ಶ್ರೀರಂಗಪಟ್ಟಣ: ಕೃಷಿ, ತೋಟಗಾರಿಕೆ, ರೇಷ್ಮೆ, ಕಂದಾಯ, ಪಂಚಾಯತ್ ರಾಜ್ ಇನ್ನಿತರ ಇಲಾಖೆಗಳ ಅಧಿಕಾರಿಗಳು ರೈತ ಸ್ನೇಹಿಯಾಗಿ ಕೆಲಸ ಮಾಡಬೇಕು ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ತಾಕೀತು ಮಾಡಿದರು.
ತಾಲ್ಲೂಕಿನ ಅರಕೆರೆ ಗ್ರಾಮದಲ್ಲಿ ₹2 ಕೋಟಿ ವೆಚ್ಚದ ಕೃಷಿ ಭವನ ನಿರ್ಮಾಣ ಕಾಮಗಾರಿಗೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು.
‘ರೈತರು ಸರ್ಕಾರಿ ಕಚೇರಿಗಳಿಗೆ ಅಲೆದಾಡುವಂತೆ ಮಾಡಬಾರದು. ಕಾಲಮಿತಿಯಲ್ಲಿ ಅವರ ಕೆಲಸ ಮಾಡಿಕೊಡಬೇಕು. ತಾಲ್ಲೂಕು ಮಟ್ಟದ ಅಧಿಕಾರಿಗಳು ತಮ್ಮ ಅಧೀನದಲ್ಲಿ ಕೆಲಸ ಮಾಡುವ ಸಿಬ್ಬಂದಿಯನ್ನು ಹಿಡಿತದಲ್ಲಿ ಇಟ್ಟುಕೊಂಡು ಜನ ಸಾಮಾನ್ಯರ ಕೆಲಸ ಮಾಡಿಸಬೇಕು’ ಎಂದು ಹೇಳಿದರು.
ಇದೇ ವೇಳೆ ಅರಕೆರೆ ಗ್ರಾಮದಲ್ಲಿ ₹2.60 ಕೋಟಿ ವೆಚ್ಚದ ವಿವಿಧ ರಸ್ತೆಗಳ ಅಭಿವೃದ್ಧಿ ಕಾಮಗಾರಿ ಹಾಗೂ ತಾಲ್ಲೂಕಿನ ಕಡತನಾಳು ಗ್ರಾಮದಲ್ಲಿ ಎನ್‌ಆರ್‌ಎಲ್‌ಎಂ ಯೋಜನೆಯಡಿ ಮಹಿಳಾ ಸಮುದಾಯ ಭವನ ಹಾಗೂ ಶ್ರೀನಿವಾಸ ಅಗ್ರಹಾರ ಗ್ರಾಮದಲ್ಲಿ ಸಿಮೆಂಟ್ ರಸ್ತೆ ನಿರ್ಮಾಣ ಕಾಮಗಾರಿಗೆ ರಮೇಶ ಬಂಡಿಸಿದ್ದೇಗೌಡ ಚಾಲನೆ ನೀಡಿದರು.
ತಹಶೀಲ್ದಾರ್ ಪರಶುರಾಮ ಸತ್ತಿಗೇರಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೇಣು, ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಪ್ರಿಯದರ್ಶಿನಿ, ಎಡಿಎಲ್‌ಆರ್ ಮೇಘನಾ, ಅರಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಕೆ. ಮಂಜುನಾಥ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಸಂತೋಷ್, ಅಪೆಕ್ಸ್ ಬ್ಯಾಂಕ್ ಮಾಜಿ ನಿರ್ದೇಶಕ ಶಿವಯ್ಯ, ಮುಖಂಡರಾದ ಎ.ಆರ್. ಶಶಾಂಕ್, ಭವಾನಿ ರವಿ, ದಿವಾಕರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.