಿರುಕು ಬಿಟ್ಟಿದೆ ಎಂದು ನಾನು ಹೇಳಿಯೇ ಇಲ್ಲ’ ಎಂದಿದ್ದರು. ಆದರೆ ಮಧ್ಯಾಹ್ನ ಕೆಆರ್‌ಎಸ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತು ಬದಲಿಸಿದರು. ‘ನನ್ನ ಹೇಳಿಕೆಯನ್ನು ತಿರುಚಲಾಗಿದೆ, ಜಲಾಶಯ ಬಿರುಕು ಬಿಟ್ಟಿದೆ ಎಂದು ಈಗಲೂ ಹೇಳುತ್ತೇನೆ. ನನ್ನ ಹೇಳಿಗೆ ಎಂದಿಗೂ ಬದಲಾಗುವುದಿಲ್ಲ’ ಎಂದರು.

ಜಲಾಶಯದ ಸುತ್ತ ಭದ್ರತೆ ವೈಫಲ್ಯ
‘ಕೆಆರ್‌ಎಸ್‌ ಸುತ್ತಲೂ ಭದ್ರತೆಯ ವೈಫಲ್ಯ ಕಂಡು ಬರುತ್ತಿದೆ, ಹಿನ್ನೀರು ಪ್ರದೇಶದ ಮೂಲಕ ಯಾರು ಬೇಕಾದರೂ ಒಳ ಬರಬಹುದು. ಸುತ್ತಮುತ್ತ ಜನರು ಪಾರ್ಟಿ ಮಾಡುತ್ತಿದ್ದರೂ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಸುಮಲತಾ ಹೇಳಿದರು.

‘ಜಲಾಶಯದ ಸುತ್ತಲೂ ಸ್ಫೋಟಕಗಳ ಸಾಗಣೆ ನಡೆಯುತ್ತಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಕಾವೇರಿ ನೀರಾವರಿ ನಿಗಮ ಹಾಗೂ ಪೊಲೀಸರ ನಡುವೆ ಸಮನ್ವಯತೆ ಇಲ್ಲದ ಕಾರಣ ಭದ್ರತಾ ವೈಫಲ್ಯ ಎದ್ದು ಕಾಣುತ್ತಿದೆ’ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.