ಮಂಡ್ಯ: ‘ಜೀವನಕ್ಕೆ ಆಸರೆಯಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಎಂದಿಗೂ ಜನರ ಮನಸಲ್ಲಿ ಹಸಿರಾಗಿ ಉಳಿಯುತ್ತಾರೆ’ ಎಂದು ನಾಲ್ವಡಿ ಕೃಷ್ಣರಾಜ ಒಡೆಯರ್ ಟ್ರಸ್ಟ್ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್ ಶ್ಲಾಘಿಸಿದರು.
ನಗರದ ಮಹಾವೀರ ವೃತ್ತದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಟ್ರಸ್ಟ್ ವತಿಯಿಂದ ಭಾನುವಾರ ನಡೆದ ನಾಲ್ವಡಿ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.
ಏಷ್ಯಾ ಖಂಡದಲ್ಲೇ ಪ್ರಥಮವಾಗಿ ಜಲವಿದ್ಯುತ್ ಯೋಜನೆ ನಿರ್ಮಾಣ, ಕೋಲಾರದ ಚಿನ್ನದ ಗಣಿ ಸ್ಥಾಪನೆ ಸೇರಿ ಜನಪರ ಯೋಜನೆಗಳಿಗೆ ಸಾಕ್ಷಿಯಾದ ನಾಲ್ವಡಿ ಅವರು ಇಂದಿಗೂ ಪ್ರಸ್ತುತವಾಗಿದ್ದಾರೆ. ನಮಗೆ ಜನ್ಮ ಕೊಟ್ಟವರು ತಂದೆ ತಾಯಿ ಆದರೆ, ಜೀವನ ಕೊಟ್ಟವರು ನಾಲ್ವಡಿ ಎನ್ನಬೇಕು ಎಂದು ತಿಳಿಸಿದರು.
ರೈತರ ಕಷ್ಟ ಅರಿತುಕೊಂಡ ನಾಲ್ವಡಿ ಅವರು ಕೆಆರ್‌ಎಸ್ ಅಣೆಕಟ್ಟೆ ನಿರ್ಮಾಣ ಮಾಡುವ ಮೂಲಕ ಬೆಳಕಾದರು. ಅಣೆಕಟ್ಟೆ ನಿರ್ಮಾಣಕ್ಕೆಂದು ತನ್ನ ಪತ್ನಿಯ ಒಡವೆ ಮಾರಿ ಅಣೆಕಟ್ಟೆ ಪೂರ್ಣಗೊಳಿಸಿ ಮಾದರಿಯಾದ ಮಹಾರಾಜರೆಂದರೆ ಅದು ನಾಲ್ವಡಿ ಕೃಷ್ಣರಾಜ ಒಡೆಯರ್ ಎಂದರೆ ಅತಿಶಯೋಕ್ತಿಯಲ್ಲ ಎಂದರು.
ನಂಜಮ್ಮ ಮೋಟೇಗೌಡ ಚಾರಿಟಬಲ್ ಟ್ರಸ್ಟ್‌ನ ಕೆ.ಟಿ.ಹನುಮಂತು ಮಾತನಾಡಿ, ಪ್ರಸ್ತುತದಲ್ಲಿ ನಾಲ್ವಡಿ ಅವರನ್ನು ಮರೆಯುತ್ತಿರುವ ಸನ್ನಿವೇಶ ಎದುರಾಗಿದೆ, ಇದನ್ನು ತಪ್ಪಿಸಲು ನಾಲ್ವಡಿ ಅವರ ಕೊಡುಗೆಗಳನ್ನು ಪ್ರತಿ ಶಾಲಾ ಮತ್ತು ಕಾಲೇಜು ಹಂತದಲ್ಲಿ ತಿಳಿಸುವ ಕೆಲಸ ಆಗಬೇಕು ಎಂದು ಅಭಿಪ್ರಾಯಪಟ್ಟರು.
ಮುಖಂಡರಾದ ಬೋರ್‌ವೇಲ್ ಎಸ್.ನಾರಾಯಣ್, ಅಪ್ಪಾಜಪ್ಪ, ಸಾತನೂರು ಜಯರಾಂ, ಚಂದಗಾಲು ಲೋಕೇಶ್, ಬೇಲೂರು ಸೋಮಶೇಖರ್, ಶಕುಂತಲಾ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.