
ಮಂಡ್ಯ: ಮುದ್ದನಘಟ್ಟ ಗ್ರಾಮದ ಸ.ನಂ.48ರ ಜಮೀನನ್ನು ಭೂ ಸ್ವಾಧೀನ ಪ್ರಕ್ರಿಯೆಯಿಂದ ಕೈ ಬಿಡಲು ಆಗ್ರಹಿಸಿ ಗ್ರಾಮಸ್ಥರು ತಾಲ್ಲೂಕು ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.
ತಾಲ್ಲೂಕಿನ ಬಸರಾಳು ಹೋಬಳಿ ವ್ಯಾಪ್ತಿಯ ಮುದ್ದನಘಟ್ಟ ಗ್ರಾಮದ ಸುಮಾರು 150 ಎಕರೆ ಜಮೀನು ಪರಿಶಿಷ್ಟ ಜಾತಿ ಮತ್ತು ಒಕ್ಕಲಿಗ ಸಮುದಾಯಕ್ಕೆ ಸೇರಿದ್ದು, ಸುಮಾರು 69 ವರ್ಷಗಳಿಂದಲೂ ಉಳುಮೆ ಮಾಡಿಕೊಂಡು ಬಂದಿದ್ದೇವೆ. ಕೆಲವರಿಗೆ ಈಗಾಗಲೇ ಮಂಜೂರಾತಿ ಪಹಣಿ ನಮೂದಾಗಿರುತ್ತದೆ. ಕೆಲವರಿಗೆ ಮಂಜೂರಾತಿ ಬಾಕಿ ಇದೆ. ನಮ್ಮ ಜಮೀನು ಉಳಿಸಿಕೊಡಬೇಕು ಎಂದು ಆಗ್ರಹಿಸಿದರು.
ಸಾಲ ಮಾಡಿ ಕೊಳವೆಬಾವಿ ಕೊರೆಸಿಕೊಂಡು ಕಬ್ಬು, ಭತ್ತ, ರಾಗಿ, ತೆಂಗು, ಅಡಿಕೆ ಬೆಳೆ ಸೇರಿದಂತೆ ಹಲವು ಬೆಳೆಗಳನ್ನು ಬೆಳೆದು ಜೀವನ ಸಾಗಿಸುತ್ತಿದ್ದೇವೆ. ಆದರೆ ಕಂದಾಯ ಇಲಾಖೆಯವರು ರೈತರಿಗೆ ಯಾವುದೇ ಮಾಹಿತಿ ನೀಡದೇ ಭೂಸ್ವಾಧೀನ ಮಾಡಿಕೊಳ್ಳಲು ಬಂದು, ಸರ್ವೆ ಕಾರ್ಯ ಮಾಡಿದ್ದಾರೆ ಎಂದು ಆರೋಪಿಸಿದರು.
‘ನಮಗೆ ಈ ಜಮೀನೇ ಜೀವಾಳವಾಗಿರುವುದರಿಂದ ಯಾವುದೇ ಕೈಗಾರಿಕಾ ಪ್ರದೇಶಕ್ಕೆ ಭೂಸ್ವಾಧೀನ ಪಡಿಸಿಕೊಳ್ಳದೆ ನಮ್ಮ ಜಮೀನು ನಮಗೆ ಉಳಿಸಿಕೊಡಬೇಕು. ಇಲ್ಲವಾದರೆ ಮುಂದೆ ಆಗುವ ಅನಾಹುತಕ್ಕೆ ಸರ್ಕಾರ ಹಾಗೂ ಜಿಲ್ಲಾಡಳಿತವೇ ನೇರ ಹೊಣೆಯಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.
ಗ್ರಾಮಸ್ಥರಾದ ಮಹಾಲಿಂಗೇಗೌಡ, ಮೂಡಲಗಿರಿಯಯ್ಯ, ಜಯರಾಮು, ರಾಮಕೃಷ್ಣ, ವೆಂಕಟೇಶ್, ಮರೀಗೌಡ, ಶಿವು, ಹೊಂಬಾಳಮ್ಮ, ರತ್ನಮ್ಮ, ಪುಟ್ಟಮ್ಮ, ಸರೋಜಮ್ಮ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.