ADVERTISEMENT

ಗುರು ಸ್ಮರಣೆಯಿಂದ ಮುಕ್ತಿ ಪ್ರಾಪ್ತಿ: ನಿರ್ಮಲಾನಂದನಾಥ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 19 ಜನವರಿ 2026, 5:32 IST
Last Updated 19 ಜನವರಿ 2026, 5:32 IST
ನಾಗಮಂಗಲ ತಾಲ್ಲೂಕಿನ ಶ್ರೀಕ್ಷೇತ್ರ ‌ಆದಿಚುಂಚನಗಿರಿಯ ಬಿಜಿಎಸ್ ಸಭಾ ಮಂಟಪದಲ್ಲಿ ಭಾನುವಾರ ಭೈರವೈಕ್ಯ ಬಾಲಗಂಗಾಧರನಾಥ ಸ್ವಾಮೀಜಿಯವರ 81ನೇ ಜಯಂತ್ಯುತ್ಸವ ಮತ್ತು 13ನೇ ವರ್ಷದ ಸಂಸ್ಮರಣೆ‌ ಅಂಗವಾಗಿ ಆಯೋಜಿಸಿದ್ದ ‘ಸಂತ ಭಕ್ತ ಸಂಗಮ’ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಉದ್ಘಾಟಿಸಿದರು. ನಿರ್ಮಲಾನಂದನಾಥ ಸ್ವಾಮೀಜಿ ಮತ್ತು ಗಣ್ಯರು ಇದ್ದರು
ನಾಗಮಂಗಲ ತಾಲ್ಲೂಕಿನ ಶ್ರೀಕ್ಷೇತ್ರ ‌ಆದಿಚುಂಚನಗಿರಿಯ ಬಿಜಿಎಸ್ ಸಭಾ ಮಂಟಪದಲ್ಲಿ ಭಾನುವಾರ ಭೈರವೈಕ್ಯ ಬಾಲಗಂಗಾಧರನಾಥ ಸ್ವಾಮೀಜಿಯವರ 81ನೇ ಜಯಂತ್ಯುತ್ಸವ ಮತ್ತು 13ನೇ ವರ್ಷದ ಸಂಸ್ಮರಣೆ‌ ಅಂಗವಾಗಿ ಆಯೋಜಿಸಿದ್ದ ‘ಸಂತ ಭಕ್ತ ಸಂಗಮ’ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಉದ್ಘಾಟಿಸಿದರು. ನಿರ್ಮಲಾನಂದನಾಥ ಸ್ವಾಮೀಜಿ ಮತ್ತು ಗಣ್ಯರು ಇದ್ದರು   

ನಾಗಮಂಗಲ: ‘ಈ ಜಗತ್ತು ಒಂದು ಸೆರೆಮನೆ. ಮಾಡಿದ ತಪ್ಪುಗಳನ್ನು ಪುನರಾವರ್ತಿಸಿ ನಾವು ಸೆರೆಮನೆಯಲ್ಲಿದ್ದೇವೆ. ತಪ್ಪು ಮಾಡಿದವರನ್ನು ಉದ್ಧರಿಸಿ ಸೆರೆಮನೆಯಿಂದ ಮುಕ್ತಿ ನೀಡಲು ಜ್ಞಾನಿಗಳು ಅವತರಿಸುತ್ತಾರೆ. ಅಂತಹ ಅವತಾರ ಪುರುಷ ಬಾಲಗಂಗಾಧರನಾಥ ಸ್ವಾಮೀಜಿ’ ಎಂದು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಶ್ರೀಕ್ಷೇತ್ರ ‌ಆದಿಚುಂಚನಗಿರಿಯ ಬಿಜಿಎಸ್ ಸಭಾಮಂಟಪದಲ್ಲಿ ಭೈರವೈಕ್ಯ ಬಾಲಗಂಗಾಧರನಾಥ ಸ್ವಾಮೀಜಿಯವರ 81ನೇ ಜಯಂತ್ಯುತ್ಸವ ಮತ್ತು 13ನೇ ವರ್ಷದ ಸಂಸ್ಮರಣೆ‌ ಅಂಗವಾಗಿ ಆಯೋಜಿಸಿದ್ದ ‘ಸಂತ ಭಕ್ತ ಸಂಗಮ’ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

‘ಕೆಟ್ಟ ಕರ್ಮದ ಫಲ ಬೆಂಬಿಡದೇ ಇರದು. ಕರ್ಮದ ಫಲ ಪ್ರಾರಂಭವಾದಾಗ ಬದುಕು ದುಸ್ತರವಾಗುತ್ತದೆ. ಗುರು ಸ್ಮರಣೆಯಿಂದ ಕೆಟ್ಟ ಕರ್ಮಫಲ ಅಳಿದು ಮುಕ್ತಿ ದೊರೆಯುತ್ತದೆ. ತ್ರಿವಿಧ ದಾಸೋಹದ ಮೂಲಕ ಅಪಾರ ಕೊಡುಗೆ ನೀಡಿ ಉದ್ಧರಿಸಿದ ಈ ಯುಗದ ಮಹಾಸಂತ. ಅವರನ್ನು ಸ್ಮರಿಸಿ ಪೂಜಿಸುವ ಪುಣ್ಯದಿನವಿದು’ ಎಂದು ಮಾತನಾಡಿದರು. 

ADVERTISEMENT

ರಾಷ್ಟ್ರ, ಧರ್ಮ ಕಟ್ಟಿದ ಮಹಾನ್‌ ಸಂತ:

ಚಿತ್ರದುರ್ಗದ ಮಾದಾರ ಚೆನ್ನಯ್ಯ ಬಸವಮೂರ್ತಿ ಸ್ವಾಮೀಜಿ ಮಾತನಾಡಿ, ‘ಚುಂಚಶ್ರೀಗಳು ರಾಷ್ಟ್ರದ ಜೊತೆಗೆ ಧರ್ಮವನ್ನೂ ಕಟ್ಟಿದ ಮಹಾನ್ ಸಂತ. ಭಾರತದಲ್ಲಿನ ಜಾತಿ, ಮತ, ಧರ್ಮಗಳ ಗಡಿ ದಾಟಿ ಮಹಿಳೆಯರಿಗೆ, ದೀನರಿಗೆ, ದಲಿತರಿಗೆ, ಸಮಾಜಮುಖಿ ಬದುಕು ನೀಡಿದ ಮಹಾನ್ ಜ್ಞಾನಿ’ ಎಂದರು.

ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿಧಾನ ಪರಿಷತ್ ಸದಸ್ಯ ಡಾ.ಕೆ. ಗೋವಿಂದರಾಜು, ಮಾಗಡಿ ಶಾಸಕ ಬಾಲಕೃಷ್ಣ ಮಾತನಾಡಿದರು.

ಶ್ರೀಗಳ ಪುಣ್ಯ ಸ್ಮರಣೆಯ ಅಂಗವಾಗಿ ಏಳು ದಿನಗಳ ಕಾಲ ನಡೆದ ಹೋಮ ಹವನಾದಿ ಪೂಜಾ ಕೈಂಕರ್ಯಗಳು, ವಿವಿಧ ಕಾರ್ಯಕ್ರಮಗಳು ಭಾನುವಾರ ಸಂಪನ್ನಗೊಂಡವು.

ಕಾರ್ಯಕ್ರಮದಲ್ಲಿ ಮಂಡ್ಯ ಜಿಲ್ಲಾಧಿಕಾರಿ ಕುಮಾರ, ಹಿರಿಯ ಯತಿ ಪುರುಷೋತ್ತಮಾನಂದನಾಥ ಸ್ವಾಮೀಜಿ, ಹಾಸನ‌ ಶಾಖಾ ಮಠದ ಶಂಭೂನಾಥ ಸ್ವಾಮೀಜಿ, ಚಿತ್ರದುರ್ಗ ಕಬೀರಾನಂದ ಆಶ್ರಮದ ಶಿವಲಿಂಗಾನಂದ ಸ್ವಾಮೀಜಿ, ಕುಂಬಳಗೋಡಿನ ಪ್ರಕಾಶನಾಥ ಸ್ವಾಮೀಜಿ, ಕೆ.ಆರ್. ಪೇಟೆ ಮಾಜಿ ಶಾಸಕ ಕೆ.ಬಿ. ಚಂದ್ರಶೇಖರ್, ಮಾಹಿತಿ ಆಯೋಗದ ಆಯುಕ್ತ ರಾಜಶೇಖರ್, ತುಮಕೂರಿನ ಮಾಜಿ ಶಾಸಕ ಎಚ್. ನಿಂಗಪ್ಪ ಮತ್ತು ಶಾಖಾ ಮಠಗಳ ಸ್ವಾಮೀಜಿಗಳು ಪಾಲ್ಗೊಂಡಿದ್ದರು. 

‘ಸಂತ ಭಕ್ತ ಸಂಗಮ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶ್ರೀಮಠದ ಭಕ್ತರು
ಅನ್ನ ಅಕ್ಷರ ಆರೋಗ್ಯ ತ್ರಿವಿಧ ದಾಸೋಹ ತತ್ವಗಳ ಮೂಲಕ ಇಡೀ ಜನ ಸಮುದಾಯಕ್ಕೆ ಶಕ್ತಿ ತುಂಬಿದವರು ಆದಿಚುಂಚನಗಿರಿಯ
ಬಾಲಗಂಗಾಧರನಾಥ ಸ್ವಾಮೀಜಿ – ಸಿ.ಎನ್. ಅಶ್ವತ್ಥ್‌ ನಾರಾಯಣ್ ಶಾಸಕ 
‘ಬಡವರ ಕಾಮಧೇನು ಚುಂಚಶ್ರೀ’
ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ ‘ಸರ್ಕಾರವೂ ಮಾಡಲಾಗದ ರೀತಿಯಲ್ಲಿ ಬಡವರ ಕಲ್ಯಾಣಕ್ಕೆ ಪೂರಕ ಶಕ್ತಿಯಾಗಿ ಶ್ರೀಮಠ ನಿಂತಿದೆ. ಪ್ರತಿ ಕುಟುಂಬದ ಸಬಲತೆಗೆ ಒಂದಲ್ಲ ಒಂದು ರೀತಿಯಲ್ಲಿ ಸಹಕರಿಸಿ ಬಡವರ ಕಾಮಧೇನುವಾಗಿದೆ’ ಎಂದರು. ಇಡೀ ರಾಜ್ಯದಲ್ಲಿ ಸರ್ಕಾರೇತರ ಕೃಷಿ ವಿಜ್ಞಾನ ಕಾಲೇಜು ಕರ್ನಾಟಕ ಸರ್ಕಾರದ ಸಹಕಾರದಿಂದ ಶ್ರೀಗಳ ಆಶೀರ್ವಾದದಿಂದ ಸಾಕಾರಗೊಂಡಿರುವುದು ಶ್ರೀಮಠದ ಹೆಗ್ಗಳಿಕೆಯಲ್ಲೊಂದು. ಮುಂದುವರಿದು ಪಶು ವೈದ್ಯಕೀಯ ಕಾಲೇಜನ್ನೂ ಸ್ಥಾಪಿಸುವ ಗುರುಗಳ ಉದ್ದೇಶವು ಸದ್ಯದಲ್ಲೇ ಕೈಗೂಡಲಿದೆ ಶುಭವಾಗಲಿ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.