ADVERTISEMENT

ಸಾತನೂರು ಫಾರಂನಲ್ಲಿ ಹೊಸ ಕಾರ್ಖಾನೆ: ಶಾಸಕ ಗಣಿಗ ರವಿಕುಮಾರ್‌

ಈಗಿರುವ ಮೈಷುಗರ್‌ ಜಾಗದಲ್ಲಿ ಐಟಿ ಪಾರ್ಕ್‌ ನಿರ್ಮಾಣ; ಶಾಸಕ ಗಣಿಗ ರವಿಕುಮಾರ್‌

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2024, 14:15 IST
Last Updated 17 ಫೆಬ್ರುವರಿ 2024, 14:15 IST
ಗಣಿಗ ರವಿಕುಮಾರ್‌
ಗಣಿಗ ರವಿಕುಮಾರ್‌   

ಮಂಡ್ಯ: ‘ಮೈಷುಗರ್ ಕಾರ್ಖಾನೆ ಜಿಲ್ಲೆಯ ರೈತರ ಜೀವನಾಡಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಹೊಸ ಕಾರ್ಖಾನೆ ನಿರ್ಮಾಣ ಘೋಷಣೆ ಮಾಡಿದ್ದಾರೆ. ತಾಲ್ಲೂಕಿನ ಸಾತನೂರು ಫಾರಂನಲ್ಲಿ ಹೊಸ ಕಾರ್ಖಾನೆ ನಿರ್ಮಾಣಕ್ಕೆ ಜಾಗ ಗುರುತಿಸಲಾಗುವುದು. ಈಗಿರುವ ಕಾರ್ಖಾನೆ ಜಾಗದಲ್ಲಿ ಐಟಿ ಪಾರ್ಕ್‌ ನಿರ್ಮಾಣ ಮಾಡಲಾಗುವುದು’ ಎಂದು ಶಾಸಕ ಗಣಿಗ ರವಿಕುಮಾರ್‌ ಶನಿವಾರ ಹೇಳಿದರು.

‘500 ಕೋಟಿ ವೆಚ್ಚದಲ್ಲಿ ಹೊಸ ಕಾರ್ಖಾನೆ ನಿರ್ಮಾಣಗೊಳ್ಳಲಿದ್ದು ಬಜೆಟ್‌ನಲ್ಲಿ ಘೋಷಣೆ ಮಾಡಿದ ಮುಖ್ಯಮಂತ್ರಿಗಳಿಗೆ ಜಿಲ್ಲೆಯ ಜನರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರೂ ಇದಕ್ಕೆ ಕಾರಣಕರ್ತರಾಗಿದ್ದು ಅವರಿಗೂ ಜನರ ಪರವಾಗಿ ಅಭಿನಂದಿಸುತ್ತೇನೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ನಮ್ಮ ನಾಯಕರ ಇಚ್ಛಾಶಕ್ತಿಯಿಂದ ನೂತನ ಕಾರ್ಖಾನೆ ಸ್ಥಾಪನೆ ಆಗುತ್ತಿದ್ದು, ಶೀಘ್ರದಲ್ಲಿಯೇ ಭೂಮಿ ಪೂಜೆ ನಡೆಯಲಿದೆ. ಕಾಂಗ್ರೆಸ್ ಸರ್ಕಾರ ಬಂದಾಗಲೇ ಕಾರ್ಖಾನೆಗೆ ₹ 50 ಕೋಟಿ, ಈಗ ಮತ್ತೆ 25 ಕೋಟಿ ಸೇರಿದಂತೆ ಒಟ್ಟು ₹ 75 ಕೋಟಿ ನೀಡಲಾಗಿದೆ. ಬಜೆಟ್‌ನಲ್ಲಿ ಸರ್ಕಾರ ಹೊಸ ಕಾರ್ಖಾನೆಗೆ ₹ 100 ಕೋಟಿ ಅನುದಾನವನ್ನು ಮೀಸಲಿಟ್ಟಿದ್ದು, ಉಳಿದ ₹ 400 ಕೋಟಿ ಹಣವನ್ನು ಸರ್ಕಾರದ ವತಿಯಿಂದಲೇ ಸಾಲ ಸೌಲಭ್ಯ ಪಡೆದು ಅತ್ಯಾಧುನಿಕ ತಂತ್ರಜ್ಞಾನದ ಸಕ್ಕರೆ ಕಾರ್ಖಾನೆ ನಿರ್ಮಾಣ ಮಾಡಲಾಗುವುದು’ ಎಂದರು.

ADVERTISEMENT

‘ನೂತನ ಸಕ್ಕರೆ ಕಾರ್ಖಾನೆ ನಿರ್ಮಾಣಕ್ಕೆ ಮೈಷುಗರ್‌ ಆಸ್ತಿಯೇ ಆಗಿರುವ ಸಾತನೂರು ಫಾರಂ ಸೂಕ್ತ ಜಾಗವಾಗಿದೆ. ಈಗಿರುವ ಕಾರ್ಖಾನೆ ಜಾಗದಲ್ಲಿ ಸಾಫ್ಟ್‌ವೇರ್ ಪಾರ್ಕ್ ನಿರ್ಮಾಣವಾದರೆ ಸಾವಿರಾರು ಉದ್ಯೋಗಾಕಾಶಗಳು ದೊರಕಲಿದ್ದು ಯುವಕರಿಗೆ ಅನುಕೂಲವಾಗಲಿದೆ’ ಎಂದರು.

‘ತಾಲ್ಲೂಕಿನ ವಿ.ಸಿ.ಫಾರಂನಲ್ಲಿ ಕೃಷಿ ವಿಶ್ವವಿದ್ಯಾನಿಲಯ ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ. ಕೃಷಿ ಅಧಾರಿತ ಜಿಲ್ಲೆಯಲ್ಲಿ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆಯಾದರೆ ಹೊಸ ಸಂಶೋಧನೆಗಳು ನಡೆಯಲು ಅನುಕೂಲವಾಗಲಿದೆ. ಬಸರಾಳು, ದುದ್ದ, ನಾಗಮಂಗಲ ಭಾಗದ ನಾಲೆಗಳ ದುರಸ್ತಿಗೂ ಬಜೆಟ್‌ನಲ್ಲಿ ಹಣ ನೀಡಲಾಗಿದೆ. ಸಾರ್ವಜನಿಕ ಆರೋಗ್ಯ ಪ್ರಯೋಗಾಲಯ, ಮಿಮ್ಸ್ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸಾ ವಿಭಾಗ ಮೇಲ್ದರ್ಜೆಗೇರಿಸುವ ಘೋಷಣೆಗಳು ಅಶಾದಾಯಕವಾಗಿವೆ’ ಎಂದರು.

‘ನಮ್ಮ ಸರ್ಕಾರ ನುಡಿದಂತೆ ನಡೆದಿದೆ. ಈ ಹಿಂದೆ 2019ರಲ್ಲಿದ್ದ ಜೆಡಿಎಸ್ ಸರ್ಕಾರ ಕೇವಲ ಘೋಷಣೆ ಮಾಡಿ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಆದರೆ ಶೀಘ್ರ ಹೊಸ ಕಾರ್ಖಾನೆ ನಿರ್ಮಾಣ ಕಾಮಗಾರಿ ಆರಂಭಗೊಳ್ಳಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಭೂಮಿಪೂಜೆ ನೆರವೇರಿಸುವರು’ ಎಂದರು.

‘ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಕೈಗೊಂಡಿರುವ ಜನಸ್ಪಂದನ ಯಾತ್ರೆ ಬಹಳ ಚೆನ್ನಾಗಿ ನಡೆಯುತ್ತಿದೆ. ಇದರಿಂದ ಸ್ಥಳೀಯವಾಗಿ ಸಮಸ್ಯೆಗಳನ್ನು ಗುರುತಿಸಿ ಅವುಗಳನ್ನು ಬಗೆಹರಿಸಲು ಪ್ರಯತ್ನ ನಡೆಸುತ್ತಿದ್ದೇನೆ. ಜಿಲ್ಲಾಸ್ಪತ್ರೆಯಲ್ಲಿರುವ ವೈದ್ಯರು ಪ್ರಾಮಾಣಿಕವಾಗಿ ಮನಸ್ಸಿನಿಂದ ಕೆಲಸ ಮಾಡಬೇಕು. ನಾನು ವೈದ್ಯರ ಅಲಭ್ಯತೆ ಬಗ್ಗೆ ಸಾಕಷ್ಟು ಬಾರಿ ಅವರೊಂದಿಗೆ ಚರ್ಚೆ ಮಾಡಿದ್ದೇನೆ’ ಎಂದರು.

ನಗರಸಭೆ ಸದಸ್ಯ ಶ್ರೀಧರ್, ಮುಖಂಡರಾದ ಸಿ.ತ್ಯಾಗರಾಜು, ಎಚ್.ಕೆ.ರುದ್ರಪ್ಪ, ಜಿ.ಸಿ.ಆನಂದ್ ಇದ್ದರು.

ಕಾರ್ಖಾನೆಯೇ ರಾಮಮಂದಿರ :

ಮೈಷುಗರ್‌ ಕಾರ್ಖಾನೆ ಜಿಲ್ಲೆಯ ಜನರ ಬದುಕಾಗಿದೆ. ಕಾರ್ಖಾನೆಯೇ ನಮ್ಮ ಪಾಲಿಗೆ ಅಯೋಧ್ಯೆಯಲ್ಲಿರುವ ರಾಮಮಂದಿರ ಕಾಶಿಯಲ್ಲಿರುವ ವಿಶ್ವನಾಥ ಮಂದಿರವಾಗಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರಯತ್ನದ ಫಲವಾಗಿ ನಿರ್ನಾಣವಾಗಿರುವ ಮೈಸೂರು ಸಕ್ಕರೆ ಕಾರ್ಖಾನೆ ಜೀವನಾಡಿಯಾಗಿದೆ’ ಎಂದು ಗಣಿಗ ರವಿಕುಮಾರ್‌ ಹೇಳಿದರು. ‘ಹೊಸ ಸಕ್ಕರೆ ಕಾರ್ಖಾನೆ ನಿರ್ಮಾಣದ ಹಿನ್ನೆಲೆಯಲ್ಲಿ ಜಿಲ್ಲೆಯ ರೈತರಿಂದ ಮಣ್ಣು ಸಂಗ್ರಹ ಮಾಡಲಾಗುವುದು. ಇದರಿಂದ ರೈತರು ಸೇರಿದಂತೆ ಜಿಲ್ಲೆಯ ಜನತೆಗೂ ಕಾರ್ಖಾನೆ ನಮ್ಮದು ಎಂಬ ಭಾವನೆ ಮೂಡಲಿದೆ. ಪ್ರತಿ ಮನೆಯಿಂದ ಒಂದು ಹಿಡಿ ಮಣ್ಣನ್ನು ಸಂಗ್ರಹಿಸಿ ಕಾರ್ಖಾನೆ ನಿರ್ಮಾಣಕ್ಕೆ ಬಳಸಿಕೊಳ್ಳಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.