ADVERTISEMENT

ನಾಗಮಂಗಲ: ನಾಳೆಯಿಂದ ವಿಜ್ಞಾತಂ ಉತ್ಸವ 2026

ನಿರ್ಮಲಾನಂದನಾಥ ಸ್ವಾಮೀಜಿ ಪಟ್ಟಾಭಿಷೇಕಕ್ಕೆ 13 ವರ್ಷ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2026, 5:59 IST
Last Updated 18 ಫೆಬ್ರುವರಿ 2026, 5:59 IST
ಪ್ರೊ.ಎನ್.ಎಸ್.ರಾಮೇಗೌಡ
ಪ್ರೊ.ಎನ್.ಎಸ್.ರಾಮೇಗೌಡ   

ನಾಗಮಂಗಲ: ತಾಲ್ಲೂಕಿನ ಪುರಾಣ ಪ್ರಸಿದ್ಧ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ 72ನೇ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿಯವರ 13ನೇ ವರ್ಷದ ಪಟ್ಟಾಭಿಷೇಕದ ಅಂಗವಾಗಿ ವಿಜ್ಞಾತಂ - 2026 ಕಾರ್ಯಕ್ರಮ ಫೆ.19 ಮತ್ತು 20ರಂದು ಜರುಗಲಿದೆ ಎಂದು ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೊ.ಎನ್.ಎಸ್.ರಾಮೇಗೌಡ ತಿಳಿಸಿದರು.

ಪಟ್ಟಣದ ಆದಿಚುಂಚನಗಿರಿ ಕಲಾ ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಶ್ರೀಗಳ ಪಟ್ಟಾಭಿಷೇಕ ಮಹೋತ್ಸವದ ಅಂಗವಾಗಿ ವಿಜ್ಞಾತಂ ಉತ್ಸವದ ವಸ್ತು ಪ್ರದರ್ಶನವು ಫೆ.19ರಂದು ಬೆಳಿಗ್ಗೆ 10 ಕ್ಕೆ ಆರಂಭವಾಗಲಿದ್ದು ಕಾರ್ಯಕ್ರಮದ ಸಾನ್ನಿಧ್ಯವನ್ನು ಕೆಂಗೇರಿಯ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ನಿಶ್ಚಲಾನಂದನಾಥ ಸ್ವಾಮೀಜಿ ಹಾಗೂ ಮಲೆ ಮಹದೇಶ್ವರ ಬೆಟ್ಟ ಸಾಲೂರು ಬೃಹನ್ಮಠದ ಪೀಠಾಧಿಪತಿ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ವಹಿಸಲಿದ್ದಾರೆ. ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಕಾರ್ಯಕ್ರಮ ಉದ್ಘಾಟಿಸುವರು. ವಿಜ್ಞಾನಿ ಡಾ.ಕೆ. ಮುನಿಯಪ್ಪ ವಸ್ತು ಪ್ರದರ್ಶನ ಉದ್ಘಾಟಿಸುವರು. ಜಿಲ್ಲಾಧಿಕಾರಿ ಡಾ.ಕುಮಾರ್, ಶಾಸಕರಾದ ರವಿ ಗಣಿಗ, ಎಚ್.ಡಿ. ರಂಗನಾಥ, ಮಾಜಿ ಶಾಸಕ ಕೆ.ಸುರೇಶ್ ಗೌಡ ಹಾಗೂ ರಕ್ಷಣೆ ಮತ್ತು ಏರೋಸ್ಪೇಸ್ ವಿಶ್ಲೇಷಕ ಗಿರೀಶ್ ಲಿಂಗಣ್ಣನವರ ಪಾಲ್ಗೊಳ್ಳುವರು ಎಂದು ತಿಳಿಸಿದರು.

ADVERTISEMENT

ಮಧ್ಯಾಹ್ನ 2.30ಕ್ಕೆ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಪ್ರೊ. ಸುದರ್ಶನ್,  ಪ್ರೊ.ವಿ.ಜಯರಾಮ್, ಪ್ರೊ. ಟಿ.ಎನ್. ಬಾಲಕೃಷ್ಣೇಗೌಡ ಉಪನ್ಯಾಸ ನೀಡಲಿದ್ದಾರೆ. ಸಂಜೆ 5.30ಕ್ಕೆ ವಿಜ್ಞಾತಂ ಕಲೋತ್ಸವ ಆಯೋಜನೆಗೊಂಡಿದ್ದು ಬೇಬಿ ಚಂದ್ರವನ ಮಠದ ಪೀಠಾಧಿಪತಿ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ, ಶಾಸಕ ಎಚ್.ಸಿ. ಬಾಲಕೃಷ್ಣ, ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌದರಿ ಭಾಗವಹಿಸುವರು.

ಫೆ.20ರಂದು ಬೆಳಿಗ್ಗೆ 10.30ಕ್ಕೆ ನಡೆಯುವ ಪಟ್ಟಾಭಿಷೇಕ ಮಹೋತ್ಸವ ಹಾಗೂ ಮೆಟರಿಲ್ ಸೈನ್ಸ್ ವಿಜ್ಞಾನಿ ಡಾ.ಎಂ.ಕೆ.ಸೂರಪ್ಪ ಅವರಿಗೆ ವಿಜ್ಞಾತಂ ಪ್ರಶಸ್ತಿ ಪ್ರದಾನ ನಡೆಯಲಿದೆ. ಸಮಾರಂಭದ ಸಾನ್ನಿಧ್ಯವನ್ನು ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ, ಚಿತ್ರದುರ್ಗದ ಮಾದಾರ ಚೆನ್ನಯ್ಯ ಗುರು ಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಕಾರ್ಯಕ್ರಮ ಉದ್ಘಾಟಿಸುವರು. ವಿಜ್ಞಾತಂ ಸಂಚಯ –4 ಪುಸ್ತಕವನ್ನು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಬಿಡುಗಡೆ ಮಾಡುವರು. ಸಚಿವ ಕೆ.ಎಚ್. ಮುನಿಯಪ್ಪ, ಮಾಜಿ ಶಾಸಕ ಸಿ.ಎಸ್. ಪುಟ್ಟರಾಜು, ಜಿ.ಪಂ. ಸಿಇಒ ಕೆ.ಆರ್.ನಂದಿನಿ ಭಾಗವಹಿಸುವರು ಎಂದು ಪ್ರೊ.ಎನ್.ಎಸ್.ರಾಮೇಗೌಡ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಆದಿಚುಂಚನಗಿರಿ ಕಲಾ ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಆಡಳಿತ ಮಂಡಳಿ ಸದಸ್ಯ ಹೆಚ್.ಟಿ.ಕೃಷ್ಣೇಗೌಡ, ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ನ ರಿಜಿಸ್ಟ್ರಾರ್ ಚಂದ್ರೇಗೌಡ, ಪ್ರಾಂಶುಪಾಲ ಶ್ರೇಯಸ್ ಕೃಷ್ಣ, ನಿವೃತ್ತ ಪ್ರಾಂಶುಪಾಲ ಬಿ.ಕೆ.ಲೋಕೇಶ್ ಇದ್ದರು.

ಡಾ.ಎಂ.ಕೆ.ಸೂರಪ್ಪ 

ಡಾ.ಎಂ.ಕೆ.ಸೂರಪ್ಪಗೆ ವಿಜ್ಞಾತಂ ಪ್ರಶಸ್ತಿ 

ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲ್ಲೂಕಿನ ಮಿರ್ಲೆ ಗ್ರಾಮದ ಡಾ.ಎಂ.ಕೆ.ಸೂರಪ್ಪ ಅವರು ಶಿಕ್ಷಣ ತಜ್ಞ ದೂರದೃಷ್ಟಿಯುಳ್ಳ ಆಡಳಿತಗಾರ ಉನ್ನತ ಶಿಕ್ಷಣ ಹಾಗೂ ತಾಂತ್ರಿಕ ನಾವೀನ್ಯದ ಕ್ಷೇತ್ರದಲ್ಲಿ ರಾಷ್ಟ್ರಮಟ್ಟದಲ್ಲಿ ಖ್ಯಾತಿಗಳಿಸಿರುವ ಚಿಂತಕ. ಸುಪ್ರಸಿದ್ಧ ಮೆಟರಿಲ್ ಸೈನ್ಸ್ ವಿಜ್ಞಾನಿಯಾಗಿರುವ ಇವರು ಹಲವು ಪ್ರತಿಷ್ಠಿತ ಹುದ್ದೆ ಅಲಂಕರಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.