ADVERTISEMENT

ಕನ್ನಂಬಾಡಿಯಲ್ಲಿ ನೀರಿಗಿಂತ ಹೂಳೇ ಅಧಿಕ!

ಮಂಡ್ಯದಲ್ಲಿ ಕಾವೇರಿ ಮಾತೆಗೆ ಪೂಜೆ: ನಿಶ್ಚಲಾನಂದನಾಥ ಸ್ವಾಮೀಜಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2025, 9:41 IST
Last Updated 18 ಅಕ್ಟೋಬರ್ 2025, 9:41 IST
ತಲಕಾವೇರಿಯಲ್ಲಿ ಕಾವೇರಿ ತೀಥೋದ್ಭವ ಅಂಗವಾಗಿ ಮಂಡ್ಯದ ಕಾವೇರಿ ಉದ್ಯಾನದಲ್ಲಿ ಶುಕ್ರವಾರ ನಿಶ್ಚಲಾನಂದನಾಥ ಸ್ವಾಮೀಜಿ ಮತ್ತು ಗಣ್ಯರು ಕಾವೇರಿ ಮೂರ್ತಿಗೆ ಪೂಜೆ ಸಲ್ಲಿಸಿದರು 
ತಲಕಾವೇರಿಯಲ್ಲಿ ಕಾವೇರಿ ತೀಥೋದ್ಭವ ಅಂಗವಾಗಿ ಮಂಡ್ಯದ ಕಾವೇರಿ ಉದ್ಯಾನದಲ್ಲಿ ಶುಕ್ರವಾರ ನಿಶ್ಚಲಾನಂದನಾಥ ಸ್ವಾಮೀಜಿ ಮತ್ತು ಗಣ್ಯರು ಕಾವೇರಿ ಮೂರ್ತಿಗೆ ಪೂಜೆ ಸಲ್ಲಿಸಿದರು    

ಮಂಡ್ಯ: ‘ಕೆಆರ್‌ಎಸ್‌ ಅಣೆಕಟ್ಟೆಯಲ್ಲಿ ನೀರು ತುಂಬಿರುವುದಕ್ಕಿಂತ ಹೂಳು ತುಂಬಿರುವುದೇ ಹೆಚ್ಚಿದೆ. ಕಾವೇರಿ ನಾಡಿನಲ್ಲಿ ಜ್ವಲಂತ ಸಮಸ್ಯೆಗಳಿವೆ. ಅಮೂಲ್ಯವಾದ ಜೀವಜಲವನ್ನು ಸಂರಕ್ಷಿಸಬೇಕು’ ಎಂದು ಕೆಂಗೇರಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ನಿಶ್ಚಲಾನಂದನಾಥ ಸ್ವಾಮೀಜಿ ಸಲಹೆ ನೀಡಿದರು.

ತಲಕಾವೇರಿಯಲ್ಲಿ ಕಾವೇರಿ ತೀಥೋದ್ಭವ ಅಂಗವಾಗಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಕಾವೇರಿ ಉದ್ಯಾನದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಟ್ರಸ್ಟ್ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಕಾವೇರಿ ಮಾತೆಗೆ ಪೂಜೆ, ಅಭಿನಂದನಾ ಸಮಾರಂಭ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಕನ್ನಂಬಾಡಿ ತುಂಬಿದೆ ಎಂದು ಖುಷಿಪಡುವ ಅಗತ್ಯವಿಲ್ಲ. ನೀರಿನ ಮಟ್ಟ ಕಡಿಮೆ ಇದ್ದು, ಹೂಳಿನ ಪ್ರಮಾಣ ಅಧಿಕವಾಗಿದೆ. ಹಲವು ಬಾರಿ ನಾಡಿನಲ್ಲಿ ಬರ ಬಂದು ಜಲಾಶಯ ಖಾಲಿಯಾದ ಸಂದರ್ಭದಲ್ಲಿ ನಾವು ಏನೆಲ್ಲಾ ಅನುಭವಿಸಿದ್ದೇವೆ ಎಂಬುದು ಎಲ್ಲರಿಗೂ ಗೊತ್ತಿದೆ. ಮಳವಳ್ಳಿ ಮತ್ತು ಮದ್ದೂರು ಕೊನೇ ಭಾಗದ ರೈತರಿಗೂ ನೀರು ತಲುಪಲಿ’ ಎಂದರು. 

ADVERTISEMENT

ಕಾವೇರಿ ಆರತಿ ಮುಂದುವರಿಯಲಿ:

‘ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ದೂರದೃಷ್ಟಿಯಿಂದಾಗಿ ಕೃಷ್ಣರಾಜಸಾಗರ ಜಲಾಶಯ ನಿರ್ಮಾಣವಾಗಿ ಈ ಭಾಗದಲ್ಲಿ ನೀರಾವರಿ ಪ್ರದೇಶವಾಗುವುದರ ಜೊತೆಗೆ ಹಲವು ಜಿಲ್ಲೆಗಳ ಜನರ ದಾಹ ತಣಿಸುತ್ತಿರುವ ಕಾವೇರಿ ಮಾತೆಯನ್ನು ಪೂಜೆಸುವುದು ಪ್ರತಿಯೊಬ್ಬರ ಕರ್ತವ್ಯ. ರಾಜ್ಯ ಸರ್ಕಾರವು ಕೃಷ್ಣರಾಜಸಾಗರ ಜಲಾಶಯದ ಬಳಿ ಕಾವೇರಿ ಆರತಿ ಕಾರ್ಯಕ್ರಮವನ್ನು ಈ ವರ್ಷದಿಂದ ಪ್ರಾರಂಭ ಮಾಡಿದೆ. ಇದು ನಿರಂತರವಾಗಿ ನಡೆಯುವಂತಾಗಲಿ’ ಎಂದು ಆಶಿಸಿದರು.

ಆದಿಚುಂಚನಗಿರಿ ಮಠದ ಶಂಭುನಾಥ ಸ್ವಾಮೀಜಿ ಮಾತನಾಡಿ, ‘ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಉತ್ತಮ ಕೆಲಸ ಮಾಡಿದ್ದಾರೆ. ಅವರು ಮಾಡಿರುವ ಕಾರ್ಯಗಳಿಂದ ಅವರು ಚಿರಸ್ಥಾಯಿಯಾಗಿದ್ದಾರೆ. ಈಗಿನ ಸರ್ಪಾರಗಳು ರಾಗದ್ವೇಷ ಬಿಟ್ಟು ರೈತರಿಗೆ ಶಾಶ್ವತ ಕೆಲಸಗಳನ್ನು ಮಾಡುವ ಮೂಲಕ ಸಮಾಜಕ್ಕೆ ಕೊಡುಗೆ ನೀಡಬೇಕು’ ಎಂದು ತಿಳಿಸಿದರು.

ಆಹಾರ ಆಯೋಗದ ಅಧ್ಯಕ್ಷ ಡಾ.ಎಚ್. ಕೃಷ್ಣ, ಮನ್‌ಮುಲ್‌ ಅಧ್ಯಕ್ಷ ಯು.ಸಿ.ಶಿವಕುಮಾರ್(ಶಿವಪ್ಪ) ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಶಾಖಾ ಮಠದ ಪುರುಷೋತ್ತಮಾನಂದನಾಥ ಸ್ವಾಮೀಜಿ, ಕೀರ್ತಿ ನಂದನಾಥ ಸ್ವಾಮಿಜೀ, ಮಾಜಿ ಶಾಸಕ ಎಂ.ಶ್ರೀನಿವಾಸ್, ನಗರಸಭೆ ಅಧ್ಯಕ್ಷ ಎಂವಿ.ಪ್ರಕಾಶ್, ಕರ್ನಾಟಕ ಸಂಘದ ಅಧ್ಯಕ್ಷ ಜಯಪ್ರಕಾಶಗೌಡ, ಟ್ರಸ್ಟ್ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.