
ಮಂಡ್ಯ: ರಾಜ್ಯದ ಸರ್ಕಾರಿ ಸ್ವಾಮ್ಯದ ಏಕೈಕ ಸಕ್ಕರೆ ಕಾರ್ಖಾನೆಯಾದ ‘ಮೈಸೂರು ಷುಗರ್ ಕಂಪನಿ’ಯಲ್ಲಿ (ಮೈಷುಗರ್) ಅವ್ಯವಹಾರ ಮತ್ತು ಅಕ್ರಮ ನೇಮಕಾತಿಗಳ ಆರೋಪಗಳ ಸಮಗ್ರ ತನಿಖೆಗೆ ಮಹಾರಾಷ್ಟ್ರದ ನಿವೃತ್ತ ಸಕ್ಕರೆ ಆಯುಕ್ತ ಶೇಖರ್ ಗಾಯಕವಾಡ ಅಧ್ಯಕ್ಷತೆಯಲ್ಲಿ ರಾಜ್ಯ ಸರ್ಕಾರ ತನಿಖಾ ಸಮಿತಿ ರಚಿಸಿದೆ.
ಪುಣೆಯ ಶುಗರ್ಸ್ ಎಂಜಿನಿಯರಿಂಗ್ ಮತ್ತು ರಿನೀವಬಲ್ ಎನರ್ಜಿ ಡಿಪಾರ್ಟ್‌ಮೆಂಟ್ ಮುಖ್ಯಸ್ಥ ರಾಜೇಂದ್ರ ಚಾಂದಗುಡೆ, ರೈತಸಂಘದ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಬೆಳಗಾವಿಯ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ನಿರ್ದೇಶಕ ಬಿ.ಎಸ್. ರಾಜಗೋಪಾಲ್, ತಾಂತ್ರಿಕ ಸಲಹೆಗಾರ ಸಿ.ಬಿ. ಪಾಟೀಲ, ಮುಜಾವರ ಬಹದ್ದೂರ್ ಅಲಿ ಇಬ್ರಾಹಿಂ ಲಾತೂರು ಈ ಸಮಿತಿ ಸದಸ್ಯರಾಗಿದ್ದಾರೆ.
2021–22ನೇ ಸಾಲಿನಿಂದ ಈವರೆಗೆ ನಡೆದಿದೆ ಎನ್ನಲಾದ ಅವ್ಯವಹಾರದಿಂದ ಕಂಪನಿಗಾದ ಆರ್ಥಿಕ ನಷ್ಟದ ಕುರಿತು ಸಮಗ್ರ ತನಿಖೆ ನಡೆಸಬೇಕು ಮತ್ತು 15 ದಿನಗಳಲ್ಲಿ ವರದಿ ಸಲ್ಲಿಸಬೇಕು ಎಂದು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ (ಸಕ್ಕರೆ) ಸೂಚಿಸಿದೆ.
ಕಬ್ಬು ಕಟಾವು ಮುಂಗಡ ಪಾವತಿ, ಕಟಾವು ಮತ್ತು ಸಾಗಣೆ, ಕಬ್ಬಿನ ತೂಕ ಮತ್ತು ಹಣ ಪಾವತಿಯಲ್ಲಿ ಅಕ್ರಮವೆಸಗಿ ಆರ್ಥಿಕ ನಷ್ಟ ಉಂಟು ಮಾಡಲಾಗಿದೆ. ಗುತ್ತಿಗೆ, ಹೊರಗುತ್ತಿಗೆ ನೌಕರರ ನೇಮಕದಲ್ಲಿ ಅಕ್ರಮ ಮತ್ತು ಮೀಸಲಾತಿ ಉಲ್ಲಂಘಿಸಲಾಗಿದೆ. 2023–24ನೇ ಸಾಲಿನಲ್ಲಿ ಕಡಿಮೆ ಬೆಲೆಗೆ ಸಕ್ಕರೆ ಮಾರಲಾಗಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು.
ಕೋಣನಹಳ್ಳಿ ಕೆರೆಯಿಂದ ನೀರು ಪೂರೈಸಲು ಪೈಪ್‌ಲೈನ್ ಅಳವಡಿಕೆಯಲ್ಲಿ ಅಕ್ರಮ, ಕಂಪನಿ ಜಾಗವನ್ನು ಅಕ್ರಮವಾಗಿ ಗುತ್ತಿಗೆ ನೀಡಿ ನಷ್ಟ ಉಂಟು ಮಾಡಲಾಗಿದೆ. ಸರ್ಕಾರಿ ಆದೇಶ ಉಲ್ಲಂಘಿಸಿ ನಿವೃತ್ತ ನೌಕರರ ಪುನರ್ ನೇಮಕ ಮಾಡಿರುವ ಬಗ್ಗೆ ದೂರು ಸಲ್ಲಿಕೆಯಾಗಿದ್ದವು.
‘ತನಿಖೆ ನಡೆಸಲು ಸರ್ಕಾರ ಮುಂದಾಗಿರುವುದು ಸ್ವಾಗತಾರ್ಹ. ಆದರೆ, ಸಮಿತಿಯಲ್ಲಿ ಕಾರ್ಖಾನೆ ವ್ಯಾಪ್ತಿಯ ಸ್ಥಳೀಯ ರೈತ ಪ್ರತಿನಿಧಿಯೊಬ್ಬರು ಇದ್ದಿದ್ದರೆ ಪಾರದರ್ಶಕ ತನಿಖೆಗೆ ಅನುಕೂಲವಾಗುತ್ತಿತ್ತು’ ಎಂದು ರೈತ ಮುಖಂಡ ಕೆ.ಬೋರಯ್ಯ ಅಭಿಪ್ರಾಯಪಟ್ಟಿದ್ದಾರೆ.
‘ನಾಗರಾಜಪ್ಪ ಅವರು ಮೈಷುಗರ್ ಅಧ್ಯಕ್ಷರಾಗಿದ್ದ (2008 - 2012) ಅವಧಿಯಲ್ಲಿ ಅಕ್ರಮ ಮತ್ತು ಭ್ರಷ್ಟಾಚಾರದಿಂದ ಕಾರ್ಖಾನೆಗೆ ₹127 ಕೋಟಿ ನಷ್ಟವಾಗಿತ್ತು. ನಷ್ಟ ವಸೂಲಾತಿಗೆ ಉಪ ಲೋಕಾಯುಕ್ತರಾಗಿದ್ದ ಬಿ.ಎಸ್. ಪಾಟೀಲ್ ಆದೇಶ ಹೊರಡಿಸಿದ್ದರು. ಅದನ್ನು ಹೈಕೋರ್ಟ್ ಈಚೆಗೆ ಎತ್ತಿ ಹಿಡಿದಿದೆ. ಆಸ್ತಿ ಜಪ್ತಿಗೆ ಸರ್ಕಾರ ತುರ್ತು ಕ್ರಮ ವಹಿಸಬೇಕು’ ಎಂದು ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಅವರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.