ಮಳವಳ್ಳಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಡಿ ತಾಲ್ಲೂಕಿನ 30ಕ್ಕೂ ಅಧಿಕ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯಗಳನ್ನು ತಾಲ್ಲೂಕು ಪಂಚಾಯಿತಿ ವತಿಯಿಂದ ನಿರ್ಮಿಸಿ ಶಾಲೆಗಳಲ್ಲಿನ ಮೂಲಸೌಕರ್ಯಗಳಿಗೆ ಒತ್ತು ನೀಡಲಾಗಿದೆ.
ನರೇಗಾ ಅನುದಾನ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅನುದಾನವನ್ನು ಸಮನಾಗಿ ಬಳಸಿಕೊಂಡು ಶೌಚಾಲಯಗಳನ್ನು ನಿರ್ಮಿಸಲಾಗುತ್ತಿದೆ. ಈಗಾಗಲೇ ತಾಲ್ಲೂಕಿನ ವಿವಿಧೆಡೆ 29 ಶಾಲೆಗಳಲ್ಲಿ ಕೆಲಸ ಪೂರ್ಣಗೊಳಿಸಲಾಗಿದೆ. 18 ಶಾಲೆಗಳಲ್ಲಿ ಪ್ರಗತಿಯಲ್ಲಿದ್ದು, ಇನ್ನೂ 20 ಕಡೆ ಕ್ರಿಯಾಯೋಜನೆ ರೂಪಿಸಲಾಗಿದೆ.
ತಾಲ್ಲೂಕಿನ ಹಲವು ಸರ್ಕಾರಿ ಶಾಲೆಗಳಲ್ಲಿ ಶೌಚಾಲಯಗಳಿದ್ದರೂ, ಹಳೆಯದಾಗಿ ಬಳಕೆಗೆ ಯೋಗ್ಯವಾಗಿರಲಿಲ್ಲ. ಹೀಗಾಗಿ ಶಿಕ್ಷಣ ಇಲಾಖೆಯು ಅಂತಹ ಶಾಲೆಗಳನ್ನು ಗುರುತಿಸಿ ತಾಲ್ಲೂಕು ಪಂಚಾಯಿತಿಗೆ ಮಾಹಿತಿ ನೀಡಿತ್ತು. ಈ ಬಗ್ಗೆ ತ್ವರಿತಗತಿಯಲ್ಲಿ ಕ್ರಮ ಕೈಗೊಂಡ ಪರಿಣಾಮ ತಲಾ ₹4 ಲಕ್ಷ ವೆಚ್ಚದಲ್ಲಿ ಶೌಚಾಲಯಗಳು ನಿರ್ಮಾಣಗೊಳ್ಳುತ್ತಿವೆ. ಇದರಲ್ಲಿ 2 ಲಕ್ಷ ನರೇಗಾ ಅನುದಾನ, ₹2 ಲಕ್ಷ ಅನುದಾನ ಶಿಕ್ಷಣ ಇಲಾಖೆಯದ್ದು.
ತಾಲ್ಲೂಕಿನ ಅಗಸನಪುರ, ಬೊಪ್ಪೇಗೌಡನಪುರ (ಬಿ.ಜಿ.ಪುರ), ಬಂಡೂರು, ಬ್ಯಾಡರಹಳ್ಳಿ, ಚಿಕ್ಕಮುಲಗೂಡು, ಡಿ.ಹಲಸಹಳ್ಳಿ, ದುಗ್ಗನಹಳ್ಳಿ, ಹಾಡ್ಲಿ, ಹಲಗೂರು, ಹುಸ್ಕೂರು, ಕಂದೇಗಾಲ, ಲಿಂಗಪಟ್ಟಣ, ಸರಗೂರು, ತೊರೆಕಾಡನಹಳ್ಳಿ, ಕಿರುಗಾವಲು ಸೇರಿದಂತೆ ಹಲವೆಡೆ ಕಾಮಗಾರಿ ಪೂರ್ಣಗೊಂಡು ಶೌಚಾಲಯಗಳು ಬಳಕೆಗೆ ಸಿದ್ಧವಾಗಿವೆ.
ನಾಗೇಗೌಡನದೊಡ್ಡಿ, ಬೆಳಕವಾಡಿ, ಕಲ್ಕುಣಿ, ಮಿಕ್ಕೆರೆ, ತಳಗವಾದಿ, ಯತ್ತಂಬಾಡಿ ಇನ್ನಿತರ ಗ್ರಾಮಗಳಲ್ಲಿ ಕೆಲಸ ಪ್ರಗತಿಯಲ್ಲಿದೆ. ಮತ್ತೊಂದೆಡೆ 2025-26ನೇ ಸಾಲಿನಲ್ಲಿ ತಾಲ್ಲೂಕಿನ ನಿಡಘಟ್ಟ, ದಳವಾಯಿಕೊಡಹಳ್ಳಿ, ಹೊಸಹಳ್ಳಿ, ಕಲ್ಕುಣಿ, ದುಗ್ಗನಹಳ್ಳಿ, ನೆಲಮಾಕನಹಳ್ಳಿ ಸೇರಿದಂತೆ 20 ವಿವಿಧ ಶಾಲೆಗಳಲ್ಲಿ ಶೌಚಾಲಯ ನಿರ್ಮಾಣ ಮಾಡಲು ಕ್ರಿಯಾ ಯೋಜನೆ ರೂಪಿಸಲಾಗಿದೆ.
‘ಕಾಂಪೌಂಡ್ ನಿರ್ಮಾಣಕ್ಕೂ ಅವಕಾಶ’: ಕ್ಷೇತ್ರ ಶಿಕ್ಷಣಾಧಿಕಾರಿ
ನರೇಗಾ ಯೋಜನೆಯಡಿ ಶಾಲಾ ಕಾಂಪೌಂಡ್ ಹಾಗೂ ಆವರಣದ ಅಭಿವೃದ್ಧಿಗೆ ಅವಕಾಶ ಇದೆ. ಅದೇ ಮಾದರಿಯಲ್ಲಿ ಪ್ರಾಥಮಿಕ ಪ್ರೌಢಶಾಲೆ ಮತ್ತು ಪಿಯು ಕಾಲೇಜುಗಳಲ್ಲೂ ಶೌಚಾಲಯಗಳನ್ನು ನಿರ್ಮಿಸಲು ಅವಕಾಶ ಇದೆ. ತಾಲ್ಲೂಕಿನ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲು ಮುಂದಾಗಿದ್ದೇವೆ. ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ಶೌಚಾಲಯಗಳ ಕೊರೆತೆಯನ್ನು ನೀಗಿಸುವ ಪ್ರಯತ್ನ ನಮ್ಮದು. ಎಚ್.ಜಿ.ಶ್ರೀನಿವಾಸ್ ಇಒ ಮಳವಳ್ಳಿ ತಾಲ್ಲೂಕು ಪಂಚಾಯಿತಿ ‘ಮೂಲಸೌಕರ್ಯ ಕಲ್ಪಿಸಲು ನರೇಗಾ ಸಹಕಾರಿ’ ಗ್ರಾಮೀಣ ಭಾಗದಲ್ಲಿನ ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯ ಕಲ್ಪಿಸಲು ನರೇಗಾ ಯೋಜನೆ ಸಹಕಾರಿಯಾಗಿದೆ. ಶಾಲೆಗಳ ಎಸ್‌ಡಿಎಂಸಿ ಹಾಗೂ ಮುಖ್ಯಶಿಕ್ಷಕರು ನರೇಗಾ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಈಗಾಗಲೇ 30 ಶಾಲೆಗಳಲ್ಲಿ ಶೌಚಾಲಯ ನಿರ್ಮಾಣಗೊಂಡಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಇ.ಉಮಾ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.