ADVERTISEMENT

ಡೇರಿ ಕಾರ್ಯದರ್ಶಿ ಕಾರ್ಯವೈಖರಿಗೆ ಖಂಡನೆ: ರಸ್ತೆಗೆ ಹಾಲು ಸುರಿದು ರೈತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2026, 5:33 IST
Last Updated 19 ಫೆಬ್ರುವರಿ 2026, 5:33 IST
ಪಾಂಡವಪುರ ತಾಲ್ಲೂಕಿನ ಮಾಡರಹಳ್ಳಿ ಡೇರಿ ಕಾರ್ಯದರ್ಶಿ ಕಾರ್ಯವೈಖರಿ ಖಂಡಿಸಿ ರೈತರು ಮತ್ತು ಮಹಿಳೆಯರು ಹಾಲು ಸುರಿದು ಪ್ರತಿಭಟನೆ ನಡೆಸಿದರು 
ಪಾಂಡವಪುರ ತಾಲ್ಲೂಕಿನ ಮಾಡರಹಳ್ಳಿ ಡೇರಿ ಕಾರ್ಯದರ್ಶಿ ಕಾರ್ಯವೈಖರಿ ಖಂಡಿಸಿ ರೈತರು ಮತ್ತು ಮಹಿಳೆಯರು ಹಾಲು ಸುರಿದು ಪ್ರತಿಭಟನೆ ನಡೆಸಿದರು    

ಪಾಂಡವಪುರ: ತಾಲ್ಲೂಕಿನ ಮಾಡರಹಳ್ಳಿ ಗ್ರಾಮದ ಡೇರಿ ಕಾರ್ಯದರ್ಶಿ ಹಾಗೂ ಸೂಪರ್ ವೈಸರ್ ವರ್ತನೆ ಖಂಡಿಸಿ ರೈತರು ಮತ್ತು ಮಹಿಳೆಯರು ಬುಧವಾರ ರಸ್ತೆಗೆ ಹಾಲು ಸುರಿದು ಪ್ರತಿಭಟನೆ ನಡೆಸಿದರು. ಗ್ರಾಮದ ರಸ್ತೆಯಲ್ಲಿ ಜಮಾಯಿಸಿದ ರೈತರು ಡೇರಿ ಕಾರ್ಯುದರ್ಶಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಹಾಲು ಸರಬರಾಜು ಮಾಡಲು ಬಂದ ರೈತರಿಂದ ಸರಿಯಾಗಿ ಹಾಲು ಪರೀಕ್ಷೆ ನಡೆಸದೆ, ಗುಣಮಟ್ಟವಿಲ್ಲ ಎಂದು ಹಾಲನ್ನು ಪಾಪಸ್‌ ಕಳುಹಿಸಿದ್ದಾರೆ. ಇದನ್ನು ಪ್ರಶ್ನಿಸುವ ಮಹಿಳೆಯರ ವಿರುದ್ಧ ದುರ್ನಡೆಯಿಂದ ನಡೆದುಕೊಳ್ಳುತ್ತಾರೆ. ಪುರುಷರು ಪ್ರಶ್ನೆ ಮಾಡಿದರೆ ಅವರ ವಿರುದ್ಧ ಪ್ರಕರಣ ದಾಖಲಿಸುತ್ತಾರೆ ಎಂದು ಆರೋಪಿಸಿದರು.

ಕಳೆದೆರಡು ದಿನಗಳಿಂದ ಹಾಲು ಸರಬರಾಜು ಮಾಡದ ಕಾರಣ ಸುಮಾರು 960 ಲೀಟರ್ ಹಾಲು ನಷ್ಟವಾಗಿದೆ. ರೈತರಿಗೆ ಹಾಲಿನ ನಷ್ಟವನ್ನು ಅಧಿಕಾರಿಗಳು ಭರಿಸಬೇಕು ಎಂದು ಪಟ್ಟುಹಿಡಿದರು.

ADVERTISEMENT

‘ಡೇರಿ ಪ್ರಾರಂಭಗೊಂಡ 15 ವರ್ಷಗಳಿಂದಲೂ ಒಮ್ಮೆ ಹೊರತುಪಡಿಸಿದರೆ ಎಂದಿಗೂ ಚುನಾವಣೆ ನಡೆಸಿಲ್ಲ. ಡೇರಿ ಷೇರುದಾರರಿಗೆ ಯಾವುದೇ ಪ್ರೋತ್ಸಾಹ ಧನ ನೀಡಿಲ್ಲ. ಜತೆಗೆ ಬೋನಸ್ ಹಣವನ್ನೂ ಸರಿಯಾಗಿ ಪಾವತಿಸಿಲ್ಲ. ಗಲಾಟೆ ಮಾಡಿದಾಗ ಕೇವಲ 4 ವರ್ಷದ ಬೋನಸ್ ಹಣ ನೀಡಿದ್ದಾರೆ. ರಾಷ್ಟ್ರೀಯ ಹಬ್ಬಗಳಿಗೆ ಡೇರಿಯಿಂದ ಶಾಲೆಗಳಿಗೆ ಹಣ ನೀಡುವುದಿಲ್ಲ. ಬೋನಸ್ ಹಣ ಏನಾಗಿದೆ ಎಂಬುದು ಗೊತ್ತಾಗಿಲ್ಲ’ ಎಂದು ದೂರಿದರು.

‘ಡೇರಿ ಕಾರ್ಯದರ್ಶಿ ಚಿಕ್ಕ ತಾಯಮ್ಮ ಅವರು ತಮಗಿಷ್ಟ ಬಂದವರನ್ನು ನಿರ್ದೇಶಕರನ್ನಾಗಿ ಸ್ವಯಂ ಆಯ್ಕೆ ಮಾಡಿಕೊಂಡು ಸರ್ವಾಧಿಕಾರ ಧೋರಣೆ ಅನುಸರಿಸುತ್ತಿದ್ದಾರೆ. ನೆಪ ಮಾತ್ರಕ್ಕೆ ಈಗ ಮಾರ್ಚ್‌ 1ಕ್ಕೆ ಚುನಾವಣೆ ಘೋಷಿಸಿದ್ದಾರೆ. ಗಲಾಟೆ ಎಬ್ಬಿಸಿ ಡೇರಿಯನ್ನು ಸೂಪರ್ ಸೀಡ್‌ ಮಾಡಿಸಿ ನಂತರ ಇವರಿಗೆ ಇಷ್ಟ ಬಂದವರನ್ನು ಆಯ್ಕೆ ಮಾಡಿಕೊಳ್ಳುವ ಹುನ್ನಾರ ನಡೆಸಿದ್ದಾರೆ. ಹೀಗಾಗಿ ಚುನಾವಣೆ ಮುಂದೂಡಬೇಕು’ ಎಂದು ಆಗ್ರಹಿಸಿದ ಪ್ರತಿಭಟನಾಕಾರರು, ಸರಬರಾಜು ಮಾಡಿದ ಹಣವನ್ನು ಕಾಲ ಕಾಲಕ್ಕೆ ಬಟವಾಡೆ ಮಾಡುವುದಿಲ್ಲ ಎಂದು ಡೇರಿ ಕಾರ್ಯದರ್ಶಿ ಚಿಕ್ಕತಾಯಮ್ಮ ಮತ್ತು ಸೂಪರ್ ವೈಸರ್ ಉಷಾ ವಿರುದ್ಧ ಹರಿಹಾಯ್ದರು.

ಡೇರಿಯ ಸಮಸ್ಯೆಯನ್ನು ಬಗೆಹರಿಸದಿದ್ದರೆ ಜಾನುವಾರುಗಳೊಂದಿಗೆ ಪಾಂಡವಪುರ ಮನ್‌ಮುಲ್ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ಚಲುವೇಗೌಡ, ನಾರಾಯಣಗೌಡ, ಶೇಖರ್, ಶಂಕರೇಗೌಡ, ಯೋಗಣ್ಣ, ಆನಂದ, ರಾಜಮ್ಮ, ವಿಜಯಮ್ಮ, ಲಕ್ಷ್ಮಮ್ಮ, ನಿಂಗಮ್ಮ, ಯಜಮಾನರಾದ ವೆಂಕಟೇಗೌಡ, ಮಂಜು, ಎಂ.ಎಸ್.ಜವರೇಗೌಡ ಇತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.