ADVERTISEMENT

ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯ

ವಿದ್ಯುತ್‌ ಕಣ್ಣಾಮುಚ್ಚಾಲೆಯಿಂದ ಸಮರ್ಪಕ ಪೂರೈಕೆಯಲ್ಲಿ ವ್ಯತ್ಯಯ, ಬೇಸಿಗೆಯಲ್ಲಿ ಜನರ ಪರದಾಟ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2021, 5:26 IST
Last Updated 12 ಏಪ್ರಿಲ್ 2021, 5:26 IST
ಕೆರಗೋಡು ಸಮೀಪದ ಗಣಿಗ ಗ್ರಾಮದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತಗೊಂಡಿರುವುದು
ಕೆರಗೋಡು ಸಮೀಪದ ಗಣಿಗ ಗ್ರಾಮದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತಗೊಂಡಿರುವುದು   

ಮಂಡ್ಯ: ಬಿಸಿಲಿನ ಝಳ ರಣಕೇಕೆ ಹಾಕುತ್ತಿದ್ದು, ಮಂಡ್ಯ ತಾಲ್ಲೂಕಿನ ಗ್ರಾಮಾಂತರ ಪ್ರದೇಶದ ಹಲವು ಭಾಗ ದಲ್ಲಿ ಜನರು ಕುಡಿಯುವ ನೀರಿನ ಕೊರತೆ ಎದುರಿಸುತ್ತಿದ್ದಾರೆ. ನೀರಿದ್ದರೂ ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ನಿಗದಿತವಾಗಿ ನೀರು ಸರಬರಾಜು ಮಾಡಲು ಗ್ರಾಮ ಪಂಚಾಯಿತಿಗಳಿಗೆ ಸಾಧ್ಯವಾಗುತ್ತಿಲ್ಲ.

ಕೆರಗೋಡು, ಬಸರಾಳು, ದುದ್ದ, ಕೊತ್ತತ್ತಿ ಹಾಗೂ ಕಸಬಾ ಹೋಬಳಿಗಳ ಹಲವು ಗ್ರಾಮಗಳಲ್ಲಿ ಕೊಳವೆ ಬಾವಿಗಳಲ್ಲಿ ನೀರು ಕಡಿಮೆಯಾಗಿದೆ. ಹೀಗಾಗಿ ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಜತೆಗೆ ಪೈಪ್‌ಗಳು ಒಡೆದು ವಾರಗಟ್ಟಲೆ ನೀರು ವ್ಯರ್ಥವಾಗುತ್ತಿದೆ. ನೀರು ಸರಬರಾಜು ಕೂಡ ಸರಿಯಾಗಿ ಆಗುತ್ತಿಲ್ಲ. ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ ಗ್ರಾಮೀಣ ಜನರು ಸಮಸ್ಯೆ ಎದುರಿಸುವಂತಾಗಿದೆ.

ಮಂಡ್ಯ ತಾಲ್ಲೂಕಿನ ವಿವಿಧೆಡೆ ಕೊಳವೆಬಾವಿ ರಿಪೇರಿಯಾಗದ ಸಮಸ್ಯೆ ವಿಪರೀತವಾಗಿವೆ. ಗ್ರಾಮ ಪಂಚಾಯಿತಿ ಸಿಬ್ಬಂದಿ ಕೆಇಬಿ ಅಧಿಕಾರಿಗಳ ಮೇಲೆ ಬೆರಳು ತೋರಿದರೆ, ಕೆಇಬಿ ಸಿಬ್ಬಂದಿ ಗ್ರಾಮಪಂಚಾಯಿತಿ ಅಧಿಕಾರಿಗಳ ಮೇಲೆ ಹೇಳುತ್ತಿದ್ದಾರೆ. ಅಧಿಕಾರಿಗಳ ಸಮನ್ವಯತೆಯಿಂದಾಗಿ ಹಳ್ಳಿಗಳ ಜನರು ಕುಡಿಯುವ ನೀರು ಪಡೆಯಲು ಪರದಾಡುವಂತಾಗಿದೆ.

ADVERTISEMENT

ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಎದುರಾಗುತ್ತಿರುವ ಗ್ರಾಮಗಳನ್ನು ಈಗಾಗಲೇ ಗುರುತಿ ಸಲಾಗಿದೆ. ಅರಸಿನಗೆರೆ ಗೇಟ್, ಶಿವಪುರ, ಬೊಂತೆಕೊಪ್ಪಲು, ಮಾಯಣ್ಣನಕೊಪ್ಪಲು, ಮುದ್ಧನಘಟ್ಟ, ಶ್ಯಾನುಭೋಗನಹಳ್ಳಿ, ಬಸರಾಳು, ಕೆಂಚನಹಳ್ಳಿ, ಎಂ.ಹಟ್ನ, ಹುನುಗನಹಳ್ಳಿ, ಮುತ್ತೇಗೆರೆ, ಬೇಬಿ, ತರಣಿಗೆರೆ, ಹನಗನಹಳ್ಳಿ, ಆನಸೋಸಲು, ಆಲಕೆರೆ, ಹೊನಗಳ್ಳಿಮಠ ಕಾಲೊನಿ, ಹುಲಿವಾನ, ಎಸ್.ಐ.ಕೋಡಿಹಳ್ಳಿ, ಗೋಪಾಲಪುರ, ಎಚ್.ಕೋಡಿಹಳ್ಳಿ ಫಾರಂ, ಹನಕೆರೆ, ಮಲ್ಲಯ್ಯನದೊಡ್ಡಿ, ತುಂಬಕೆರೆ, ಕಾಗೆಹಳ್ಳದದೊಡ್ಡಿ, ಜವನೇಗೌಡನದೊಡ್ಡಿ, ಬಿ.ಗೌಡಗೆರೆ, ಕಟ್ಟೆದೊಡ್ಡಿ, ಹಳೇಬೂದನೂರು, ಹೊಸಬೂದನೂರು, ಪಣಕನಹಳ್ಳಿ, ತೂಬಿನಕೆರೆ. ಎಲೆಚಾಕನಹಳ್ಳಿ, ನೊದೆಕೊಪ್ಪಲು, ಯಲಿಯೂರು ಆಶ್ರಯ ಬಡಾವಣೆ, ಕಾರಸವಾಡಿ, ವಿನಾಯಕ ಬಡಾವಣೆ, ಅನ್ನಪೂರ್ಣೇಶ್ವರಿ ನಗರ, ಹೊನ್ನೇಮಡು, ಮುದಗಂದೂರು, ಬೇವುಕಲ್ಲು, ಬಿ.ಹಟ್ನ, ಮಾಡ್ಲ, ಸೌದೇನಹಳ್ಳಿ, ಶಿವಳ್ಳಿ, ಹುಲಿಕೆರೆ, ಹೊಳಲು, ಮಾರಚಾಕನಹಳ್ಳಿ, ಅವ್ವೇರಹಳ್ಳಿ, ಪುಟ್ಟಿಕೊಪ್ಪಲು ಗ್ರಾಮಗಳನ್ನು ಪಟ್ಟಿ ಮಾಡಲಾಗಿದೆ.

ಮಂಡ್ಯ ತಾಲ್ಲೂಕಿನ ಬಹುಭಾಗ ನೀರಾವರಿಗೆ ಒಳಗಾದರೂ ದುದ್ದ, ಬಸರಾಳು ಭಾಗದ ಹಳ್ಳಿಗಳು ಮಳೆಯಾಶ್ರಿತ ಪ್ರದೇಶವಾಗಿಯೇ ಉಳಿದಿವೆ. ಈ ಭಾಗದ ಕೆಲವು ಹಳ್ಳಿಗಳು ಮಂಡ್ಯ ತಾಲ್ಲೂಕು ವ್ಯಾಪ್ತಿಗೆ ಬಂದರೆ ಇನ್ನೂ ಕೆಲವು ಹಳ್ಳಿಗಳು ಪಾಂಡವಪುರ ತಾಲ್ಲೂಕು ವ್ಯಾಪ್ತಿಯಲ್ಲಿವೆ. ಹಲವು ವರ್ಷಗಳಿಂದ ಮಂಡ್ಯ ಹಾಗೂ ಪಾಂಡವಪುರ ತಾಲ್ಲೂಕು ಜನಪ್ರತಿನಿಧಿಗಳು ಸಮರ್ಪಕವಾಗಿ ನೀರು ಪೂರೈಸಲು ಸಾಧ್ಯವಾಗಿಲ್ಲ.

‘ಮಂಡ್ಯ, ಪಾಂಡವಪುರ ಭಾಗದ ಶಾಸಕರಿಗೆ, ಇತರ ಜನಪ್ರತಿನಿಧಿಗಳು ದುದ್ದ, ಬಸರಾಳು ಎಂದರೆ ಮಲತಾಯಿ ಧೋರಣೆ ತೋರಿಸುತ್ತಾರೆ. ಕೊಂಚ ಮೇಲ್ಭಾಗದಲ್ಲಿ ಇರುವ ಕಾರಣ ಸುತ್ತಮುತ್ತ ನಾಲೆಗಳಿದ್ದರೂ ನೀರು ಪಡೆಯಲಾಗಿಲ್ಲ. ಕೆಆರ್‌ಎಸ್‌ ಜಲಾಶಯ ಸಮೀಪವೇ ಇದ್ದರೂ ನಮಗೆ ನೀರು ಮರೀಚಿಕೆಯಾಗಿದೆ’ ಎಂದು ದುದ್ದ ಗ್ರಾಮದ ಚಂದ್ರಶೇಖರ್‌ ಬೇಸರ ವ್ಯಕ್ತಪಡಿಸಿದರು.

ಕುಡಿಯುವ ನೀರಿನ ಘಟಕಗಳ ದುಸ್ಥಿತಿ: ಮಂಡ್ಯ ತಾಲ್ಲೂಕು ಗ್ರಾಮೀಣ ಭಾಗದಲ್ಲಿ ನೂರಕ್ಕೂ ಹೆಚ್ಚು ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದೆ. ಆದರೆ, ಬಹುತೇಕ ಘಟಕಗಳ ನಿರ್ವಹಣೆ ಕೊರತೆಯಿಂದ ಜನರಿಗೆ ನೀರು ಪೂರೈಸುವಲ್ಲಿ ವಿಫಲವಾಗಿದೆ. ಗ್ರಾಮಿಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ನಿರ್ಮಿಸಿರುವ ಘಟಕಗಳ ನಿರ್ವಹಣಾ ಜವಾಬ್ದಾರಿಯನ್ನು ಖಾಸಗಿ ಏಜೆನ್ಸಿಯವರಿಗೆ ನೀಡಿದೆ.

ಆದರೆ ಏಜೆನ್ಸಿ ಸಿಬ್ಬಂದಿ ಘಟಕಗಳನ್ನು ನಿರ್ವಹಣೆ ಮಾಡುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಬಹುತೇಕ ಘಟಕಗಳ ಮೋಟಾರ್‌ಗಳು ಹಾಳಾಗಿದ್ದು ಯಂತ್ರಗಳು ತುಕ್ಕು ಹಿಡಿಯುತ್ತಿವೆ. ಘಟಕಗಳಿಗೆ ವಿದ್ಯುತ್‌ ಪೂರೈಕೆ ಸಮಸ್ಯೆಯಾಗಿ ಘಟಕಗಳು ದೂಳು ತಿನ್ನುತ್ತಿವೆ ಎಂದು ಸ್ಥಳೀಯರು ಆರೋಪಿಸುತ್ತಾರೆ.

‘ವಿದ್ಯುತ್‌ ಪೂರೈಕೆ ಸಮಸ್ಯೆಯಾಗಿರುವ ಘಟಕಗಳಿಗೆ ಶೀಘ್ರ ವಿದ್ಯುತ್‌ ಸಂಪರ್ಕ ಕಲ್ಪಿಸಲಾಗುವುದು. ಈ ಬಗ್ಗೆ ಮಾಹಿತಿ ಪಡೆಯುವಂತೆ ಸಿಬ್ಬಂದಿಗೆ ಸೂಚಿಸಿದ್ದೇನೆ’ ಎಂದು ಕೆಇಬಿ ಕಾರ್ಯಪಾಲಕ ಎಂಜಿನಿಯರ್‌ ರಮೇಶ್‌ ತಿಳಿಸಿದರು.

ಟಾಸ್ಕ್‌ಫೋರ್ಸ್‌ ಸಮಿತಿ ಸಿದ್ಧತೆ

ಕುಡಿಯುವ ನೀರಿನ ವ್ಯತ್ಯಯ ಸಮಸ್ಯೆಯನ್ನು ಬಗೆಹರಿಸಲು ಈಗಾಗಲೇ ತಹಶೀಲ್ದಾರ್‌ ಅಧ್ಯಕ್ಷತೆಯಲ್ಲಿ ಟಾಸ್ಕ್‌ಫೋರ್ಸ್‌ ಸಮಿತಿ ರಚನೆ ಮಾಡಲಾಗಿದೆ. ಹಲವು ಸುತ್ತಿನ ಸಭೆ ನಡೆಸಿ ಕುಡಿಯುವ ನೀರಿನ ಯಾವುದೇ ದೂರುಗಳನ್ನು ಶೀಘ್ರಗತಿಯಲ್ಲಿ ಇತ್ಯರ್ಥ ಪಡಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ಗ್ರಾಮಲೆಕ್ಕಿಗರು ಸಮಿತಿಯಲ್ಲಿ ಇದ್ದಾರೆ.

‘ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆಗೆ ಒಳಪಡುವ ಗ್ರಾಮಗಳ ಪಟ್ಟಿಯನ್ನು ಪಂಚಾಯತ್ ರಾಜ್ ಇಲಾಖೆ ವಿಭಾಗದಿಂದ ಮಾಡಲಾಗಿದೆ. ಜಿಲ್ಲಾಧಿಕಾರಿಗಳ ಮಾರ್ಗದರ್ಶನದಂತೆ ನೀರಿನ ಸಮಸ್ಯೆ ಕಂಡುಬಂದ ಕೂಡಲೇ ಮೊದಲ ಹಂತದಲ್ಲಿ ಖಾಸಗಿ ವ್ಯಕ್ತಿಗಳ ಕೊಳವೆ ಬಾವಿಗಳಿಂದ ಕುಡಿಯುವ ನೀರನ್ನು ಸಮರ್ಪಕವಾಗಿ ಒದಗಿಸುವುದು. ಸಮಸ್ಯ ಬಗೆಹರಿಯದಿದ್ದರೆ 2ನೇ ಹಂತದಲ್ಲಿ ಟ್ಯಾಂಕರ್‌ ಮೂಲಕ ಕುಡಿಯುವ ನೀರು ಪೂರೈಸಲು ಕ್ರಮ ಕೈಗೊ ಳ್ಳಲಾಗುವುದು’ ಎಂದು ತಹಶೀಲ್ದಾರ್‌ ಚಂದ್ರಶೇಖರ ಶಂ ಗಾಳಿ ತಿಳಿಸಿದರು.

ಕುಂಟುತ್ತಾ ಸಾಗುತ್ತಿದೆ ಕಾಮಗಾರಿ

ಲೋಕಪಾವನಿ ನದಿ ನೀರಿನಿಂದ ದುದ್ದ, ಬಸರಾಳು ಭಾಗದ ಕೆರೆ ತುಂಬಿಸುವ ಯೋಜನಾ ಕಾಮಗಾರಿ ಕುಂಟುತ್ತಾ ಸಾಗುತ್ತಿದೆ. ಕಳೆದ ಎರಡು ವರ್ಷಗಳಿಂದ ಕಾಮಗಾರಿ ನಡೆಯುತ್ತಲೇ ಇದೆ, ಇಲ್ಲಿಯವರೆಗೂ ಈ ಭಾಗದ ಕೆರೆಗಳು ನೀರು ಪಡೆಯಲು ಸಾಧ್ಯವಾಗಿಲ್ಲ.

ಕೆ.ಎಸ್‌.ಪುಟ್ಟಣ್ಣಯ್ಯ ಮೇಲುಕೋಟೆ ಕ್ಷೇತ್ರದ ಶಾಸಕರಾಗಿದ್ದ ಸಂದರ್ಭದಲ್ಲಿ ₹ 103 ಕೋಟಿ ವೆಚ್ಚದ ಯೋಜನೆಗೆ ಅನುಮೋದನೆ ನೀಡಲಾಗಿತ್ತು. ನಂತರ ಬಂದ ಸಮ್ಮಿಶ್ರ ಸರ್ಕಾರದಲ್ಲಿ ಸಣ್ಣ ನೀರಾವರಿ ಸಚಿವರಾಗಿದ್ದ ಸಿ.ಎಸ್‌.ಪುಟ್ಟರಾಜು ಅವರ ನೇತೃತ್ವದಲ್ಲಿ ಯೋಜನೆ ಸಾಕಾರಗೊಂಡಿತ್ತು. ನಂತರ ಸಮ್ಮಿಶ್ರ ಸರ್ಕಾರ ಬಿದ್ದುಹೋದ ನಂತರ ಯೋಜನಾ ಅನುಷ್ಠಾನಕ್ಕೆ ಅನುದಾನ ಕೊರತೆಯುಂಟಾಗಿ ಕುಂಟುತ್ತಾ ಸಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.