ADVERTISEMENT

ಜಾಗೃತಿ ವಹಿಸಲು ಅಧಿಕಾರಿಗಳಿಗೆ ಸೂಚನೆ

ಐದು ದಿನಗಳ ಶಿವರಾತ್ರೀಶ್ವರ ಶಿವಯೋಗಿಯವರ ಜಯಂತ್ಯುತ್ಸವ: ಶಾಸಕರ ಸಭೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2025, 3:26 IST
Last Updated 7 ಡಿಸೆಂಬರ್ 2025, 3:26 IST
ಮಳವಳ್ಳಿ ಪಟ್ಟಣದ ಹೊರವಲಯದ ಮಾರೇಹಳ್ಳಿ ಬಳಿ ಹೆಲಿಪ್ಯಾಡ್ ಗೆ ಗುರುತಿಸಿರುವ ಸ್ಥಳವನ್ನು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಪರಿಶೀಲಿಸಿದರು 
ಮಳವಳ್ಳಿ ಪಟ್ಟಣದ ಹೊರವಲಯದ ಮಾರೇಹಳ್ಳಿ ಬಳಿ ಹೆಲಿಪ್ಯಾಡ್ ಗೆ ಗುರುತಿಸಿರುವ ಸ್ಥಳವನ್ನು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಪರಿಶೀಲಿಸಿದರು    

ಮಳವಳ್ಳಿ: ‘ಪಟ್ಟಣದಲ್ಲಿ ಡಿ.17ರಿಂದ 21ರವರೆಗೆ ನಡೆಯುವ ಸುತ್ತೂರು ಶಿವರಾತ್ರೀಶ್ವರ ಶಿವಯೋಗಿಯವರ ಜಯಂತ್ಯುತ್ಸವಕ್ಕೆ ರಾಷ್ಟ್ರಪತಿ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗುವುದರ ಜೊತೆಗೆ ತಾಲ್ಲೂಕಿನ ಜನರು ಭಾಗಿಯಾಗಬೇಕು. ಇಲಾಖೆಯ ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ನಿರ್ವಹಿಸಿ ಹಂಚಿಕೆ ಯಾವುದೇ ಲೋಪವಾಗದಂತೆ ಎಚ್ಚರಿಕೆ ವಹಿಸಬೇಕು’ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಕರೆ ನೀಡಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿಯ ಶಾಸಕರ ಕಚೇರಿಯಲ್ಲಿ ಶನಿವಾರ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಆಚರಣಾ ಸಮಿತಿ ಸದಸ್ಯರೊಂದಿಗೆ ಸಭೆ ನಡೆಸಿ ನಂತರ ಅವರು ಮಾತನಾಡಿದರು.

‘ಪಟ್ಟಣದ ಶಾಂತಿ ಕಾಲೇಜಿನ ಮುಂಭಾಗದ 33 ಎಕರೆ ಪ್ರದೇಶದಲ್ಲಿ ಸುತ್ತೂರು ಮಠದ ಉಸ್ತುವಾರಿಯಲ್ಲಿ ನಡೆಯಲಿರುವ ಜಯಂತ್ಯುತ್ಸವಕ್ಕೆ ರಾಷ್ಟ್ರಪತಿ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸೇರಿದಂತೆ ಕೇಂದ್ರ ಮತ್ತು ರಾಜ್ಯ ಸಚಿವರು ಹಾಗೂ ಹಲವು ಮಠಗಳ ಸ್ವಾಮೀಜಿಗಳು ಭಾಗವಹಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಸ್ವಾಗತ ಸಮಿತಿಯ ಅಧ್ಯಕ್ಷನಾಗಿ ಜವಾಬ್ದಾರಿಯಿಂದ ಐದು ದಿನಗಳ ಕಾಲ ನಡೆಯುವ ಕಾರ್ಯಕ್ರಮದ ಯಶಸ್ಸಿಗೆ ಸಹಕಾರ ನೀಡಲಾಗುವುದು’ ಎಂದು ಹೇಳಿದರು.

ADVERTISEMENT

‘ಪಟ್ಟಣದಲ್ಲಿ ಪುಟ್ ಪಾತ್ ತೆರವುಗೊಳಿಸಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿ ಟ್ರಾಫಿಕ್ ನಿರ್ವಹಣೆಗೆ ಪೊಲೀಸರು ಎಚ್ಚರಿಕೆಯಿಂದ ವಹಿಸಬೇಕು. ರಾಜಕೀಯ ಬ್ಯಾನರ್‌ಗಳಿಗೆ ಅವಕಾಶ ನೀಡದೇ ಉತ್ಸವದ ಬ್ಯಾನರ್ ಗಳಿಗೆ ಮಾತ್ರ ಸೀಮಿತಗೊಳಿಸಬೇಕು. ಕಂದಾಯ ಇಲಾಖೆ,ಪುರಸಭೆ ಹಾಗೂ ಲೊಕೋಪಯೋಗಿ ಇಲಾಖೆ ಒಗ್ಗೂಡಿ ಪಟ್ಟಣವನ್ನು ಸುಂದರಗೊಳಿಸಬೇಕು. ಪಟ್ಟಣದ ಪ್ರವೇಶ ದ್ವಾರಗಳಲ್ಲಿ ಒಂದೇ ರೀತಿಯ ಸ್ವಾಗತ ಕಾಮಾನುಗಳನ್ನು ಅಳವಡಿಸಿ ವಿದ್ಯುತ್ ದೀಪಾಲಂಕಾರ ಹಾಗೂ ತಳಿರು ತೋರಣಗಳಿಂದ ಶೃಂಗರಿಸಬೇಕು’ ಎಂದರು.

‘ಅಗ್ನಿಶಾಮಕ ದಳದ ಹೆಚ್ಚುವರಿ ವಾಹನಗಳನ್ನು ಹೆಲಿಪ್ಯಾಡ್ ಹಾಗೂ ವೇದಿಕೆ ಬಳಿ ನಿಯೋಜಿಸಬೇಕು. ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿ ನಿರ್ವಹಣೆ ಇರಬೇಕು. ಜನರಿಗೆ ಕುಡಿಯುವ ನೀರು ಸೇರಿದಂತೆ ಮೂಲಸೌಲಭ್ಯವನ್ನು ಕಲ್ಪಿಸಬೇಕು. ವಸತಿಗೃಹಗಳ ಮೇಲೆ ನಿಗಾ ವಹಿಸಬೇಕು. ಮಳಿಗೆಗಳ ನಿರ್ಮಾಣದ ಸಂಬಂಧ ಜಿಲ್ಲಾಡಳಿತದೊಂದಿಗೆ ಸಮನ್ವಯ ಸಾಧಿಸಬೇಕು’ ಎಂದು ಸೂಚಿಸಿದರು.
 
ತಹಶೀಲ್ದಾರ್ ಎಸ್.ವಿ.ಲೋಕೇಶ್, ಡಿವೈಎಸ್ಪಿ ಎಚ್.ಬಿ.ಯಶವಂತ ಕುಮಾರ್, ತಾ.ಪಂ.ಇಒ ಎಚ್.ಜಿ.ಶ್ರೀನಿವಾಸ್, ಪುರಸಭೆ ಮುಖ್ಯಾಧಿಕಾರಿ ಎಂ.ಸಿ.ನಾಗರತ್ನ, ಲೋಕೋಪಯೋಗಿ ಇಲಾಖೆಯ ಎಇಇ ಸೋಮಶೇಖರ್ ಪಾಲ್ಗೊಂಡಿದ್ದರು.

ಹೆಲಿಪ್ಯಾಡ್ ಸ್ಥಳ ಪರಿಶೀಲನೆ

ಪಟ್ಟಣದ ಹೊರವಲಯದ ಮಾರೇಹಳ್ಳಿ ಬಳಿ ಹೆಲಿಪ್ಯಾಡ್ ಗೆ ಗುರುತಿಸಿರುವ ಸ್ಥಳವನ್ನು ಅಧಿಕಾರಿಗಳೊಂದಿಗೆ ಪಿ.ಎಂ.ನರೇಂದ್ರಸ್ವಾಮಿ ಪರಿಶೀಲಿಸಿದರು. ರಾಷ್ಟ್ರಪತಿಗಳ ಆಗಮನಕ್ಕೆ ಯಾವುದೇ ತೊಂದರೆಯಾಗದಂತೆ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಮುಗಿಸಬೇಕು. ಭದ್ರತೆ ದೃಷ್ಟಿಯಿಂದ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಡಿವೈಎಸ್ಪಿ ಎಚ್.ಬಿ.ಯಶವಂತ ಕುಮಾರ್ ಅವರೊಂದಿಗೆ ಚರ್ಚಿಸಿದರು. ನಂತರ ಶಾಂತಿ ಕಾಲೇಜು ಮುಂಭಾಗದ ಪ್ರದೇಶಕ್ಕೂ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.