ADVERTISEMENT

ಸಿಗದ ಆಂಬುಲೆನ್ಸ್‌: ಗೂಡ್ಸ್‌ ಆಟೊಗಳಲ್ಲಿ ರೋಗಿಗಳ ಸಾಗಣೆ!

‘108’ರ ಸಮಸ್ಯೆಗೆ ಪರಿಹಾರವಿಲ್ಲ, ಕರೆ ಮಾಡಿದರೂ ರೋಗಿಯ ಸೇವೆಗೆ ಸಿಗುವುದಿಲ್ಲ

​ಪ್ರಜಾವಾಣಿ ವಾರ್ತೆ
Published 4 ಜುಲೈ 2018, 12:41 IST
Last Updated 4 ಜುಲೈ 2018, 12:41 IST
ತೆಂಗಿನಮರದಿಂದ ಬಿದ್ದು ಗಾಯಗೊಂಡಿದ್ದ ಗಾಯಾಳುವನ್ನು ಗೂಡ್ಸ್‌ ಆಟೊದಲ್ಲಿ ತಂದು ಮಂಡ್ಯದ ಮಿಮ್ಸ್‌ ಆಸ್ಪತ್ರೆಗೆ ದಾಖಲು ಮಾಡಲಾಯಿತು
ತೆಂಗಿನಮರದಿಂದ ಬಿದ್ದು ಗಾಯಗೊಂಡಿದ್ದ ಗಾಯಾಳುವನ್ನು ಗೂಡ್ಸ್‌ ಆಟೊದಲ್ಲಿ ತಂದು ಮಂಡ್ಯದ ಮಿಮ್ಸ್‌ ಆಸ್ಪತ್ರೆಗೆ ದಾಖಲು ಮಾಡಲಾಯಿತು   

ಮಂಡ್ಯ: ಜಿಲ್ಲೆಯಲ್ಲಿ ಆಂಬುಲೆನ್ಸ್‌ ಸೇವೆ ಬಡವರ ಕೈಗೆಟುಕುತ್ತಿಲ್ಲ. ರಿಪೇರಿಯಲ್ಲಿರುವ ವಾಹನ, ದುಬಾರಿ ಶುಲ್ಕ ಸಮಸ್ಯೆಗಳಿಂದಾಗಿ ಆಂಬುಲೆನ್ಸ್‌ ಎನ್ನುವುದು ಸಾಮಾನ್ಯರಿಗೆ ಮರೀಚಿಕೆಯಾಗಿಯೇ ಉಳಿದಿದೆ. ಹೀಗಾಗಿ ರೋಗಿಗಳನ್ನು ವಸ್ತುಗಳಂತೆ ಗೂಡ್ಸ್‌ ವಾಹನಗಳಲ್ಲಿ ಮಲಗಿಸಿಕೊಂಡು ಆಸ್ಪತ್ರೆಗೆ ತರುವ ಪರಿಸ್ಥಿತಿ ನಿರ್ಮಾಣವಾಗಿದೆ.

‘ಆರೋಗ್ಯ ಕವಚ 108’ ವಾಹನಗಳು ದಿನದ 24 ಗಂಟೆಯೂ ಸೇವೆ ನೀಡುತ್ತವೆ ಎಂದು ಸರ್ಕಾರ ಪ್ರಚಾರ ಮಾಡುತ್ತದೆ. ಆದರೆ ತುರ್ತು ಸಂದರ್ಭದಲ್ಲಿ 108ರ ಸೇವೆ ಸಾಮಾನ್ಯ ಜನರಿಗೆ ದೊರೆಯುತ್ತಿಲ್ಲ. ಸಿಕ್ಕರೂ ಉಚಿತ ಸೇವೆ ಎನ್ನುವುದು ಕೇವಲ ವಾಹನಗಳ ಮೇಲಿರುವ ಅಕ್ಷರಗಳಿಗಷ್ಟೇ ಸೀಮಿತವಾಗಿದೆ. ಚಾಲಕರು ಹಾಗೂ ಸಿಬ್ಬಂದಿ ಅತೀ ಹೆಚ್ಚು ಹಣ ಕೇಳುವ ಕಾರಣ ಸಾಮಾನ್ಯರು 108ರ ಸೇವೆ ಪಡೆಯಲು ಅಸಾಧ್ಯವಾಗಿದೆ. ಜಿಲ್ಲೆಯಲ್ಲಿ 21 ಆರೋಗ್ಯ ಕವಚ ಆಂಬುಲೆನ್ಸ್‌ಗಳಿರಬೇಕು, ಆದರೆ 13 ಮಾತ್ರ ಇವೆ. ಜಿವಿಕೆ ಖಾಸಗಿ ಕಂಪನಿಯ ಸಹಭಾಗಿತ್ವದಲ್ಲಿ 108 ವಾಹನಗಳನ್ನು ನಿರ್ವಹಣೆ ಮಾಡಲಾಗುತ್ತಿದೆ. ನಿರ್ವಹಣಾ ವೆಚ್ಚಕ್ಕಾಗಿ ಆರೋಗ್ಯ ಇಲಾಖೆ ಕೋಟಿ ಕೋಟಿ ಹಣ ನೀಡುತ್ತಿದೆ. ಆದರೆ ಅವುಗಳ ಸೇವೆ ಸಮಾನ್ಯರಿಗೆ ದೊರೆಯುತ್ತಿಲ್ಲ ಎಂಬುದು ರೋಗಿಗಳ ದೂರು.

ಈಚೆಗೆ ತೆಂಗಿನಮರದಿಂದ ಬಿದ್ದು ಗಾಯಗೊಂಡಿದ್ದ ಮದ್ದೂರು ತಾಲ್ಲೂಕಿನ ರೈತನನ್ನು ಆಸ್ಪತ್ರೆಗೆ ಕರೆತರಲು ಮನೆಯವರು 108ಕ್ಕೆ ಕರೆ ಮಾಡಿದ್ದಾರೆ. ಆದರೆ ಆಂಬುಲೆನ್ಸ್‌ ಚಾಲಕ ಮದ್ದೂರಿನಿಂದ ಮಂಡ್ಯಕ್ಕೆ ₹ 1.5 ಸಾವಿರ ಹಣ ಕೇಳಿದ್ದಾನೆ. ಆದರೆ ಅಷ್ಟು ಹಣ ನೀಡಲಾಗದೆ ಗಾಯಾಳುವನ್ನು ಆತನ ತಂದೆ–ತಾಯಿ ಗೂಡ್ಸ್‌ ವಾಹನದಲ್ಲಿ ಕರೆ ತಂದಿದ್ದಾರೆ. ಮರದಿಂದ ಬಿದ್ದು ಸೊಂಟ ಮುರಿದುಕೊಂಡಿದ್ದ ರೋಗಿ ಗೂಡ್ಸ್‌ ವಾಹನದ ಕಬ್ಬಿಣದ ಮೇಲೆ ಮಲಗಿ ನರಳುತ್ತಾ ಆಸ್ಪತ್ರೆ ಸೇರಿದ್ದಾರೆ. ಪ್ರಾಥಮಿಕ ಚಿಕಿತ್ಸೆಯೂ ಸಿಗದೆ ರೋಗಿ ಮತ್ತಷ್ಟು ನೋವು ಅನುಭವಿಸಿದ್ದಾರೆ.

ADVERTISEMENT

‘ಉಚಿತವಾಗಿ ಆಂಬುಲೆನ್ಸ್‌ ಸೇವೆ ದೊರೆಯುತ್ತದೆ ಎಂದು ಹೇಳುತ್ತಾರೆ. ಆದರೆ ಅದೆಲ್ಲಾ ಸುಳ್ಳು, 15 ಕಿ.ಮೀ ದಾರಿಗೆ ಒಂದೂವರೆ ಸಾವಿರ ಕೇಳಿದರು. ₹ 200 ಕೊಟ್ಟು ಗೂಡ್ಸ್‌ ಗಾಡಿ ಮಾಡಿಕೊಂಡು ಆಸ್ಪತ್ರೆಗೆ ಬಂದೆವು. ಸೊಂಟದ ನೋವಿನಿಂದ ಒದ್ದಾಡುತ್ತಿದ್ದ ನನ್ನ ಮಗ ಮತ್ತಷ್ಟು ನೋವು ಅನುಭವಿಸಿದ. ಆಂಬುಲೆನ್ಸ್‌ ಸಿಕ್ಕಿದ್ದರೆ ಪ್ರಥಮ ಚಿಕಿತ್ಸೆ ದೊರೆಯುತ್ತಿತ್ತು‌’ ಎಂದು ರೋಗಿಯ ತಾಯಿ ಕಮಲಮ್ಮ ನೋವು ತೋಡಿಕೊಂಡರು.

ರಿಪೇರಿಯಾಗದ ಆಂಬುಲೆನ್ಸ್‌ಗಳು:
ಜಿಲ್ಲೆಯಾದ್ಯಂತ ಆರೋಗ್ಯ ಇಲಾಖೆಯಲ್ಲಿ ಕೇವಲ 15 ಆಂಬುಲೆನ್ಸ್‌ಗಳಿವೆ. ಅವುಗಳಲ್ಲಿ ನಾಲ್ಕು ವಾಹನಗಳು ಮೈಲೇಜ್‌ ನೀಡುತ್ತಿಲ್ಲ ಎಂಬ ಕಾರಣದಿಂದ ನಿಲ್ಲಿಸಲಾಗಿದೆ. ರಿಪೇರಿಯನ್ನೂ ಮಾಡಿಸಿಲ್ಲ. ಉಳಿದ 10 ಆಂಬುಲೆನ್ಸ್‌ ಮಾತ್ರ ಸೇವೆಗೆ ಲಭ್ಯ ಇವೆ. ಪ್ರತಿ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಒಂದೊಂದು ವಾಹನ ಇರಬೇಕು ಎಂಬ ನಿಯಮಿದೆ. ಕಿರುಗಾವಲು ಸಮುದಾಯ ಕೇಂದ್ರದಲ್ಲಿ ಮಾತ್ರ ಒಂದು ವಾಹನ ಇದೆ.

ಜಿಲ್ಲಾಸ್ಪತ್ರೆಯಲ್ಲಿ 2 ಆಂಬುಲೆನ್ಸ್‌:
ನಿತ್ಯ ಸಾವಿರಾರು ರೋಗಿಗಳಿಗೆ ಚಿಕಿತ್ಸೆ ನೀಡುವ ಜಿಲ್ಲೆಯ ದೊಡ್ಡಾಸ್ಪತ್ರೆ ಮಿಮ್ಸ್‌ ಆಸ್ಪತ್ರೆಯಲ್ಲಿ ಕೇವಲ 2 ಆಂಬುಲೆನ್ಸ್‌ಗಳಿವೆ. ಅವುಗಳೂ ಸರಿಯಾರಿ ಸೇವೆಗೆ ದೊರೆಯುತ್ತಿಲ್ಲ. ಇನ್ನೊಂದು ‘ನಗು–ಮಗು’ ಆಂಬುಲೆನ್ಸ್‌ ಇದೆ. ಅದು ಹೆರಿಗೆಗೆ ಮಾತ್ರ ಸೀಮಿತವಾಗಿದೆ. ಅಂಬರೀಷ್‌ ಅವರು ಸಂಸದರಾಗಿದ್ದಾಗ ಆಧುನಿಕ ಸೌಲಭ್ಯವುಳ್ಳ ಒಂದು ವಾಹನವನ್ನು ಸಂಸದರ ನಿಧಿಯಿಂದ ಮಿಮ್ಸ್‌ ಆಸ್ಪತ್ರೆಗೆ ಕೊಡುಗೆ ಕೊಟ್ಟಿದ್ದರು. ಆದರೆ ಸಮರ್ಪಕ ನಿರ್ವಹಣೆ ಕೊರತೆಯಿಂದಾಗಿ ಆ ಆಂಬುಲೆನ್ಸ್‌ ಓಡುತ್ತಿಲ್ಲ.

‘ವೆಂಟಿಲೇಟರ್‌, ಎಸಿ ಸೇರಿ ಆಧುನಿಕ ಸೌಲಭ್ಯವುಳ್ಳ ಆಂಬುಲೆನ್ಸ್‌ ಜಿಲ್ಲೆಯಲ್ಲಿ ಇಲ್ಲ. ತುರ್ತು ಚಿಕಿತ್ಸೆಯ ಅವಶ್ಯವುಳ್ಳ ರೋಗಿಗಳು ಬೆಂಗಳೂರು ತಲುಪುವಷ್ಟರಲ್ಲಿ ಮೃತಪಡುತ್ತಿದ್ದಾರೆ. ಬದುಕುವ ಲಕ್ಷಣಗಳಿರುವ ನೂರಾರು ರೋಗಿಗಳು ಆಂಬುಲೆನ್ಸ್‌ ಕೊರತೆಯಿಂದ ಸಾವನ್ನಪ್ಪುತ್ತಿದ್ದಾರೆ’ ಎಂದು ತಜ್ಞ ವೈದ್ಯ ಡಾ.ನಾಗರಾಜ್‌ ತಿಳಿಸಿದರು.

‘ಜಿಲ್ಲೆಯಲ್ಲಿ ಆಂಬುಲೆನ್ಸ್‌ ಕೊರತೆಯಾಗಿರುವುದು ನಿಜ. ಈ ಕುರಿತು ನಾವು ಈಗಾಗಲೇ ಆರೋಗ್ಯ ಇಲಾಖೆಗೆ ಪತ್ರ ಬರೆದಿದ್ದೇವೆ. ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರಿಗೂ ಮನವಿ ಸಲ್ಲಿಸಿದ್ದೇವೆ. ಮುಂದೆ ದಾನಿಗಳನ್ನು ಭೇಟಿ ಮಾಡಿ ಆಂಬುಲೆನ್ಸ್‌ ಕೊಡುಗೆ ನೀಡುವಂತೆ ಮನವಿ ಸಲ್ಲಿಸುತ್ತೇವೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜೆ.ವಿಜಯನರಸಿಂಹ ಹೇಳಿದರು.

ಆರೋಗ್ಯ ಇಲಾಖೆಯ ಆಂಬುಲೆನ್ಸ್‌ ವಿವರ
ನಾಗಮಂಗಲ 2
ಮಂಡ್ಯ 0
ಪಾಂಡವಪುರ 2
ಕೆ.ಆರ್‌.ಪೇಟೆ 2
ಶ್ರೀರಂಗಪಟ್ಟಣ 2
ಮಳವಳ್ಳಿ 1
ಮದ್ದೂರು 2

‘108’ ಆರೋಗ್ಯ ಕವಚ ವಾಹನ: 13
ಮಿಮ್ಸ್‌ ಆಸ್ಪತ್ರೆ ಆಂಬುಲೆನ್ಸ್‌: 2
ಮಿಮ್ಸ್‌ನಲ್ಲಿ ‘ನಗು–ಮಗು’ವಾಹನ: 1

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.