
ಮಳವಳ್ಳಿ: ದೈನಂದಿನ ಜೀವನದಲ್ಲಿ ವಿಜ್ಞಾನವು ಬಹಳ ಮುಖ್ಯವಾಗಿದೆ. ವಿಜ್ಞಾನದ ವಿಸ್ಮಯಗಳು ಜಗತ್ತನ್ನೇ ಬದಲಾಯಿಸುವ ಸಾಮರ್ಥ್ಯ ಹೊಂದಿವೆ ಎಂದು ನಿವೃತ್ತ ಉಪನ್ಯಾಸಕ ಕಮಲ್ ಲೊದಾಯ ತಿಳಿಸಿದರು.
ಪಟ್ಟಣದ ಹೊರವಲಯದ ಮಾರೇಹಳ್ಳಿ ಪಿ.ಎಂಶ್ರೀ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಶನಿವಾರ ಜ್ಞಾನ ವಿಜ್ಞಾನ ಸಮಿತಿ ವತಿಯಿಂದ ನಡೆದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶದ ಖ್ಯಾತ ಭೌತವಿಜ್ಞಾನಿ ಸರ್.ಸಿ.ವಿ.ರಾಮನ್ ಅವರು 1928ರ ಫೆಬ್ರುವರಿ 28ರಂದು ತಮ್ಮ ಪ್ರಸಿದ್ಧ ಸಂಶೋಧನೆಯಾದ ‘ರಾಮನ್ ಎಫೆಕ್ಟ್’ ಅನ್ನು ಜಗತ್ತಿಗೆ ಪರಿಚಯಿಸುವ ಮೂಲಕ ವಿಜ್ಞಾನ ಕ್ಷೇತ್ರಕ್ಕೆ ಹೊಸ ಆಯಾಮ ನೀಡಿದ್ದರು. ಸಾಧನೆಯ ನೆನಪಿಗಾಗಿ ಮತ್ತು ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ ಬೆಳಸಿ ಯುವಸಮೂಹದಲ್ಲಿ ವಿಜ್ಞಾನದ ಅರಿವಿನ ಪ್ರಮಾಣದ ಶಕ್ತಿಯನ್ನು ಹೆಚ್ಚಿಸಲು ವಿಜ್ಞಾನ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದು ಹೇಳಿದರು.
ವಿಜ್ಞಾನ ಎನ್ನುವುದು ಕೇವಲ ಪುಸ್ತಕದಲ್ಲಿರುವ ವಿಷಯವಲ್ಲ, ಅದು ನಮ್ಮ ಸುತ್ತಮುತ್ತಲಿನ ಜಗತ್ತನ್ನು ಅರ್ಥಮಾಡಿಕೊಳ್ಳುವ ಒಂದು ದೃಷ್ಟಿಕೋನವಾಗಿದೆ. ವಿಜ್ಞಾನ ದಿನಾಚರಣೆ ಸಂದರ್ಭದಲ್ಲಿ ವಿಜ್ಞಾನವನ್ನು ಸಂಭ್ರಮಿಸಿ ಜಗತ್ತಿನ ವಿಸ್ಮಯಗಳನ್ನು ಅರಿತುಕೊಳ್ಳಲು ಮತ್ತು ಮಾನವ ಜನಾಂಗಕ್ಕೆ ನೆರವಾಗಬಲ್ಲ ಹೊಸ ಅನ್ವೇಷಣೆಗಳನ್ನು ನಡೆಸಲು ಮುಂದಿನ ತಲೆಮಾರುಗಳಿಗೆ ಸ್ಫೂರ್ತಿ ನೀಡುವ ಅಗತ್ಯವಿದೆ ಎಂದು ಹೇಳಿದರು.
ಬಾಹ್ಯಕಾಶದ ಬಗ್ಗೆ ಮಕ್ಕಳಲ್ಲಿನ ಅನುಮಾನಗಳಿಗೆ ಉತ್ತರ ನೀಡಲಾಯಿತು. ಮುಖ್ಯ ಶಿಕ್ಷಕ ಶಿವರಾಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿ ಕಾರ್ಯದರ್ಶಿ ಪ್ರಶಾಂತ್ ಬಾಬು ಹಾಗೂ ಶಿಕ್ಷಕರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.