
ಶ್ರೀರಂಗಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿಯವರ ಕಚೇರಿ ಮತ್ತು ಸಾರ್ವಜನಿಕ ಆಸ್ಪತ್ರೆಯ ಸಹಯೋಗದಲ್ಲಿ ಗುರುವಾರ ಏರ್ಪಡಿಸಿದ್ದ ‘ರಾಷ್ಟ್ರೀಯ ನವಜಾತ ಶಿಶು ಸಪ್ತಾಹ’ವನ್ನು ಮಕ್ಕಳ ತಜ್ಞ ಡಾ.ಶ್ರೀಧರ ಉದ್ಘಾಟಿಸಿದರು
ಶ್ರೀರಂಗಪಟ್ಟಣ: ‘ಜೀವಮಾನದ ಆರೋಗ್ಯ ಮತ್ತು ಅಭಿವೃದ್ಧಿ ಉತ್ತಮವಾಗಿ ಇರಬೇಕಾದರೆ ನವಜಾತ ಶಿಶುವಿನ ಆರೋಗ್ಯ ಬಗ್ಗೆ ನಿಗಾ ವಹಿಸಬೇಕು’ ಎಂದು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಮಕ್ಕಳ ತಜ್ಞ ಡಾ.ಶ್ರೀಧರ ಸಲಹೆ ನೀಡಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿಯವರ ಕಚೇರಿ ಮತ್ತು ಸಾರ್ವಜನಿಕ ಆಸ್ಪತ್ರೆಯ ಸಹಯೋಗದಲ್ಲಿ ಗುರುವಾರ ಏರ್ಪಡಿಸಿದ್ದ ‘ರಾಷ್ಟ್ರೀಯ ನವಜಾತ ಶಿಶು ಸಪ್ತಾಹ’ ಉದ್ಘಾಟಿಸಿ ಅವರು ಮಾತನಾಡಿದರು. ‘ಜನಿಸಿದ ಮೊದಲ ಒಂದು ತಿಂಗಳು ಮಕ್ಕಳ ಉಳಿವಿಗಾಗಿ ನಿರ್ಣಾಯಕ ಅವಧಿಯಾಗಿದೆ. ಹಾಗಾಗಿ ತಾಯಂದಿರು ಎಚ್ಚರಿಕೆಯಿಂದ ಮಕ್ಕಳ ಆರೈಕೆ ಮಾಡಬೇಕು. ಎದೆಹಾಲು ಹೊರತುಪಡಿಸಿ ಇತರ ಸಿದ್ದ ಆಹಾರ ಕೊಡಬಾರದು. ಯಾವುದೇ ಸೋಂಕು ತಗುಲದಂತೆ ನೋಡಿಕೊಳ್ಳಬೇಕು’ ಎಂದು ತಿಳಿಸಿದರು.
ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞೆ ಡಾ.ಸವಿತಾ ಮಾತನಾಡಿ, ‘ನವಜಾತ ಶಿಶಿವಿಗೆ ತಾಯಿ ದಿನಕ್ಕೆ 8 ರಿಂದ 12 ಬಾರಿ ಹಾಲುಣಿಸಬೇಕು. ಶುಚಿತ್ವದ ಕಡೆ ಗಮನ ಕೊಡಬೇಕು. ಅತಿಯಾದ ಮೂತ್ರ ವಿಸರ್ಜನೆ, ವಾಂತಿ, ಮಲದೊಂದಿಗೆ ರಕ್ತ, ಕಣ್ಣಿನಲ್ಲಿ ಊತ, ಉಬ್ಬಿದ ಹೊಟ್ಟೆ, ಉಸಿರಾಟದ ತೊಂದರೆ ಕಾಣಿಸಿಕೊಂಡರೆ ಆಸ್ಪತ್ರೆಗೆ ಕರೆದೊಯ್ಯಬೇಕು’ ಎಂದು ಹೇಳಿದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ. ಬೆನ್ನೂರ ‘ಕಾಂಗರೂ ಮಾದರಿಯ ಆರೈಕೆ’ ಬಗ್ಗೆ ತಿಳಿಸಿದರು. ಶುಶ್ರೂಷಕ ಅಧೀಕ್ಷಕ ರುದ್ರಪ್ಪ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಿ.ಬಿ. ಹೇಮಣ್ಣ, ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ವಾಣಿ, ಸ್ಮಿತಾ, ಎನ್. ಶಿಲ್ಪಾ, ಕುಸುಮ, ಜೂಲಿ ಚಾಕೋ, ನಂಜಮಣಿ, ಕವಿತಾ, ಗಾಯತ್ರಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.