
ಮಂಡ್ಯ: ಪ್ರಸಕ್ತ ಸಾಲಿನಲ್ಲಿ ‘ಪದ್ಮಶ್ರೀ’ ಪ್ರಶಸ್ತಿ ಪುರಸ್ಕೃತರಾಗಿರುವ ಎಂ.ಅಂಕೇಗೌಡರ ‘ಪುಸ್ತಕ ಮನೆ’ಯ 10 ಲಕ್ಷಕ್ಕೂ ಹೆಚ್ಚು ಪುಸ್ತಕಗಳು ವ್ಯವಸ್ಥಿತ ಸೂರಿಗಾಗಿ ಕಾಯುತ್ತಿವೆ.
ಜಿಲ್ಲೆಯ ಪಾಂಡವಪುರದಲ್ಲಿರುವ ‘ಅಂಕೇಗೌಡ ಜ್ಞಾನ ಪ್ರತಿಷ್ಠಾನ’ದ ಗ್ರಂಥಾಲಯದಲ್ಲಿ ಬರೋಬ್ಬರಿ 20 ಲಕ್ಷ ಪುಸ್ತಕಗಳಿವೆ. ಹೆಚ್ಚುವರಿ ಕೊಠಡಿ ಮತ್ತು ಕಪಾಟುಗಳಿಲ್ಲದೆ ಕೋಟ್ಯಂತರ ರೂಪಾಯಿ ಮೌಲ್ಯದ ಗ್ರಂಥಗಳು, ಕೈಪಿಡಿಗಳು, ಶಬ್ದಕೋಶಗಳು ನೆಲದಲ್ಲಿ ಅಸ್ತವ್ಯಸ್ತವಾಗಿ ಬಿದ್ದು ದೂಳು ತಿನ್ನುತ್ತಿವೆ.
ದೇಶದ ಅತಿದೊಡ್ಡ ‘ಪರ್ಸನಲ್ ಲೈಬ್ರರಿ’ ಎಂದು ಹೆಸರಾದ ಇಲ್ಲಿ ಸುಮಾರು 200 ಅಲ್ಮೆರಾಗಳಲ್ಲಿ ಜೋಡಿಸಿರುವ ಪುಸ್ತಕಗಳನ್ನು ಹೊರತುಪಡಿಸಿದರೆ, ಸೂಕ್ತ ನಿರ್ವಹಣೆ ಸಾಧ್ಯವಾಗದೆ ಸಾವಿರಾರು ಪುಸ್ತಕಗಳು ಮಳೆ ನೀರಿನಲ್ಲಿ ತೋಯ್ದಿವೆ, ಗೆದ್ದಲು ಸಮಸ್ಯೆಯಿಂದಾಗಿ ಹಾಳಾಗುತ್ತಿವೆ.
‘ಒಬ್ಬರೇ ವ್ಯಕ್ತಿ ಇಷ್ಟೊಂದು ಪುಸ್ತಕಗಳನ್ನು ವ್ಯವಸ್ಥಿತವಾಗಿ ನಿರ್ವಹಣೆ ಮಾಡುವುದೂ ಸವಾಲು. ಸಿಬ್ಬಂದಿ ಇಲ್ಲದೆ ಅಂಕೇಗೌಡರ ಕುಟುಂಬಸ್ಥರೇ ಪುಸ್ತಕಗಳನ್ನು ಜೋಡಿಸಿಡಲು, ಹಾಳಾಗದಂತೆ ಕಾಪಾಡಲು ಹರಸಾಹಸ ಪಡುತ್ತಿದ್ದಾರೆ’ ಎಂದು ಮಕ್ಕಳ ಸಾಹಿತ್ಯ ಪರಿಷತ್‌ನ ತಾಲ್ಲೂಕು ಘಟಕದ ಅಧ್ಯಕ್ಷ ಧನ್ಯಕುಮಾರ್ ಹೇಳಿದರು.
ಪಾಂಡವಪುರದ ‘ಪುಸ್ತಕ ಮನೆ’ ಗ್ರಂಥಾಲಯದಲ್ಲಿ ನೆಲದ ಮೇಲೆ ಸುರಿದಿರುವ ಪುಸ್ತಕಗಳ ರಾಶಿಗಳ ನಡುವೆ ಎಂ. ಅಂಕೇಗೌಡ
ವರ್ಗೀಕರಣ ಅಗತ್ಯ:
‘ನೆಲದ ಮೇಲೆ ರಾಶಿ ಪುಸ್ತಕಗಳ ವರ್ಗೀಕರಣ ಆಗಬೇಕು. ಬೇಕಾದ ಪುಸ್ತಕ ಹುಡುಕುವುದೇ ಸವಾಲಾಗಿದೆ. ಓದುವುದಂತೂ ದೂರವೇ ಉಳಿಯುತ್ತದೆ’ ಎಂದು ಅಲ್ಲಿಗೆ ಭೇಟಿ ನೀಡಿದ್ದ ಓದುಗರು ಬೇಸರ ವ್ಯಕ್ತಪಡಿಸಿದರು.
ಅನುದಾನ, ನೆರವು:
20 ವರ್ಷಗಳ ಹಿಂದೆ ಉದ್ಯಮಿ ಹರಿಖೋಡೆ ಅವರು ₹12 ಲಕ್ಷ ಮೊತ್ತದಲ್ಲಿ ಅರ್ಧ ಎಕರೆ ಜಮೀನು ಖರೀದಿಸಿ, ₹80 ಲಕ್ಷ ವೆಚ್ಚದಲ್ಲಿ ಗ್ರಂಥಾಲಯ ಕಟ್ಟಡ ಕಟ್ಟಿಸಿಕೊಟ್ಟಿದ್ದರು. ಡಿ.ವಿ.ಸದಾನಂದಗೌಡ ಅವರು ಸಿ.ಎಂ ಆಗಿದ್ದಾಗ ₹50 ಲಕ್ಷ, ಎಚ್.ಡಿ.ಕುಮಾರಸ್ವಾಮಿ ಅವರು ಸಿ.ಎಂ ಆಗಿದ್ದಾಗ ₹1 ಕೋಟಿ ನೆರವು ದೊರೆತಿತ್ತು. ಅಲ್ಲದೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಟ್ಟಡ, ಕಪಾಟುಗಳ ಸೌಲಭ್ಯ ಒದಗಿಸಿದೆ.
ನೆರವಿಗೆ ಅಂಕೇಗೌಡರ ಮನವಿ
‘ಜೀವಮಾನವಿಡೀ ದುಡಿದ ಹಣ ಹಾಕಿ 30 ವರ್ಷಗಳಿಂದ ಪುಸ್ತಕ ಮನೆಯನ್ನು ನಿರ್ವಹಿಸುತ್ತಿದ್ದೇನೆ. ನೆಲದ ಮೇಲೆ ಬಿದ್ದಿರುವ 10 ಲಕ್ಷ ಪುಸ್ತಕಗಳಿಗೆ ಗ್ರಂಥಾಲಯ ಕಟ್ಟಲು 10 ಎಕರೆ ಜಮೀನು ಮತ್ತು ಆರ್ಥಿಕ ನೆರವನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರ ಒದಗಿಸಬೇಕು’ ಎಂದು ವ್ಯವಸ್ಥಾಪಕ ಟ್ರಸ್ಟಿ ಎಂ.ಅಂಕೇಗೌಡ ಮನವಿ ಮಾಡಿದರು. ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು ‘ಈ ಪುಸ್ತಕಗಳ ಉಪಯೋಗವನ್ನು ಬಡ ಮತ್ತು ಗ್ರಾಮೀಣ ಮಕ್ಕಳು ಪಡೆದುಕೊಳ್ಳುವಂತಾಗಬೇಕು’ ಎಂದು ಅಭಿಪ್ರಾಯಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.