ಪಾಂಡವಪುರ: ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಸ್ವಚ್ಛ ಭಾರತ್ ಯೋಜನೆ ಅನುಷ್ಠಾನಗೊಳಿಸಲು 10 ವರ್ಷಗಳೇ ಕಳೆದಿದ್ದರೂ, ಈ ಯೋಜನೆ ಕಾರ್ಯರೂಪಗೊಳ್ಳದೆ ತಾಲ್ಲೂಕಿನಲ್ಲಿ ಹಳ್ಳ ಹಿಡಿದಿದೆ.
ಸ್ವಚ್ಛ ಭಾರತ್ ಯೋಜನೆಯನ್ನು 2014ನೇ ಸಾಲಿನಲ್ಲಿ ಪ್ರಾರಂಭಿಸಲಾಯಿತು. ಇದರ ಯಶಸ್ವಿಗಾಗಿ ರೂಪುರೇಷೆಗಳನ್ನು ಕೂಡ ತಯಾರು ಮಾಡಲಾಯಿತು. ಅದರಂತೆ ಪ್ರತಿ ಪಂಚಾಯಿತಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ₹15 ಲಕ್ಷ ಅಂದಾಜು ವೆಚ್ಚದಲ್ಲಿ ಸ್ವಚ್ಛ ಸಂಕೀರ್ಣ ಘಟಕಗಳನ್ನು (ತ್ಯಾಜ್ಯ ವಸ್ತು ಸಂಗ್ರಹ ಘಟಕ) ನಿರ್ಮಾಣ ಮಾಡಲಾಯಿತು.
15ನೇ ಹಣಕಾಸು ಯೋಜನೆಯಲ್ಲಿ ಆಯಾ ಪಂಚಾಯಿತಿಗೆ ಒಳಪಡುವ ಎಲ್ಲ ಗ್ರಾಮಗಳ ಮನೆ– ಮನೆಗಳಿಗೆ ಹಸಿ ಕಸ ಮತ್ತು ಒಣ ಕಸ ಸಂಗ್ರಹದ ಡಬ್ಬಿಗಳನ್ನು ಕೂಡ ನೀಡಲಾಯಿತು. ಗ್ರಾಮಗಳಲ್ಲಿನ ಡಬ್ಬಿಗಳಿಂದ ಸಂಗ್ರಹ ಕಸ ಹಾಗೂ ಅಲ್ಲಲ್ಲಿ ಬಿದ್ದಿರುವ ಇನ್ನಿತರ ಕಸವನ್ನು ಸ್ಚಚ್ಛತಾ ಸಂಕೀರ್ಣ ಘಟಕಗಳಿಗೆ ವಿಲೇವಾರಿ ಮಾಡಲು 24 ಪಂಚಾಯಿತಿಗಳಿಗೆ ಜಿಲ್ಲಾ ಪಂಚಾಯಿತಿ ವತಿಯಿಂದ ಒಂದು ವಾಹನವನ್ನು ಕೂಡ ನೀಡಲಾಗಿದೆ. ಇಷ್ಟೆಲ್ಲಾ ಇದ್ದರೂ ಸ್ವಚ್ಛ ಭಾರತ್ ಮಿಷನ್ ಯೋಜನೆ ಕಾರ್ಯರೂಪಕ್ಕೆ ಬಾರದೆ ಕುಂಟುತ್ತಾ ಸಾಗಿದೆ.
ಕಸದಿಂದ ಗೊಬ್ಬರ:
ಸ್ವಚ್ಛ ಸಂಕೀರ್ಣ ಘಟಕಗಳಿಗೆ ಬರುವ ಹಸಿ ಮತ್ತು ಒಣ ಕಸವನ್ನು ಸಾವಯವ ಹಾಗೂ ಇನ್ನಿತರ ಗೊಬ್ಬರವಾಗಿ ಪರಿವರ್ತಿಸಿದರೆ, ರೈತರಿಗೆ ಅನುಕೂಲವಾಗಲಿದೆ. ಹೀಗಾಗಿ ಸರ್ಕಾರವು ಈ ಕ್ರಮ ಕೈಗೊಳ್ಳಬೇಕಿದೆ ಎನ್ನುವುದು ರೈತರ ಒತ್ತಾಯವಾಗಿದೆ.
ಪ್ರತಿ ಪಂಚಾಯಿತಿಗಳಲ್ಲಿ ಲಕ್ಷಾಂತರ ಹಣ ಖರ್ಚು ಮಾಡಿ ನಿರ್ಮಾಣ ಮಾಡಿರುವ ತ್ಯಾಜ್ಯ ವಸ್ತು ಸಂಗ್ರಹ ಘಟಕಗಳಲ್ಲಿ ಗಿಡಗಂಟಿಗಳು ಬೆಳೆದು ಪಾಳು ಬಿದ್ದಿವೆ.
ಪುರಸಭೆಯಿಂದ ಘನತ್ಯಾಜ್ಯ ನಿರ್ವಹಣೆ:
ಸುಮಾರು 25 ಸಾವಿರ ಜನಸಂಖ್ಯೆಯುಳ್ಳ ಪಾಂಡವಪುರ ಪುರಸಭೆಯಿಂದ 5 ಎಕರೆ ವಿಸ್ತೀರ್ಣ ಪ್ರದೇಶದಲ್ಲಿ ಸ್ವಚ್ಛ ಸಂಕೀರ್ಣ ಘಟಕವನ್ನು ನಿರ್ಮಾಣ ಮಾಡಲಾಗಿದೆ. ಸುಮಾರು ₹5 ಕೋಟಿ ವೆಚ್ಚದಲ್ಲಿ ತ್ಯಾಜ್ಯ ಘಟಕ ಮತ್ತು ಯಂತ್ರಗಳನ್ನು ಅಳವಡಿಸಲಾಗಿದೆ. ಆದರೆ ಒಣ ಕಸ ಮತ್ತು ಹಸಿ ಕಸ ಬೇರ್ಪಡಿಸಿ ಅದನ್ನು ಉಪಯಕ್ತ ವಸ್ತುವನ್ನಾಗಿ ಮಾಡುವ ಕಾರ್ಯ ಕುಂಟುತ್ತಾ ಸಾಗಿದೆ. ಅಲ್ಲದೆ ಕಸ ಸಂಗ್ರಹಣೆ ಮತ್ತು ವಿಲೇವಾರಿ ಸಮರ್ಪಕವಾಗಿ ನಡೆಯುತ್ತಿಲ್ಲ.
‘ಘನತ್ಯಾಜ್ಯ ನಿರ್ವಹಣೆ ಘಟಕ ನಿರ್ಮಾಣ, ತ್ಯಾಜ್ಯ ಬೇರ್ಪಡಿಸುವಿಕೆ, ಗೊಬ್ಬರ ತಯಾರಿಕೆ ಯಂತ್ರ ಸೇರಿದಂತೆ ₹5 ಕೋಟಿ ಖರ್ಚು ಮಾಡಲಾಗಿದೆ. ಮೂವರು ಕೆಲಸಗಾರರನ್ನು ನೇಮಿಸಿಕೊಳ್ಳಲಾಗಿದ್ದು ಅವರಿಗೆ ವೇತನ ಹಾಗೂ ಮೂರು ತಿಂಗಳಿಗೊಮ್ಮೆ ಸುಮಾರು ₹80 ಸಾವಿರ ವಿದ್ಯುತ್ ಬಿಲ್ ಬರುತ್ತಿದೆ. ಇದರಿಂದ ವೆಚ್ಚ ದುಬಾರಿಯಾಗುತ್ತಿದೆ. ಆದರೆ ಘಟಕದಿಂದ ಉತ್ಪಾದನೆ ಮಾತ್ರ ಶೂನ್ಯ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಪುರಸಭೆ ಸದಸ್ಯ ಚಂದ್ರು.
ಯಾರು ಏನಂತಾರೆ..?
ಉದ್ಘಾಟನೆಯಾಗದ ಘಟಕ
ಕೆ.ಬೆಟ್ಟಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಘನ ತ್ಯಾಜ್ಯ ಘಟಕ ನಿರ್ಮಾಣವಾಗಿದೆ. ಕಸದ ಡಬ್ಬಿಗಳನ್ನು ನೀಡಿದ್ದಾರೆ. ಆದರೆ ಮೂರು ವರ್ಷ ಕಳೆದರೂ ಇದುವರೆಗೂ ಉದ್ಫಾಟನೆಯಾಗದೆ ಮೂರು ಗುಂಪಾಗಿದೆ. ಈ ಘಟಕಕ್ಕೆ ₹15 ಲಕ್ಷ ವೆಚ್ಚ ಮಾಡಿದ್ದರೂ ಯಾವುದೇ ಪ್ರಯೋಜನವಿಲ್ಲದಂತಾಗಿದೆಅಶೋಕ, ಡಾಮನಡಹಳ್ಳಿ ಗ್ರಾಮಸ್ಥ
ಜನರ ಸಹಭಾಗಿತ್ವ ಅಗತ್ಯ
‘ಸ್ಚಚ್ಚ ಭಾರತ್ ಮಿಷನ್ ಯೋಜನೆ ಅನುಷ್ಠಾನ ವಾಗುವಲ್ಲಿ ಸಂಪೂರ್ಣ ಸೋತಿದೆ. ಅಧಿಕಾರಿಗಳು ಮತ್ತು ಪಂಚಾಯಿತಿ ಸದಸ್ಯರು ಜವಾಬ್ದಾರಿಯರಿತು ಕೆಲಸ ಮಾಡಬೇಕಿದೆ. ಎಲ್ಲಕ್ಕಿಂತ ಮಿಗಿಲಾಗಿ ಜನರ ಸಹ ಭಾಗಿತ್ವ ಮುಖ್ಯ. ಇಲ್ಲದಿದ್ದರೆ ಮತ್ತಷ್ಟು ಯೋಜನೆ ಹಳ್ಳ ಹಿಡಿಯುವುದು ಗ್ಯಾರಂಟಿ’.ಕೃಷ್ಣಮೂರ್ತಿ, ಕನಗನಮರಡಿ ಗ್ರಾಮಸ್ಥ
ಗೊಬ್ಬರ ತಯಾರಿ ಆರಂಭ
ತಾಲ್ಲೂಕಿನ 24 ಗ್ರಾಮ ಪಂಚಾಯಿತಿಗಳ ಪೈಕಿ ಈಗಾಗಲೇ 2 ಪಂಚಾಯಿತಿಗಳಲ್ಲಿ ಘನ ತ್ಯಾಜ್ಯದಿಂದ ಗೊಬ್ಬರ ತಯಾರು ಮಾಡುವ ಪ್ರಕ್ರಿಯೆ ಪ್ರಾರಂಭವಾಗಿದೆ. ಉಳಿದ ಎಲ್ಲಾ ಪಂಚಾಯಿತಿಗಳಲ್ಲಿ ಹಂತ ಹಂತವಾಗಿ ಪ್ರಾರಂಭಗೊಳ್ಳಲಿದೆ ಎನ್ನುತ್ತಾರೆಲೋಕೇಶ್ ಮೂರ್ತಿ, ಇಒ, ತಾಲ್ಲೂಕು ಪಂಚಾಯಿತಿ
ಕಸ ಮುಕ್ತ ಪಟ್ಟಣಕ್ಕೆ ಕ್ರಮ
ಕಸ ಮುಕ್ತ ಸ್ವಚ್ಛ ಪಟ್ಟಣವನ್ನಾಗಿ ಮಾಡಲು ಪ್ರಯತ್ನಿಸಲಾಗುತ್ತಿದೆ. ತ್ಯಾಜ್ಯವನ್ನು ಬೇರ್ಪಡಿಸಿ ಉಪಯುಕ್ತ ವಸ್ತುವನ್ನಾಗಿ ಮಾಡುವುದು ಮುಖ್ಯ.ಇದಕ್ಕೆ ಸಮಯ ಹಿಡಿಯುತ್ತದೆ. ಪಟ್ಟಣದಲ್ಲಿ ಘನ ತ್ಯಾಜ್ಯ ವಿಲೇವಾರಿ ನಿರ್ವಹಣೆ ವ್ಯವಸ್ಥಿತವಾಗಿ ನಡೆಯುತ್ತಿದೆ’ಸತೀಶ್ ಕುಮಾರ್, ಪುರಸಭೆ ಮುಖ್ಯಾಧಿಕಾರಿ
ಪೌರಕಾರ್ಮಿಕರ ಕೊರತೆ
ಡಬ್ಬಿಗಳಿಂದ ಸಂಗ್ರಹ ಕಸ ಹಾಗೂ ಇನ್ನಿತರ ಕಸವನ್ನು ಘನತ್ಯಾಜ್ಯ ಘಟಕಗಳಿಗೆ ಸಾಗಣೆ ಮಾಡಲು ಪ್ರಮುಖವಾಗಿ ಪೌರಕಾರ್ಮಿಕರ ಕೊರತೆ ಇದೆ. ಕನಿಷ್ಠ ಪ್ರತಿ ಪಂಚಾಯಿತಿಗೆ 2–3 ಪೌರಕಾರ್ಮಿಕರ ಅಗತ್ಯವಿದ್ದರೂ ಈ ಹುದ್ದೆಗಳನ್ನು ತುಂಬುವ ಕೆಲಸವಾಗಿಲ್ಲ. ವರ್ಷಕ್ಕೆ ಮೂರು ನಾಲ್ಕು ಬಾರಿಯಷ್ಟೇ ಹೊರಗಡೆಯಿಂದ ಪೌರಕಾರ್ಮಿಕರನ್ನು ಕರೆಸಿ ಸ್ವಚ್ಛತೆ ಮಾಡಿಸಿಕೊಂಡು ಕೂಲಿ ನೀಡುವ ಕೆಲಸವಾಗುತ್ತಿದೆ. ಚಾಲಕರೇ ಇಲ್ಲ ಗ್ರಾಮಗಳಿಂದ ಕಸ ವಿಲೇವಾರಿ ಮಾಡಲು ಒಂದು ವಾಹನವಿದ್ದರೂ ವಾಹನಕ್ಕೆ ಚಾಲಕರೇ ಇಲ್ಲದಂತಾಗಿದ್ದು ವಾಹನವೂ ಬಳಕೆಯಾಗದೆ ನಿಂತಿದೆ. ಹಸಿಕಸ ಮತ್ತು ಒಣಕಸಗಳನ್ನು ಬೇರೆ ಬೇರೆ ಹಾಕಲು ಪ್ರತ್ಯೇಕವಾದ ಎರಡು ಡಬ್ಬಿಗಳನ್ನು ಮನೆ ಮನೆಗಳಿಗೆ ನೀಡಲಾಗಿದೆ. ಹಲವು ಜನರು ಈ ಕಸದ ಡಬ್ಬಿಗಳನ್ನು ತಮ್ಮ ಮನೆಯ ಸ್ವಂತ ಬಳಕೆಗೆ ಇಟ್ಟುಕೊಂಡಿದ್ದಾರೆ. ಇನ್ನೂ ಕೆಲವು ಕಳಪೆ ಡಬ್ಬಿಗಳಾಗಿರುವುದರಿಂದ ಈಗಾಗಲೇ ಮುರಿದು ಹೋಗಿ ಮೂಲೆ ಸೇರಿವೆ ಎಂದು ಆರೋಪ ಕೇಳಿಬಂದಿದೆ.
ಘನತ್ಯಾಜ್ಯ ನಿರ್ವಹಣೆಗೆ ಕ್ರಮ
‘ರೈತ ನಾಯಕ ದಿ.ಕೆ.ಎಸ್.ಪುಟ್ಟಣ್ಣಯ್ಯ ಫೌಂಡೇಷನ್ ವತಿಯಿಂದ ಸಾಹಸ್ ಸಂಸ್ಥೆಯ ಸಹಭಾಗಿತ್ವದಲ್ಲಿ ಘನ ತ್ಯಾಜ್ಯ ನಿರ್ವಹಣೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮೇಲುಕೋಟೆ ವಿಧಾನಸಭಾ ಕ್ಷೇತ್ರದ 35 ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಚುನಾಯಿತ ಸದಸ್ಯರಿಗೆ ಅಂಗನವಾಡಿ ಶಿಕ್ಷಕಿಯರು ಮತ್ತು ಆಶಾ ಕಾರ್ಯಕರ್ತರಿಗೆ ಶಾಲಾ–ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ತರಬೇತಿ ನೀಡಲಾಗುವುದು. ಎಲ್ಲ ತ್ಯಾಜ್ಯ ವಸ್ತುಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಿ ಸಂಪನ್ಮೂಲವನ್ನಾಗಿಸಲು ಕಾರ್ಯಕ್ರಮ ರೂಪಿಸಲಾಗುವುದು’ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.