ಮಂಡ್ಯ: ‘ಧರ್ಮಸ್ಥಳ ಶ್ರೀಕ್ಷೇತ್ರದ ವಿರುದ್ಧ ಷಡ್ಯಂತ್ರ ರೂಪಿಸಲು ವಿದೇಶಿ ಫಂಡಿಂಗ್ ನಡೆದಿರುವ ಬಗ್ಗೆ ಅನುಮಾನ ಇದೆ. ಇದರ ಬಗ್ಗೆ ಸತ್ಯಾಸತ್ಯತೆ ಹೊರತರಲು ಎನ್‌ಐಎ ತನಿಖೆ ಅವಶ್ಯ. ಧರ್ಮಸ್ಥಳ ಪಾವಿತ್ರ್ಯವನ್ನು ಹಾಳು ಮಾಡಲು ಕೆಲವರು ಒಳಸಂಚು ರೂಪಿಸಿದ್ದಾರೆ’ ಎಂದು ರಾಜ್ಯ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆರೋಪಿಸಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಧರ್ಮಸ್ಥಳ ಪ್ರಕರಣದಲ್ಲಿ ವ್ಯವಸ್ಥಿತ ಪಿತೂರಿ ನಡೆದಿದೆ. ರಾಜ್ಯದ ಜನರಿಗೆ ಎಸ್‌ಐಟಿ ತನಿಖೆ ಮೇಲೆ ವಿಶ್ವಾಸವಿಲ್ಲ. ಹೀಗಾಗಿ ಎನ್‌ಐಎ ತನಿಖೆಗೆ ವಹಿಸಿದರೆ ಷಡ್ಯಂತ್ರ ಬಯಲಾಗಲಿದೆ’ ಎಂದರು.
ನೈತಿಕ ಬೆಂಬಲ ಸೂಚಿಸಲು ಯಾತ್ರೆ: ‘ಧರ್ಮಸ್ಥಳದ ಬಗ್ಗೆ ಕೆಲವರು ಅಪಪ್ರಚಾರ ಮಾಡುತ್ತಿದ್ದು, ವೀರೇಂದ್ರ ಹೆಗ್ಗಡೆ ಮತ್ತು ಅವರ ಕುಟುಂಬಕ್ಕೆ ನೈತಿಕ ಬೆಂಬಲ ವ್ಯಕ್ತಪಡಿಸಲು ವರಿಷ್ಠ ಎಚ್.ಡಿ. ದೇವೇಗೌಡ ಮತ್ತು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಸೂಚನೆಯೆಂತೆ ಆ. 31ರಂದು ಜೆಡಿಎಸ್ ವತಿಯಿಂದ ‘ಧರ್ಮಸ್ಥಳ ಸತ್ಯಯಾತ್ರೆ’ಯನ್ನು ಹಮ್ಮಿಕೊಂಡಿದ್ದೇವೆ ಎಂದರು.
‘ಧರ್ಮಸ್ಥಳ ಯಾತ್ರೆಗೆ ಹಾಸನವನ್ನು ಕೇಂದ್ರ ಸ್ಥಾನವನ್ನಾಗಿ ಮಾಡಿದ್ದು, ಮುಖಂಡರು, ಕಾರ್ಯಕರ್ತರು ಹಾಸನಕ್ಕೆ ತೆರಳಲಿದ್ದಾರೆ. ಅಲ್ಲಿ ಉಪಾಹಾರ ವ್ಯವಸ್ಥೆ ಮಾಡಲಾಗಿದೆ. ಧರ್ಮಸ್ಥಳಕ್ಕೆ ತೆರಳಿ ನೇತ್ರಾವತಿಯಲ್ಲಿ ಸ್ನಾನ ಮಾಡಿ, ಮಂಜುನಾಥಸ್ವಾಮಿ ದೇವಸ್ಥಾನದವರೆಗೆ ಪಾದಯಾತ್ರೆ ಮಾಡುತ್ತೇವೆ ಎಂದು ವಿವರಿಸಿದರು.
ಮಾಜಿ ಸಚಿವರಾದ ಸಿ.ಎಸ್ ಪುಟ್ಟರಾಜು, ಡಿ.ಸಿ ತಮ್ಮಣ್ಣ, ಮಾಜಿ ಶಾಸಕ ಅನ್ನದಾನಿ, ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ. ಶ್ರೀಕಂಠೇಗೌಡ, ಮನ್‌ಮುಲ್ ಮಾಜಿ ಅಧ್ಯಕ್ಷ ರಾಮಚಂದ್ರು, ಮಂಡ್ಯ ಜಿಲ್ಲಾ ಘಟಕದ ಅಧ್ಯಕ್ಷ ಡಿ.ರಮೇಶ್, ರಾಜ್ಯ ಹಿಂದುಳಿದ ವರ್ಗದ ಅಧ್ಯಕ್ಷ ಜೈರಾಮ್, ಕಂಸಾಗರ ರವಿ, ಎಸ್.ಪಿ. ಸ್ವಾಮಿ ಹಾಜರಿದ್ದರು.
‘ಕೆಲವರು ನೀಡಿದ ದೂರಿನ ಮೇರೆಗೆ ತರಾತುರಿಯಲ್ಲಿ ಎಸ್‌ಐಟಿ ರಚಿಸಿದ ಬಗ್ಗೆ ನಮ್ಮ ಆಕ್ಷೇಪವಿದೆ. ಚಿನ್ನಯ್ಯ ಕೈಯಲ್ಲಿ ಹಿಡಿದ ಬುರುಡೆ ಬಗ್ಗೆ ಎಫ್‌ಎಸ್‌ಎಲ್ ವರದಿ ತರಿಸಬೇಕಿತ್ತು. ಎಸ್‌ಐಟಿ ಎಂಬುದು ಸಿದ್ದರಾಮಯ್ಯನವರ ತನಿಖಾ ಏಜೆನ್ಸಿ ಎಂಬಂತಾಗಿದೆ ಎಂದು ಎಚ್‌ಡಿಕೆ ಅವರು ಹೇಳಿಕೆ ನೀಡಿದ್ದಾರೆ. ಒಟ್ಟಿನಲ್ಲಿ 2028ರ ಚುನಾವಣೆ ಬಗ್ಗೆ ಕಾಂಗ್ರೆಸ್ ಆತಂಕಕ್ಕೆ ಒಳಗಾಗಿದೆ’ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.
ಬಿಜೆಪಿ ಮತ್ತು ಜೆಡಿಎಸ್‌ನಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಪ್ರತ್ಯೇಕ ಮತ್ತು ಒಗ್ಗೂಡಿ ಯಾವ ರೀತಿ ಹೋರಾಟ ಮಾಡಬೇಕು ಎಂಬುದನ್ನು ಪಕ್ಷದ ವರಿಷ್ಠರು ತೀರ್ಮಾನಿಸುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ನಮ್ಮ ತಂದೆ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಸೋಂಕಿಗೆ ಸಂಬಂಧಿಸಿದಂತೆ ಚಿಕಿತ್ಸೆ ನೀಡುವುದು ಸ್ವಲ್ಪ ತಡವಾದ ಕಾರಣ ಅವರ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಿತ್ತು. ಈಗ ಆರೋಗ್ಯವಾಗಿದ್ದಾರೆ. ಆತಂಕಪಡುವ ಅಗತ್ಯವಿಲ್ಲ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.