ADVERTISEMENT

4,250 ಎಕರೆಯಲ್ಲಿ ನೈಸರ್ಗಿಕ ಕೃಷಿ ಗುರಿ

4,250 ಫಲಾನುಭವಿಗಳ ಆಯ್ಕೆ: 68 ಕೃಷಿ ಸಖಿಯರಿಗೆ ತರಬೇತಿ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2025, 6:54 IST
Last Updated 31 ಅಕ್ಟೋಬರ್ 2025, 6:54 IST
ಮಂಡ್ಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವಿ.ಸಿ.ಫಾರಂನಲ್ಲಿ ನೈಸರ್ಗಿಕ ಕೃಷಿ ಪದ್ಧತಿಯಡಿ ಕಬ್ಬಿನಲ್ಲಿ ವಿವಿಧ ಅಂತರ ಬೆಳೆಗಳನ್ನು ಬೆಳೆದಿರುವ ಕೃಷಿ ತಾಕಿಗೆ ಜಿ.ಪಂ. ಸಿಇಒ ನಂದಿನಿ ಕೆ.ಆರ್. ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಿಶೇಷಾಧಿಕಾರಿ ಕೆ.ಎಂ.ಹರಿಣಿ ಕುಮಾರ್, ಜಂಟಿ ಕೃಷಿ ನಿರ್ದೇಶಕ ಅಶೋಕ ವಿ.ಎಸ್. ಪಾಲ್ಗೊಂಡಿದ್ದರು 
ಮಂಡ್ಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವಿ.ಸಿ.ಫಾರಂನಲ್ಲಿ ನೈಸರ್ಗಿಕ ಕೃಷಿ ಪದ್ಧತಿಯಡಿ ಕಬ್ಬಿನಲ್ಲಿ ವಿವಿಧ ಅಂತರ ಬೆಳೆಗಳನ್ನು ಬೆಳೆದಿರುವ ಕೃಷಿ ತಾಕಿಗೆ ಜಿ.ಪಂ. ಸಿಇಒ ನಂದಿನಿ ಕೆ.ಆರ್. ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಿಶೇಷಾಧಿಕಾರಿ ಕೆ.ಎಂ.ಹರಿಣಿ ಕುಮಾರ್, ಜಂಟಿ ಕೃಷಿ ನಿರ್ದೇಶಕ ಅಶೋಕ ವಿ.ಎಸ್. ಪಾಲ್ಗೊಂಡಿದ್ದರು    

ಮಂಡ್ಯ: ‘ಜಿಲ್ಲೆಯ 34 ಗುಚ್ಛ (ಎರಡರಿಂದ ಮೂರು ಗ್ರಾಮ ಪಂಚಾಯಿತಿಗಳ ಸಮೂಹ) ಗ್ರಾಮಗಳ 4,250 ಎಕರೆಯಲ್ಲಿ ‘ನೈಸರ್ಗಿಕ ಕೃಷಿ’ ಅಳವಡಿಕೆಗೆ ಗುರಿಯನ್ನು ನಿಗದಿಪಡಿಸಲಾಗಿದ್ದು, ಕೃಷಿ ಸಖಿಯರು ಸಕ್ರಿಯವಾಗಿ ಹಾಗೂ ಪರಿಣಾಮಕಾರಿಯಾಗಿ ಭಾಗವಹಿಸಿ ಗುರಿ ಸಾಧನೆಗೆ ಮುಂದಾಗಬೇಕು’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ನಂದಿನಿ ಕೆ.ಆರ್. ತಿಳಿಸಿದರು.

ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ವಿ.ಸಿ.ಫಾರಂ ವತಿಯಿಂದ ನೈಸರ್ಗಿಕ ಕೃಷಿ ಕುರಿತು ಕೃಷಿ ಸಖಿಯರಿಗೆ ಗುರುವಾರ ಏರ್ಪಡಿಸಿದ್ದ 5 ದಿನಗಳ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ನೈಸರ್ಗಿಕ ಕೃಷಿ ಪದ್ಧತಿಯಲ್ಲಿ ಹೆಚ್ಚಿನ ಉತ್ಪಾದನೆಗಿಂತ, ಉತ್ಕೃಷ್ಟ ಗುಣಮಟ್ಟದ ಉತ್ಪನ್ನಗಳನ್ನು ಬೆಳೆಯಬಹುದಾಗಿದೆ. ಈ ಬಗ್ಗೆ ರೈತರಿಗೆ ಪ್ರೇರೇಪಣೆ ನೀಡಬೇಕೆಂದು ಸೂಚಿಸಿದರು.

ಮಂಡ್ಯ ಜಿಲ್ಲೆಯಲ್ಲಿ ರಾಷ್ಟ್ರೀಯ ನೈಸರ್ಗಿಕ ಕೃಷಿ ಅಭಿಯಾನದಡಿ 5 ಗುಚ್ಛ ಗ್ರಾಮಗಳನ್ನು ಪ್ರಮುಖ ನದಿಗಳ ಪಾತ್ರದಲ್ಲಿ ಹಾಗೂ ಉಳಿದ 29 ಗುಚ್ಛ ಗ್ರಾಮಗಳನ್ನು ಅತಿ ಹೆಚ್ಚು ರಾಸಾಯನಿಕ ಬಳಕೆ ಮಾಡುತ್ತಿರುವ ಗ್ರಾಮ ಪಂಚಾಯಿತಿಗಳನ್ನು ಗುರುತಿಸಲಾಗಿದ್ದು, ಒಟ್ಟು 34 ಗುಚ್ಛ ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ. ಪ್ರತಿ ಗುಚ್ಛಕ್ಕೆ 2 ಕೃಷಿ ಸಖಿ ಸೇರಿದಂತೆ ಒಟ್ಟು 68 ಕೃಷಿ ಸಖಿಯರನ್ನು ಆಯ್ಕೆ ಮಾಡಲಾಗಿದೆ.

ADVERTISEMENT

ಪ್ರತಿ ಗುಚ್ಛದಡಿ 125 ಫಲಾನುಭವಿಗಳಂತೆ 34 ಗುಚ್ಛಗಳಿಗೆ ಒಟ್ಟು 4,250 ಫಲಾನುಭವಿಗಳನ್ನು ಆಯ್ಕೆ ಮಾಡಿ ಸದರಿ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಪ್ರತಿ ಫಲಾನುಭವಿಗೆ ನೈಸರ್ಗಿಕ ಕೃಷಿ ಅಳವಡಿಕೆ ಆಧಾರದ ಮೇಲೆ ಗರಿಷ್ಠ ₹4 ಸಾವಿರ ಪ್ರೋತ್ಸಾಹಧನವನ್ನು ನೀಡಲಾಗುವುದು ಎಂದು ತಿಳಿಸಿದರು.

ರೈತರು ಬೆಳೆದ ಬೆಳೆಗಳ ಸಂಸ್ಕರಣೆ ಮತ್ತು ಮೌಲ್ಯವರ್ಧನೆಯನ್ನು ಮಾಡುವುದರಿಂದ ರೈತರಿಗೆ ಉತ್ತಮ ದರ ಲಭಿಸಲಿದ್ದು, ಈ ಬಗ್ಗೆ ಕೃಷಿ ಸಖಿಯರು ರೈತರಿಗೆ ವ್ಯಾಪಕವಾಗಿ ಅರಿವು ಮೂಡಿಸಬೇಕೆಂದು ತಿಳಿಸಿದರು.

ಸಮಾರೋಪ ಸಮಾರಂಭದಲ್ಲಿ ಮಂಡ್ಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಶೇಷಾಧಿಕಾರಿ ಕೆ.ಎಂ.ಹರಿಣಿ ಕುಮಾರ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಅಶೋಕ.ವಿ.ಎಸ್., ಸಂಶೋಧನಾ ನಿರ್ದೇಶಕ ಜಿ.ಎಂ. ದೇವಗಿರಿ, ಡೀನ್ (ಸ್ನಾತಕೋತ್ತರ) ಚಂದ್ರಪ್ಪ, ಸಹ ಸಂಶೋಧನಾ ನಿರ್ದೇಶಕರಾದ ಬಿ.ಎಸ್.ಬಸವರಾಜು, ಸನತ್ ಕುಮಾರ್, ಕಿತ್ತೂರಮಠ, ಸತೀಶ್ ಪಾಲ್ಗೊಂಡಿದ್ದರು. 

ಅಂತರ ಬೆಳೆ ಪದ್ಧತಿಗೆ ಸಿಇಒ ಸಲಹೆ 

ಮಂಡ್ಯ: ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ವಿ.ಸಿ.ಫಾರಂ ವತಿಯಿಂದ ರಾಷ್ಟ್ರೀಯ ನೈಸರ್ಗಿಕ ಕೃಷಿ ಅಭಿಯಾನದಡಿ ನೈಸರ್ಗಿಕ ಕೃಷಿ ಪದ್ಧತಿಯಲ್ಲಿ ಕಬ್ಬಿನಲ್ಲಿ ವಿವಿಧ ಅಂತರ ಬೆಳೆಗಳಾದ ಬೆಂಡೆ ಗೋರಿಕಾಯಿ ಸೋಯಾ ಅವರೆ ಉದ್ದು ನೆಲಗಡಲೆ ವಿವಿಧ ಸೊಪ್ಪುಗಳನ್ನು ಬೆಳೆದಿರುವ ಕೃಷಿ ತಾಕಿಗೆ ಜಿ.ಪಂ. ಸಿಇಒ ನಂದಿನಿ ಕೆ.ಆರ್. ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ರೈತರು ಕಬ್ಬು ಬೆಳೆಯನ್ನು ಏಕಬೆಳೆಯಾಗಿ ಬೆಳೆಯದೆ ಮಣ್ಣಿನ ಆರೋಗ್ಯ ವೃದ್ಧಿಸಲು ಹಾಗೂ ಮಧ್ಯಂತರ ಆದಾಯ ಪಡೆಯಲು ಸಹಕಾರಿಯಾಗುವಂತೆ ಅಂತರ ಬೆಳೆಯನ್ನು ಬೆಳೆಯಬೇಕು ಎಂದು ಅಭಿಪ್ರಾಯಪಟ್ಟರು. ಸದರಿ ತಾಕಿನಲ್ಲಿ ಒಂಟಿ ಕಣ್ಣಿನ ಕಬ್ಬಿನ ಸಸಿ ಬೆಳೆಸಲಾಗಿದ್ದು ಇದರಿಂದ ಕಬ್ಬಿನಲ್ಲಿ ಹೆಚ್ಚಿನ ಇಳುವರಿ ಪಡೆಯಲು ಸಹಕಾರಿಯಾಗುವುದು ಎಂದು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಶೇಷಾಧಿಕಾರಿ ಕೆ.ಎಂ.ಹರಿಣಿಕುಮಾರ್ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.