
ನಾಗಮಂಗಲ (ಮಂಡ್ಯ ಜಿಲ್ಲೆ): ‘ಸಂಘ ಸಂಸ್ಥೆಗಳು ಸಮಾಜಮುಖಿಯಾಗಿ ಕಾರ್ಯನಿರ್ವಹಿಸುವ ಮೂಲಕ ಆರ್ಥಿಕವಾಗಿ ಹಿಂದುಳಿದವರನ್ನು ಮೇಲೆತ್ತಬೇಕು. ಅದರೊಂದಿಗೆ ದುರ್ಬಲ ವರ್ಗದ ಧ್ವನಿಯಾಗಿ ಕರ್ತವ್ಯ ನಿರ್ವಹಿಸಿದಾಗ ಮಾತ್ರ ಸಮಾಜದ ಅಭಿವೃದ್ದಿ ಸಾಧ್ಯ’ ಎಂದು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಆದಿಚುಂಚನಗಿರಿ ಮಠದಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ಮಠದ ಬಿಜಿಎಸ್ ಸಭಾ ಭವನದಲ್ಲಿ ಶನಿವಾರ ಆಯೋಜಿಸಿದ್ದ ಒಕ್ಕಲಿಗರ ಸಂಘ ಸಂಸ್ಥೆಗಳ ಪದಾಧಿಕಾರಿಗಳ ಸಮಾವೇಶದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.
‘ಬಾಲಗಂಗಾಧರನಾಥ ಶ್ರೀಗಳು ಸಮುದಾಯ ಹಾಗೂ ಸಮಾಜದ ಜ್ಯೋತಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಇಂತಹ ಶ್ರೇಷ್ಠ ಗುರುಗಳ ಸಮಾಜಮುಖಿ ಕೆಲಸಗಳು ಆದರ್ಶವಾಗಬೇಕು. ಶ್ರೀಮಠದ ವತಿಯಿಂದ ಹಲವು ಸಮಾಜಮುಖಿ ಕಾರ್ಯಗಳು ನಿರಂತರವಾಗಿ ನಡೆಯುತ್ತಿವೆ’ ಎಂದು ತಿಳಿಸಿದರು.
ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥಸ್ವಾಮೀಜಿ ಮಾತನಾಡಿ, ‘ಸಮಾಜದ ಅಭಿವೃದ್ಧಿಗೆ ತೊಡಗಿಸಿಕೊಳ್ಳುವ ಸಲುವಾಗಿ ಸಮಾವೇಶ ಆಯೋಜಿಸಲಾಗಿದೆ’ ಎಂದರು.
ಕೆಸಿಡಿಸಿಎಲ್ ಅಧ್ಯಕ್ಷ ಎ.ಎನ್.ನಟರಾಜ್, ಶಿವಮೊಗ್ಗ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ರಮೇಶ್, ಮೈಸೂರಿನ ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್‌ನ ಅಧ್ಯಕ್ಷ ರವಿಕುಮಾರ್ ಹಾಗೂ ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಶ್ರೀನಿವಾಸ್ ಮಾತನಾಡಿದರು. ಒಕ್ಕಲಿಗರ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಅಭಿಪ್ರಾಯಗಳನ್ನು ಹಂಚಿಕೊಂಡರು.
ಶ್ರೀಮಠದ ಚೈತನ್ಯನಾಥಸ್ವಾಮೀಜಿ, ರಾಜ್ಯ ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಗಂಗಾಧರ್, ನಿರ್ದೇಶಕ ನೆಲ್ಲಿಗೆರೆ ಬಾಲು, ಕೋನಪ್ಪರೆಡ್ಡಿ, ಮೈಸೂರಿನ ಗಂಗಾಧರ್, ಶ್ರೀಧರ್, ಮಂಜೇಗೌಡ, ಚಿತ್ರದುರ್ಗದ ರಾಘವೇಂದ್ರ, ತುಮಕೂರಿನ ಹನುಮಂತರಾಯಪ್ಪ, ರಾಜ್ಯ ಒಕ್ಕಲಿಗರ ಸಂಘದ ಮಾಜಿ ಉಪಾಧ್ಯಕ್ಷ ಎಚ್.ಟಿ.ಕೃಷ್ಣೇಗೌಡ, ಶ್ರೀನಿವಾಸಯ್ಯ, ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಎ.ಟಿ.ಶಿವರಾಮು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.