ADVERTISEMENT

ಆಮ್ಲಜನಕಕ್ಕಾಗಿ ಭಿಕ್ಷೆ ಬೇಡುವ ಪರಿಸ್ಥಿತಿ

ಜಿಲ್ಲಾ ಉಸ್ತುವಾರಿ ಸಚಿವರ ಕ್ಷೇತ್ರದಲ್ಲೇ ಪ್ರಾಣವಾಯು ಖಾಲಿ; ಸಿ.ಎಸ್‌.ಪುಟ್ಟರಾಜು ಕಳವಳ

​ಪ್ರಜಾವಾಣಿ ವಾರ್ತೆ
Published 3 ಮೇ 2021, 12:59 IST
Last Updated 3 ಮೇ 2021, 12:59 IST
ಸಿ.ಎಸ್‌.ಪುಟ್ಟರಾಜು
ಸಿ.ಎಸ್‌.ಪುಟ್ಟರಾಜು   

ಮಂಡ್ಯ: ‘ಜಿಲ್ಲಾಸ್ಪತ್ರೆ, ತಾಲ್ಲೂಕು ಆಸ್ಪತ್ರೆಗಳಲ್ಲಿ ಆಮ್ಲಜನಕಕ್ಕಾಗಿ ಭಿಕ್ಷೆ ಬೇಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸೋಮವಾರದಿಂದ ಆಮ್ಲಜನಕ ಕೊರತೆ ಎದುರಾಗುವ ಆತಂಕವಿದ್ದು ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲಿದ್ದೇವೆ’ ಎಂದು ಶಾಸಕ ಸಿ.ಎಸ್‌.ಪುಟ್ಟರಾಜು ಕಳವಳ ವ್ಯಕ್ತಪಡಿದರು.

‌ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಜಿಲ್ಲಾಧಿಕಾರಿ ಅವರಿಗೆ ಕರೆ ಮಾಡಿದಾಗ ಆಮ್ಲಜನಕ ವ್ಯತ್ಯಯ ಆಗದಂತೆ ಎಲ್ಲಾ ಪ್ರಯತ್ನ ಮಾಡುತ್ತಿರುವುದಾಗಿ ತಿಳಿಸಿದರು. ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರನ್ನು ಸಂಪರ್ಕಿಸಿದಾಗ ಸೋಮವಾರ ಮಧ್ಯಾಹ್ನದೊಳಗೆ ತೊಂದರೆ ಆಗದಂತೆ ಪರಿಹರಿಸುವ ಭರವಸೆ ನೀಡಿದ್ದರು. ಆದರೆ ಸರ್ಕಾರ ಆಮ್ಲಜನ ಸಿಲಿಂಡರ್‌ ಒದಗಿಸುತ್ತಿಲ್ಲ. ಮಾತು ಉಳಿಸಿಕೊಳ್ಳದಿದ್ದರೆ ಇದಕ್ಕೆ ಬೆಲೆ ತೆರಬೇಕಾಗುತ್ತದೆ’ ಎಂದು ಕಿಡಿಕಾರಿದರು.

‘ಮೈಸೂರು ಜಿಲ್ಲಾಧಿಕಾರಿ ನೆರೆ ಜಿಲ್ಲೆಗಳಿಗೆ ಸಮರ್ಪಕವಾಗಿ ಆಮ್ಲಜನಕ ಸರಬರಾಜು ಮಾಡಬೇಕು. ಮೈಸೂರಿನಿಂದ ಆಮ್ಲಜನಕ ಬರುತ್ತದೆ ಎಂದು ಇಡೀ ರಾತ್ರಿ ನಮ್ಮ ಜಿಲ್ಲೆಯ ಎಲ್ಲಾ ತಹಶೀಲ್ದಾರ್‌, ಎಸಿಗಳು ಕಾಯ್ದುಕೊಂಡು ನಿಂತಿರುತ್ತಾರೆ. ಅಂಕಿ ಅಂಶದ ಮಾಹಿತಿ ಪ್ರಕಾರ ಮೈಸೂರು, ಚಾಮರಾಜನಗರ, ಮಂಡ್ಯದಲ್ಲಿ ಅತಿ ಹೆಚ್ಚು ಆಮ್ಲಜನಕ ಕೊರತೆ ಕಂಡು ಬರುತ್ತಿದೆ’ ಎಂದರು.

ADVERTISEMENT

‘ ಭಾನುವಾರ ಸಂಜೆ 7 ಗಂಟೆಯಷ್ಟರಲ್ಲಿ ಕೆ.ಆರ್‌.ಪೇಟೆ ಆಸ್ಪತ್ರೆಯಲ್ಲಿ ಆಮ್ಲಜನಕ ಮುಗಿಯುವ ಹಂತ ತಲುಪಿತ್ತು. ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವ ಬಗ್ಗೆ ಆಸ್ಪತ್ರೆ ಸಿಬ್ಬಂದಿ ರೋಗಿ ಕಡೆಯವರಿಗೆ ತಿಳಿಸಿದ್ದರು. ಈ ಬಗ್ಗೆ ಕಾರ್ಮಿಕರೊಬ್ಬರ ಪತ್ನಿ ನನಗೆ ಕರೆ ಮಾಡಿ ತಿಳಿಸಿದ್ದರು. ನಂತರ ಚಿನಕುರಳಿಯ ಸಮುದಾಯ ಆರೋಗ್ಯ ಕೇಂದ್ರದಿಂದ ಕೆ.ಆರ್‌.ಪೇಟೆಗೆ ಸಿಲಿಂಡರ್‌ ಕಳುಹಿಸಿಕೊಡಲಾಯಿತು’ ಎಂದರು.

‘ಜಿಲ್ಲಾ ಉಸ್ತುವಾರಿ ಸಚಿವರ ತವರು ಕೆ.ಆರ್‌.ಪೇಟೆಯಲ್ಲೇ ಆಮ್ಲಜನಕ ಸಮಸ್ಯೆ ಇದೆ ಎಂದರೆ ಸಮಸ್ಯೆಯ ತೀವ್ರತೆ ಅರ್ಥ ಮಾಡಿಕೊಳ್ಳಬೇಕು. ನನ್ನ ಕ್ಷೇತ್ರದಲ್ಲಿ ನಿತ್ಯ 8–9 ಸಾವುಗಳು ಆಗುತ್ತಿವೆ. ಹೊರಗಿನವರು ಯಾವುದೇ ಸಂಕೋಚ ಪಡದೆ ಪರೀಕ್ಷೆ ಮಾಡಿಸಿಕೊಂಡು ಕ್ವಾರಂಟೈನ್‌ ಆಗಬೇಕು. ಸರ್ಕಾರವನ್ನು ನಂಬಿಕೊಂಡು ನಮ್ಮನ್ನು ಉಳಿಸುತ್ತಾರೆ ಎಂದು ಭಾವಿಸಿದ್ದರೆ ಎಲ್ಲರದ್ದೂ ತಿಥಿಯಾಗುತ್ತದೆ’ ಎಂದರು.

‘ಕೋವಿಡ್‌ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಸರ್ಕಾರ ಸಂಪೂರ್ಣವಾಗಿ ಸೋತಿದೆ. ಕೋವಿಡ್‌ ಕುರಿತಂತೆ ಸರ್ಕಾರ ಜನರಿಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ. ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಕೊಟ್ಟ ಮಾತಿನಂತೆ ಆಮ್ಲಜನಕ ಪೂರೈಸಬೇಕು. ಇಲ್ಲವಾದರೆ ಮುಂದೆ ಆಗುವ ಎಲ್ಲ ಅನಾಹುತಗಳ ಹೊರೆ ಹೊರಬೇಕಾಗುತ್ತದೆ’ ಎಂದು ಎಚ್ಚರಿಸಿದರು.

*****

ಸಂಸದರೇ ನಿಮ್ಮ ಪ್ರಭಾವ ಬಳಸಿ

‘ನಮ್ಮ ಜಿಲ್ಲೆಯ ಸಂಸದರು ಅತ್ಯಂತ ಪ್ರಭಾವಿಗಳು, ಅವರು ತಮ್ಮ ಪ್ರಭಾವ ಬಳಕೆ ಮಾಡಿ ಜಿಲ್ಲೆಗೆ ಆಮ್ಲಜನಕ ಪೂರೈಕೆಯಾಗುವಂತೆ ಮಾಡಬೇಕು. ಆಮ್ಲಜನಕ ಕೊರತೆಯಿಂದಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲ್ಲೂಕು ಮಟ್ಟದ ಅಧಿಕಾರಿಗಳು ವಿಲವಿಲನೆ ಒದ್ದಾಡುತ್ತಿದ್ಧಾರೆ. ಅವರಿಗೆ ಸಲಹೆ ಸೂಚನೆ ನೀಡಬೇಕು’ ಎಂದು ಪುಟ್ಟರಾಜು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.