
ಪಾಂಡವಪುರ: ತಾಲ್ಲೂಕಿನ ಬೇಬಿಬೆಟ್ಟದ ದನಗಳ ಜಾತ್ರಾ ಮಹೋತ್ಸವದಲ್ಲಿ ಭಾನುವಾರ ಮಹದೇಶ್ವರಸ್ವಾಮಿ ರಥೋತ್ಸವವು ವಿಜೃಂಭಣೆಯಿಂದ ಜರುಗಿತು.
ಬೇಬಿಬೆಟ್ಟದ ತಪ್ಪಲಿನಲ್ಲಿರುವ ದೇವಸ್ಥಾನದಲ್ಲಿ ಭಕ್ತರು ಪೂಜೆ ಸಲ್ಲಿಸಿದರು. ಬಳಿಕ ದೇವಸ್ಥಾನದ ಸುತ್ತ ಹುಲಿ ವಾಹನೋತ್ಸವ ನಡೆಯಿತು. ಬೆಳಿಗ್ಗೆ 10ಕ್ಕೆ ಸಿದ್ಧಗೊಂಡಿದ್ದ ರಥೋತ್ಸವಕ್ಕೆ ಬೇಬಿಬೆಟ್ಟದ ರಾಮಯೋಗೀಶ್ವರ ಮಠದ ಪೀಠಾಧ್ಯಕ್ಷ ಶಿವಬಸವ ಸ್ವಾಮೀಜಿ ಮತ್ತು ರೈತ ಸಂಘದ ನಾಯಕಿ ಸುನೀತಾ ಪುಟ್ಟಣ್ಣಯ್ಯ ಚಾಲನೆ ನೀಡಿದರು.
ಜಾತ್ರೆಗೆ ಬಂದಿದ್ದ ಅಪಾರ ಭಕ್ತರು ರಥಕ್ಕೆ ಹಣ್ಣು, ಜವನ ಎಸೆದು, ಕೈಮುಗಿದ ನಮಸ್ಕರಿಸಿದರು. ‘ಉಘೇ ಉಘೇ ಮಹದೇಶ್ವರ’ ಎಂದು ಘೋಷಣೆ ಕೂಗುತ್ತಾ ರಥವನ್ನು ಎಳೆದರು.
ದನಗಳ ಜಾತ್ರಾ ಮಾಳದ ಪ್ರಮುಖ ಬೀದಿಗಳಲ್ಲಿ ರಥೋತ್ಸವ ನಡೆಯಿತು. ಬೇಬಿಬೆಟ್ಟದ ಸುತ್ತಮುತ್ತಲಿನ ಗ್ರಾಮದ ಅಪಾರ ಜನರು ರಥೋತ್ಸವದಲ್ಲಿ ಭಾಗವಹಿಸಿ ರಥವನ್ನು ಎಳೆದರು. ಮಧ್ಯಾಹ್ನ 3 ಗಂಟೆಯಲ್ಲಿ ರಥೋತ್ಸವವು ಮಹದೇಶ್ವರಸ್ವಾಮಿ ದೇವಸ್ಥಾನಕ್ಕೆ ತಲುಪಿ, ಕೊನೆಗೊಂಡಿತು.
ಷಣ್ಮುಖ ಸ್ವಾಮೀಜಿ, ತಾ.ಪಂ. ಇಒ ವೀಣಾ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಟಿ.ಗೋವಿಂದೇಗೌಡ, ರೈತ ಸಂಘದ ತಾಲ್ಲೂಕು ಅಧ್ಯಕ್ಷ ಕೆನ್ನಾಳು ವಿಜಯಕುಮಾರ್ ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.