ADVERTISEMENT

ಕರ್ನಾಟಕ ಬಜೆಟ್ | ಮಂಡ್ಯದ ಮೈಷುಗರ್ ಕಾರ್ಖಾನೆ; ಸಿಹಿ ಸುದ್ದಿ ಕೊಡ್ತಾರಾ ಸಿ.ಎಂ?

ಬಜೆಟ್‌ನಲ್ಲಿ ಅನುದಾನ ಘೋಷಣೆ ಮಾಡುವ ವಿಶ್ವಾಸ, ಪೂರ್ವ ಸಿದ್ಧತೆ ಇಲ್ಲದಿರುವುದಕ್ಕೆ ಅಸಮಾಧಾನ

ಎಂ.ಎನ್.ಯೋಗೇಶ್‌
Published 18 ಫೆಬ್ರುವರಿ 2022, 19:30 IST
Last Updated 18 ಫೆಬ್ರುವರಿ 2022, 19:30 IST
ಆಳೆತ್ತರದ ಗಿಡಗಂಟಿಯೊಳಗೆ ಮೈಷುಗರ್‌ ಕಾರ್ಖಾನೆ
ಆಳೆತ್ತರದ ಗಿಡಗಂಟಿಯೊಳಗೆ ಮೈಷುಗರ್‌ ಕಾರ್ಖಾನೆ   

ಮಂಡ್ಯ: ಐತಿಹಾಸಿಕ ಮೈಷುಗರ್‌ ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲೇ ಆರಂಭಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 4 ತಿಂಗಳ ಹಿಂದೆಯೇ ಪ್ರಕಟಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಜೆಟ್‌ನಲ್ಲಿ ಮುಖ್ಯಮಂತ್ರಿಗಳು ಮೈಷುಗರ್‌ ಆರಂಭಿಸಲು ಎಷ್ಟು ಹಣ ಮೀಸಲಿಡುತ್ತಾರೆ ಎಂಬ ಕುತೂಹಲ ರೈತರು ಹಾಗೂ ರೈತ ಸಂಘಟನೆಗಳಲ್ಲಿ ಮೂಡಿದೆ.

ಈಚೆಗೆ ಆದಿಚುಂಚನಗಿರಿಗೆ ಭೇಟಿ ನೀಡಿದ್ದ ಮುಖ್ಯಮಂತ್ರಿಗಳು ‘ಈ ವರ್ಷದಿಂದಲೇ ಕಾರ್ಖಾನೆ ಆರಂಭವಾಗಲಿದೆ. ಅಧಿಕಾರಿಗಳಿಂದ ವರದಿ ಪಡೆದಿದ್ದು ಕಾರ್ಖಾನೆ ಆರಂಭಿಸಲು ಬೇಕಾದ ಹಣಕಾಸು ಹೊಂದಿಸಲಾಗುತ್ತಿದೆ’ ಎಂದು ಹೇಳಿದ್ದರು. ಕಾರ್ಖಾನೆ ಆರಂಭವಾಗುವುದು ಖಚಿತ ಎಂಬ ಭರವಸೆ ಹೊಂದಿರುವ ರೈತರು ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಮಂಡಿಸುವ ಬಜೆಟ್‌ನತ್ತ ಚಿತ್ತ ಹರಿಸಿದ್ದಾರೆ.

ಈ ವರ್ಷ ಎಂದರೆ ಮುಂದಿನ ಜೂನ್‌ ತಿಂಗಳಲ್ಲಿ ಕಾರ್ಖಾನೆ ಕಾರ್ಯಾರಂಭ ಮಾಡಬೇಕು. ಕಾರ್ಖಾನೆ ಆರಂಭಗೊಳ್ಳಲು ಕನಿಷ್ಠ ನಾಲ್ಕೈದು ತಿಂಗಳ ಪೂರ್ವಸಿದ್ಧತೆಯ ಅವಶ್ಯಕತೆ ಇದೆ. ಮೈಷುಗರ್‌ ಆವರಣ ಗಿಡಗಂಟಿಗಳಿಂದ ತುಂಬಿ ತುಳುಕುತ್ತಿದ್ದು ಪಾಳು ಕೊಂಪೆಯಂತಾಗಿದೆ, ಸ್ವಚ್ಛತೆಯೂ ಇಲ್ಲವಾಗಿದೆ. ಕಾರ್ಖಾನೆಯ ಆವರಣಕ್ಕೆ ತೆರಳಿದರೆ ಕಾರ್ಖಾನೆ ಆರಂಭವಾಗುವ ಲಕ್ಷಣಗಳು ಕಾಣುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಈ ವರ್ಷದಿಂದಲೇ ಕಾರ್ಖಾನೆ ಆರಂಭ ಸಾಧ್ಯವೇ ಎಂಬ ಪ್ರಶ್ನೆಗಳು ರೈತ ಮುಖಂಡರನ್ನು ಕಾಡುತ್ತಿವೆ.

ADVERTISEMENT

ಸದ್ಯ ಕಾರ್ಖಾನೆಯಲ್ಲಿ 1 ಮಿಲ್‌ ಸುಸ್ಥಿತಿಯಲ್ಲಿದ್ದು ಅದನ್ನು ಯಾವುದೇ ಸಂದರ್ಭದಲ್ಲಿ ಆರಂಭಿಸಬಹುದು. ಆದರೆ ಅದಕ್ಕೆ ಬೇಕಾಗುವ ಯಂತ್ರಗಳ ಪರೀಕ್ಷೆ, ಬಾಯ್ಲರ್‌ ಪರಿಶೀಲನೆ ನಡೆಯಬೇಕು. ಎಲ್ಲಕ್ಕಿಂತಲೂ ಮುಖ್ಯವಾಗಿ ದಿಢೀರನೆ ಕಾರ್ಖಾನೆ ಆರಂಭಿಸಿದರೆ ಕಾರ್ಖಾನೆ ಮುನ್ನಡೆಸಲು ಕಾರ್ಮಿಕರು, ತಂತ್ರಜ್ಞರಿಲ್ಲ. ಇರುವ ಕಾರ್ಮಿಕರನ್ನು ಸ್ವಯಂ ನಿವೃತ್ತಿ ಕೊಟ್ಟು ಕಳುಹಿಸಲಾಗಿದೆ. ಇಂತಹ ಸಂದರ್ಭದಲ್ಲಿ ಕಾರ್ಖಾನೆ ಆರಂಭಿಸುವ ನಿರ್ಧಾರ ಪ್ರಕಟಿಸಿದರೆ ಅದು ಸಾಧ್ಯವೇ ಎಂಬ ಪ್ರಶ್ನೆಯೂ ಮೂಡಿದೆ.

ಸರ್ಕಾರಿ ಸ್ವಾಮ್ಯದಲ್ಲೇ ಕಾರ್ಖಾನೆ ಆರಂಭಿಸುವ ನಿರ್ಧಾರ ಕೈಗೊಂಡ ನಂತರ ಕಾರ್ಖಾನೆ ಆವರಣದಲ್ಲಿ ಯಾವುದೇ ಚಟುವಟಿಕೆ ನಡೆದಿಲ್ಲ. ಸ್ಥಳೀಯ ಜನಪ್ರತಿನಿಧಿಗಳು, ಜಿಲ್ಲಾ ಉಸ್ತುವಾರಿ ಸಚಿವರು ಯಾವುದೇ ಸಭೆ ನಡೆಸಿಲ್ಲ. ಪೂರ್ವ ಸಿದ್ಧತೆ ಮಾಡಿಕೊಳ್ಳದ ಕಾರಣ ಹಲವು ಅನುಮಾನಗಳಿವೆ.

ಸದ್ಯ ನಡೆಯುತ್ತಿರುವ ವಿಧಾನಮಂಡಲ ಅಧಿವೇಶನದಲ್ಲಿ ಮೈಷುಗರ್ ಆರಂಭ ಕುರಿತಂತೆ ವಿಧಾನ ಪರಿಷತ್ ಸದಸ್ಯರಾದ ಕೆ.ಟಿ.ಶ್ರೀಕಂಠೇಗೌಡ, ಮರಿತಿಬ್ಬೇಗೌಡ ಹಾಗೂ ತೇಜಸ್ವಿನಿ ರಮೇಶ್‌ ಮಾತನಾಡಿದ್ದಾರೆ. ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರೂ ಮಾತನಾಡುವ ಸಾಧ್ಯತೆ ಇದೆ. ಇದಕ್ಕೆ ಮುಖ್ಯಮಂತ್ರಿಗಳೇ ಉತ್ತರ ನೀಡುತ್ತಾರೆ ಎಂದು ಮೂಲಗಳು ತಿಳಿಸಿವೆ.

ಮುಖ್ಯಮಂತ್ರಿ ಸಭೆ: ವಿಧಾನಮಂಡಲ ಅಧಿವೇಶನ ಆರಂಭಗೊಳ್ಳುವುದಕ್ಕೂ ಮೊದಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರಿಗಳ ಸಭೆ ನಡೆಸಿ ಮೈಷುಗರ್‌ ಕುರಿತಂತೆ ಮಾಹಿತಿ ಪಡೆದಿದ್ದಾರೆ. ಬಜೆಟ್‌ನಲ್ಲಿ ಮಂಡ್ಯ ಜಿಲ್ಲೆಯ ಜನರಿಗೆ ಸಿಹಿ ಸುದ್ದಿ ನೀಡುತ್ತಾರೆ ಎಂಬ ವಿಶ್ವಾಸ ಜಿಲ್ಲೆಯ ಜನಪ್ರತಿನಿಧಿಗಳಲ್ಲಿದೆ.

‘ಮುಖ್ಯಮಂತ್ರಿಗಳು ಸರ್ಕಾರಿ ಸ್ವಾಮ್ಯದಲ್ಲಿ ಕಾರ್ಖಾನೆ ಆರಂಭಿಸುವ ಭರವಸೆ ನೀಡಿದ ನಂತರ ಕಾರ್ಖಾನೆ ಆವರಣದಲ್ಲಿ ಯಾವುದೇ ಚಟುವಟಿಕೆ ಆರಂಭವಾಗಿಲ್ಲ. ಜೊತೆಗೆ ತಾಂತ್ರಿಕ ಅನುಭವವಳ್ಳ ಅಧಿಕಾರಿಗಳ ನೇಮಕವೂ ಆಗಿಲ್ಲ, ಈ ಬಗ್ಗೆ ಮುಖಂಡರಲ್ಲಿ ಅಸಮಾಧಾನವಿದೆ. ಆದರೂ ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ ಮೈಷುಗರ್ ಕುರಿತು ಉತ್ತಮ ಕ್ರಮ ಕೈಗೊಳ್ಳುತ್ತಾರೆ ಎಂಬ ವಿಶ್ವಾಸವಿದೆ’ ಎಂದು ರೈತ ಹಿತರಕ್ಷಣಾ ಸಮಿತಿ ಮುಖಂಡರು ತಿಳಿಸಿದರು.

ಕಬ್ಬು ಬೆಳೆಗಾರರಲ್ಲಿ ಆತಂಕ
ಜಿಲ್ಲೆಯ ಹೆಚ್ಚಿನ ರೈತರು ಜೂನ್‌ ನಂತರ ಕಬ್ಬು ಕಟಾವು ಆರಂಭಿಸುತ್ತಾರೆ. ಈ ಬಾರಿ ಮೈಷುಗರ್‌ ಆರಂಭವಾಗುತ್ತದೋ, ಇಲ್ಲವೋ ಎಂಬ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಮುಖ್ಯಮಂತ್ರಿಗಳ ಭರವಸೆ ನಡುವೆಯೂ ಹಲವು ಅನುಮಾನಗಳಿವೆ. ಮೈಷುಗರ್‌ ವ್ಯಾಪ್ತಿಯ ಕಬ್ಬನ್ನು ಆಲೆಮನೆಗೆ ಸಾಗಿಸಬೇಕಾ, ಕಾರ್ಖಾನೆ ಆರಂಭವಾಗುವುದನ್ನು ಕಾಯಬೇಕಾ, ಅನ್ಯ ಕಾರ್ಖಾನೆಗಳಿಗೆ ಕಳುಹಿಸಬೇಕಾ ಎಂಬ ಪ್ರಶ್ನೆಗಳು ಕಬ್ಬು ಬೆಳೆಗಾರರಲ್ಲದ್ದು ಆತಂಕದ ಸ್ಥಿತಿ ಇದೆ.

‘ಮೂರು ತಿಂಗಳಲ್ಲಿ ಕಾರ್ಖಾನೆ ಆರಂಭವಾಗುವುದು ಅನುಮಾನ. ತುಕ್ಕು ಹಿಡಿದಿರುವ ಯಂತ್ರಗಳನ್ನು ರಿಪೇರಿ ಮಾಡುವುದಕ್ಕೇ 6 ತಿಂಗಳು ಬೇಕು. ರೈತರು ಈ ಬಾರಿ ಮೈಷುಗರ್‌ ಮರೆತು ಬೇರೆ ಕಾರ್ಖಾನೆಗೆ ಕಬ್ಬು ಸಾಗಿಸುವುದು ಒಳಿತು’ ಎಂದು ರೈತ ರಮೇಶ್‌ಗೌಡ ತಿಳಿಸಿದರು.

***
ಮುಖ್ಯಮಂತ್ರಿಗಳು ಮೈಷುಗರ್‌ ಕಾರ್ಖಾನೆಗೆ ಹೊರ ರೂಪ ನೀಡುತ್ತಾರೆ ಎಂಬ ವಿಶ್ವಾಸವಿದೆ. ಅವರು ಮೈಷುಗರ್‌ ಕುರಿತಾದ ಎಲ್ಲಾ ಮಾಹಿತಿ ಪಡೆದಿದ್ದು ಒಳ್ಳೆಯ ಸುದ್ದಿ ನೀಡುತ್ತಾರೆ.
–ಶಿವಲಿಂಗೇಗೌಡ, ಮೈಷುಗರ್‌ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.