
ಮಂಡ್ಯ: ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ (ಎನ್.ಎಚ್-275) ಹಾಗೂ ಸರ್ವಿಸ್ ರಸ್ತೆಗಳಲ್ಲಿ ತಡರಾತ್ರಿ ಪ್ರಯಾಣಿಕರನ್ನು ತಡೆದು ಸುಲಿಗೆ, ದರೋಡೆ ಮಾಡುತ್ತಿರುವುದಕ್ಕೆ ಸಂಬಂಧಿಸಿದಂತೆ ಒಟ್ಟು 34 ಪ್ರಕರಣಗಳು ವರದಿ ಆಗಿದ್ದು 28 ಪ್ರಕರಣಗಳನ್ನು ಭೇದಿಸಲಾಗಿದೆ.
ಶಾಸಕ ಮಧು ಜಿ.ಮಾದೇಗೌಡ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಗೃಹ ಸಚಿವರು, ಈ ಹೆದ್ದಾರಿ ಸಾರ್ವಜನಿಕ ಬಳಕೆಗೆ ಮುಕ್ತಗೊಂಡ ಬಳಿಕ 2022ರಿಂದ 2025ರ ಅಂತ್ಯಕ್ಕೆ ಈ ಪ್ರಕರಣಗಳು ವರದಿಯಾಗಿವೆ ಎಂದು ಮಾಹಿತಿ ನೀಡಿದ್ದಾರೆ.
ಪ್ರಯಾಣಿಕರ ಸುಲಿಗೆಗೆ ಸಂಬಂಧಿಸಿದಂತೆ ಒಟ್ಟು 22 ಪ್ರಕರಣಗಳು ವರದಿಯಾಗಿದ್ದು 17 ಪ್ರಕರಣಗಳನ್ನು ಭೇದಿಸಲಾಗಿದೆ. ಒಟ್ಟು 34 ಆರೋಪಿಗಳನ್ನು ಬಂಧಿಸಲಾಗಿದೆ. ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ 12, ಮಂಡ್ಯ ಜಿಲ್ಲೆಯಲ್ಲಿ 9 ಹಾಗೂ ಮೈಸೂರು ನಗರದಲ್ಲಿ 1 ಪ್ರಕರಣ ವರದಿಯಾಗಿದೆ.
ಹಾಗೇ, ಪ್ರಯಾಣಿಕರ ದರೋಡೆಗೆ ಸಂಬಂಧಿಸಿದಂತೆ, ವರದಿಯಾದ ಒಟ್ಟು 12 ಪ್ರಕರಣಗಳಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ 7 ಹಾಗೂ ಮಂಡ್ಯ ಜಿಲ್ಲೆಯಲ್ಲಿ 5 ಪ್ರಕರಣಗಳು ವರದಿಯಾಗಿದ್ದು 11 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. 56 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸುಲಿಗೆ ಮತ್ತು ದರೋಡೆಯನ್ನು ತಡೆಯಲು ದಿನದ 24 ಗಂಟೆಗಳಲ್ಲಿ ಮೂರು ಪಾಳಿಯಲ್ಲಿ ಹೆದ್ದಾರಿ ಗಸ್ತು ನಿಯೋಜನೆ ಸೇರಿದಂತೆ ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದಿದ್ದಾರೆ.
ಸಂಚಾರ ನಿಯಮ ಉಲ್ಲಂಘನೆ: 19.27 ಲಕ್ಷ ಪ್ರಕರಣ ದಾಖಲು
ಮೈಸೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಳೆದ ಎರಡು ವರ್ಷಗಳಲ್ಲಿ ಒಟ್ಟು ₹19.27 ಲಕ್ಷ ಸಂಚಾರ ನಿಯಮಗಳ ಉಲ್ಲಂಘನೆ ಪ್ರಕರಣಗಳು ದಾಖಲಾಗಿವೆ.
2024ರಲ್ಲಿ 13,83,861 ಹಾಗೂ 2025ರಲ್ಲಿ 5,43,175 ಪ್ರಕರಣಗಳು ದಾಖಲಾಗಿವೆ.
2024ರಲ್ಲಿ 13,83,861 ಪ್ರಕರಣಗಳು ವರದಿಯಾಗಿದ್ದು, ₹93,75,42,500 ದಂಡ ವಿಧಿಸಲಾಗಿದೆ. ದಂಡದ ಮೊತ್ತ ₹8,38,80,500 ಸಂಗ್ರಹಿಸಲಾಗಿದ್ದು ₹85,36,62,000 ಬಾಕಿ ಇದೆ. 2025ರಲ್ಲಿ 5,43,175 ಪ್ರಕರಣಗಳು ವರದಿಯಾಗಿದ್ದು, ₹40,10,76,500 ದಂಡ ವಿಧಿಸಲಾಗಿದೆ. ದಂಡದ ಮೊತ್ತ ₹4,30,73,000 ಸಂಗ್ರಹಿಸಲಾಗಿದೆ. ₹35,80,03,500 ಬಾಕಿ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.