ADVERTISEMENT

2 ಜಿಂಕೆ ಬೇಟೆ: ಕಳ್ಳರಿಗೆ ಗುಂಡೇಟು

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2021, 13:07 IST
Last Updated 3 ಸೆಪ್ಟೆಂಬರ್ 2021, 13:07 IST

ಹಲಗೂರು (ಮಂಡ್ಯ ಜಿಲ್ಲೆ): ಇಲ್ಲಿಯ ಕಾವೇರಿ ವನ್ಯಜೀವಿ ವಲಯದಲ್ಲಿ ನಾಲ್ವರು ಶುಕ್ರವಾರ ನಸುಕಿನಲ್ಲಿ 2 ಜಿಂಕೆ ಬೇಟೆಯಾಡಿ ಕೊಂದು ಸಾಗಿಸುತ್ತಿದ್ದ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಗುಂಡು ಹಾರಿಸಿದ್ದಾರೆ. ಒಬ್ಬನನ್ನು ಬಂಧಿಸಿದ್ದು ಮೂವರು ಪರಾರಿಯಾಗಿದ್ದಾರೆ.

ವೆಂಕಟೇಶ್‌ ಗುಂಡೇಟಿನಿಂದ ಗಾಯಗೊಂಡಿದ್ದು ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಮನು, ಶೇಖರ್, ತೀರ್ಥ ಕತ್ತಲಲ್ಲಿ ಪರಾರಿಯಾಗಿದ್ದಾರೆ.

ನಸುಕಿನ 3 ಗಂಟೆ ಸಮಯದಲ್ಲಿ ಆರೋಪಿಗಳು ನಾಡಬಂದೂಕಿನಿಂದ 2 ಜಿಂಕೆಯನ್ನು ಕೊಂದಿದ್ದಾರೆ. ಗುಂಡಿನ ಸದ್ದು ಅರಿತ ಸ್ಥಳೀಯರು ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ರಾತ್ರಿ ಪಾಳಿಯ ಗಸ್ತಿನಲ್ಲಿದ್ದ ವನ ಪಾಲಕರು ಆರೋಪಿಗಳನ್ನು ಸುತ್ತುವರಿದಿದ್ದಾರೆ. ಈ ಸಂದರ್ಭದಲ್ಲಿ ಆರೋಪಿಗಳ ಪ್ರತಿರೋಧ ವ್ಯಕ್ತಪಡಿಸಿ ಗುಂಡು ಹಾರಿಸಲು ಯತ್ನಿಸಿದ್ದಾರೆ.

ADVERTISEMENT

ಅಪಾಯ ಅರಿತ ವನಪಾಲರು ಆರೋಪಿಗಳ ಮೇಲೆ ಗುಂಡು ಹಾರಿಸಿದ್ದಾರೆ. ಗುಂಡೇಟಿನಿಂದ ಗಾಯಗೊಂಡ ವೆಂಕಟೇಶ್‌ ಸಿಕ್ಕಿಬಿದ್ದಿದ್ದಾನೆ. ಪರಾರಿಯಾದ ಮೂವರ ಬಂಧನಕ್ಕೆ ತಂಡ ರಚಿಸಲಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದರು.

ಸ್ಥಳಕ್ಕೆ ಎಸಿಎಫ್‌ ಅಂಕರಾಜು, ವಲಯ ಅರಣ್ಯಾಧಿಕಾರಿ ಮಹದೇವಸ್ವಾಮಿ, ಡಿವೈಎಸ್‌ಪಿ ಲಕ್ಷ್ಮಿ ನಾರಾಯಣ್ ಪ್ರಸಾದ್, ಸಬ್‌ ಇನ್‌ಸ್ಪೆಕ್ಟರ್‌ ಮಾರುತಿ ತಮ್ಮಣ್ಣವರ್ ಭೇಟಿ ನೀಡಿ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.