ADVERTISEMENT

ಪಿತೃಪಕ್ಷ: ಎಡೆಯಿಟ್ಟು ಹಿರಿಯರ ಸ್ಮರಣೆ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2025, 5:58 IST
Last Updated 22 ಸೆಪ್ಟೆಂಬರ್ 2025, 5:58 IST
ಡಂಬಳದಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ಹಿರಿಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಅವರನ್ನು ಸ್ಮರಣೆ ಮಾಡಿರುವ ಚಿತ್ರಣ.
ಡಂಬಳದಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ಹಿರಿಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಅವರನ್ನು ಸ್ಮರಣೆ ಮಾಡಿರುವ ಚಿತ್ರಣ.   

ಮಂಡ್ಯ: ‘ದೇವರನ್ನು ಮರೆತರೂ ಪಿತೃಪಕ್ಷ ಮಾಡು’ ಎಂಬ ನಾಣ್ಣುಡಿಯಂತೆ ಭಾನುವಾರ ಎಲ್ಲೆಡೆ ಪಿತೃಪಕ್ಷ ಆಚರಣೆ ಮಾಡಿ ಸ್ವರ್ಗಸ್ಥರಾದ ಹಿರಿಯರಿಗೆ ‘ಎಡೆಯಿಟ್ಟು’ ಸ್ಮರಿಸಲಾಯಿತು.

ಸ್ವರ್ಗಸ್ಥರಾದ ಹಿರಿಯರನ್ನು ಸಂತೃಪ್ತಿಗೊಳಿಸಲು ಅಥವಾ ಮರಣಹೊಂದಿದ ಕುಟುಂಬದ ಹಿರಿಯರನ್ನು ನೆನೆಯುತ್ತಾ ಪಿತೃಗಳ ಮೇಲಿನ ಪ್ರೀತಿ, ಭಕ್ತಿ ಸಮರ್ಪಣೆ ಮಹಾಲಯ ಅಮಾವಾಸ್ಯೆಯಂದು ಆಚರಿಸಲಾಯಿತು. ಬೆಳಿಗ್ಗೆಯಿಂದಲೇ ಜನರು ದೇವಾಲಯಗಳಿಗೆ ಹೋಗಿ ಪೂಜೆ ಸಲ್ಲಿಸಿದರು.

 ತಮ್ಮ ಮನೆಗಳಲ್ಲಿ ಎಡೆ ಇಟ್ಟು ಪೂಜೆ ಸಲ್ಲಿಸಿದರು. ಹಬ್ಬದ ಮುನ್ನಾ ದಿನವಾದ ಶನಿವಾರವೇ ಹಬ್ಬದ ಸಿದ್ಧತೆ ನಡೆದಿತ್ತು. ಚಕ್ಕುಲಿ, ನಿಪ್ಪಟ್ಟು, ವಡೆ, ಕಜ್ಜಾಯ, ಕೋಡುಬಳೆ ಸೇರಿದಂತೆ ಎಣ್ಣೆಯಲ್ಲಿ ಕರಿದ ತಿಂಡಿಗಳು, ಬೇಕರಿಯಿಂದ ಖರೀದಿ ಮಾಡಿ ತಂದಿದ್ದ ಸಿಹಿ ತಿನಿಸುಗಳನ್ನು ಬಾಳೆಯಲ್ಲಿಟ್ಟಿದ್ದ ಎಡೆಯಲ್ಲಿ ಪೂಜಿಸಿ, ಹಿರಿಯರನ್ನು ನೆನಪಿಸಿ ಅರ್ಪಿಸಲಾಯಿತು. 

ADVERTISEMENT

ನೆಂಟರಿಷ್ಟರನ್ನು ಆಹ್ವಾನಿಸಿ ಬಾಡೂಟ ಹಾಗೂ ಸಿಹಿ ಊಟ ಬಡಿಸಿ ಹಬ್ಬ ಆಚರಿಸಲಾಯಿತು. ಹಬ್ಬದ ಹಿನ್ನೆಲೆಯಲ್ಲಿ ಶನಿವಾರ ಮತ್ತು ಭಾನುವಾರ ಮಂಡ್ಯ ನಗರ ಹಾಗೂ ಇತರ ತಾಲ್ಲೂಕು ಕೇಂದ್ರಗಳಲ್ಲಿ ಎಡೆ ಇಡುವ ಸಾಮಗ್ರಿ, ಬಟ್ಟೆ, ಹಣ್ಣು, ಹೂವು ಹಾಗೂ ಇತರ ವಸ್ತುಗಳ ಖರೀದಿಯ ಭರಾಟೆ ಜೋರಾಗಿಯೇ ನಡೆದಿತ್ತು.

ಕುಟುಂಬದಲ್ಲಿ ವಿಧಿವಶರಾದ ಹಿರಿಯರನ್ನು ಸ್ಮರಿಸುವ, ಅವರ ಆತ್ಮಕ್ಕೆ ಶಾಂತಿ ಕೋರುವ ನಿಟ್ಟಿನಲ್ಲಿ ಎಡೆ ಇಟ್ಟು ಆಚರಿಸಲ್ಪಡುವ ಮಹಾಲಯ ಜಿಲ್ಲೆಯಲ್ಲಿ ವಿಶೇಷವಾದ ಮನ್ನಣೆ ಇದೆ. ನಗರ, ಗ್ರಾಮೀಣ ಭಾಗದಲ್ಲಿ ‌ಹಬ್ಬ ಆಚರಿಸಲಾಯಿತು. ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಅಮಾವಾಸ್ಯೆ ದಿನದಂದೇ ಹಬ್ಬ ಆಚರಿಸಿ ಪೂಜಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.