ಮಂಡ್ಯ: ‘ಸಮ ಸಮಾಜದ ಕನಸು ಹೊತ್ತು ಹಿಂದುಳಿದ ವರ್ಗಗಳ ಆಯೋಗವನ್ನು ರಚಿಸಿ, ಹಿಂದುಳಿದವರ ಏಳಿಗೆಗಾಗಿ ಮೀಸಲಾತಿಯನ್ನು ಜಾರಿಗೆ ತಂದ ಸಾಮಾಜಿಕ ನ್ಯಾಯದ ನಿರ್ಮಾತೃ ನಾಲ್ವಡಿ ಕೃಷ್ಣರಾಜ ಒಡೆಯರ್’ ಎಂದು ಜಿಲ್ಲಾಧಿಕಾರಿ ಕುಮಾರ ಬಣ್ಣಿಸಿದರು.
ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಬುಧವಾರ ಆಯೋಜಿಸಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಬ್ರಿಟಿಷರ ಕಾಲದಲ್ಲೂ ಸುಮಾರು 600 ಸಂಸ್ಥಾನಗಳಲ್ಲಿ ಆಳ್ವಿಕೆ ನಡೆಸಿದ ಧೀಮಂತ ನಾಯಕ ನಾಲ್ವಡಿ ಕೃಷ್ಣರಾಜ ಒಡೆಯರ್ ಎಂದು ಹೇಳಿದರು.
ಮೈಸೂರು, ಮಂಡ್ಯ, ಹಾಸನ ಪ್ರಾಂತ್ಯಗಳ ಜನರು ನಾಲ್ವಡಿ ಕೃಷ್ಣರಾಜ ಒಡೆಯರ್ ಭಾವಚಿತ್ರವನ್ನು ಮನೆಗಳಲ್ಲಿ ಇರಿಸಿ ಪೂಜೆ ಸಲ್ಲಿಸುತ್ತಿದ್ದಾರೆ. ಈ ಭಾಗದ ಜನರು ನಾಡಗೀತೆಗೆ ನೀಡುವಷ್ಟೇ ಗೌರವವನ್ನು ‘ಮರೆಯೋದುಂಟೆ ಮೈಸೂರು ದೊರೆಯ ನಾಲ್ವಡಿ ಕೃಷ್ಣರಾಜ ಒಡೆಯರ’ ಹಾಡಿಗೆ ನೀಡುತ್ತಾರೆ ಎಂದು ತಿಳಿಸಿದರು.
ಏಷ್ಯಾದಲ್ಲೇ ಮೊದಲ ಬಾರಿಗೆ ಶಿವನಸಮುದ್ರಲ್ಲಿ ವಿದ್ಯುತ್ ಸ್ಥಾವರ, ಕನ್ನಡ ಸಾಹಿತ್ಯ ಪರಿಷತ್ತು, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಸಂಸ್ಥೆಗಳನ್ನು ಸ್ಥಾಪಿಸಿದರು. ಅಂದಿನ ಕಾಲದಲ್ಲೇ ಹೆಣ್ಣು ಮಕ್ಕಳು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದರು. ಇವರ ಅಭಿವೃದ್ಧಿ ಕಾರ್ಯಗಳನ್ನು ಗಮನಿಸಿದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ‘ರಾಜರ್ಷಿ’ ಎಂದು ಬಿರುದು ನೀಡಿ ಗೌರವಿಸಿದರು ಎಂದರು.
ನಗರಸಭೆ ಅಧ್ಯಕ್ಷ ಎಂ.ವಿ. ಪ್ರಕಾಶ್ ಮಾತನಾಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್. ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ವಿ ನಂದೀಶ್, ಜೈ ಕರ್ನಾಟಕ ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷ ಎಸ್ ನಾರಾಯಣ, ಡಿ.ದೇವರಾಜ ಅರಸ್ ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್ ಮುಖಂಡರಾದ ಎಸ್. ನಾರಾಯಣ್, ಕೃಷ್ಣ, ಲಲಿತಾ ಶಿವರುದ್ರ ಸ್ವಾಮಿ, ಅಮ್ಜದ್ ಪಾಷಾ, ಧನಂಜಯ, ಬಿ.ಎಂ ಅಪ್ಪಾಜಪ್ಪ, ಎಂ.ಸಿ. ಲಂಕೇಶ್ ಇತರರಿದ್ದರು.
ರಥದಲ್ಲಿ ಭಾವಚಿತ್ರ ಮೆರವಣಿಗೆ
ಪುಷ್ಪಾಲಂಕೃತ ರಥದ ಮೇಲೆ ಇರಿಸಲಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಭಾವಚಿತ್ರಕ್ಕೆ ಮಂಡ್ಯ ತಹಶೀಲ್ದಾರ್ ಶಿವಕುಮಾರ ಬಿರಾದರ್ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಯ ಸಹಾಯಕಿ ರೋಹಿಣಿ ಅವರು ಪುಷ್ಪಾರ್ಚನೆ ನೆರವೇರಿಸಿ ಡೊಳ್ಳು ಬಾರಿಸುವ ಮೂಲಕ ಜಿಲ್ಲಾಧಿಕಾರಿ ಕಚೇರಿ ಬಳಿ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆಯು ಡೊಳ್ಳು ಕುಣಿತದೊಂದಿಗೆ ಮೈಸೂರು- ಬೆಂಗಳೂರು ಹೆದ್ದಾರಿಯ ಮೂಲಕವಾಗಿ ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದವರೆಗೂ ಸಾಗಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.