
ಮಂಡ್ಯ: ಶಿಕ್ಷಕರು ವಿದ್ಯಾರ್ಥಿಗಳಿಗೆ ರಾಜಕೀಯ, ನೈತಿಕ ಪರಿಸರ ಪ್ರಜ್ಞೆ ಕಲಿಸಿದಾಗ ಮಾತ್ರ ಉತ್ತಮ ಸಮಾಜ ಹಾಗೂ ಪ್ರಜೆಗಳನ್ನು ಸೃಷ್ಟಿಸಲು ಸಾಧ್ಯ ಎಂದು ವನ್ಯಜೀವಿ ಛಾಯಾಗ್ರಾಹಕ ಕೃಪಾಕರ ತಿಳಿಸಿದರು.
ನಗರದ ಗಾಂಧಿ ಭವನದಲ್ಲಿ ಶಾಲಾ ಶಿಕ್ಷಣ ಇಲಾಖೆ(ಪದವಿಪೂರ್ವ) ಪದವಿಪೂರ್ವ ಕಾಲೇಜುಗಳ ಕನ್ನಡ ಉಪನ್ಯಾಸಕರ ವೇದಿಕೆ ವತಿಯಿಂದ ಬುಧವಾರ ಆಯೋಜಿಸಿದ್ದ ಶೈಕ್ಷಣಿಕ ಸಮ್ಮೇಳನ ಮತ್ತು ನೂತನ ಮಾದರಿ ಪ್ರಶ್ನೆ ಪತ್ರಿಕೆ ನೀಲನಕ್ಷೆ ಅನ್ವಯಿಕತೆ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಪರಿಸರ ಮತ್ತು ಚರಿತ್ರೆಯಂತಹ ವಿಷಯಗಳನ್ನು ಕಪ್ಪು ಮತ್ತು ಬಿಳುಪಿನಲ್ಲಿ ಹೇಳಲು ಸಾಧ್ಯವಿಲ್ಲ. ಅದಕ್ಕೆ ವಿವಿಧ ಆಯಾಮ ಇರುತ್ತದೆ. ವಿದ್ಯಾರ್ಥಿಗಳಿಗೆ ಪಠ್ಯ ಬೋಧನೆ ಜೊತೆಗೆ ವೃತ್ತಿಪರತೆಯ ಆಸಕ್ತಿಯ ವಿಷಯ ತಿಳಿಸುವ ಕೆಲಸವಾಗಬೇಕು’ ಎಂದು ಸಲಹೆ ನೀಡಿದರು.
ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಉಪನಿರ್ದೇಶಕ ಸಿ.ಚಲುವಯ್ಯ ಮಾತನಾಡಿ, ‘ವಿಜ್ಞಾನ ವ್ಯವಹಾರ ಅಧ್ಯಯನದಂತಹ ವಿಷಯಗಳಿಗೆ ಗಮನ ಕೊಡುವ ವಿದ್ಯಾರ್ಥಿಗಳನ್ನು ಕನ್ನಡ ಸಾಹಿತ್ಯದೆಡೆಗೆ ಆಕರ್ಷಿಸುವುದು ಕಷ್ಟದ ಕೆಲಸ. ಅದರಲ್ಲೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಲ್ಲಿ ವರ್ಣಮಾಲೆ, ವ್ಯಾಕರಣದ ಅರಿವು ಮೂಡಿಸುವುದು ಇನ್ನೂ ಕಷ್ಟ. ಇಂತಹ ವಾತಾವರಣದಲ್ಲಿ ಕನ್ನಡ ಉಪನ್ಯಾಸಕರು ಒಳ್ಳೆಯ ಫಲಿತಾಂಶ ಕೊಡುತ್ತಿರುವುದು ಸಂತಸದ ವಿಷಯವೇ ಸರಿ’ ಎಂದು ಶ್ಲಾಘಿಸಿದರು.
ವನ್ಯಜೀವಿ ಛಾಯಾಗ್ರಾಹಕ ಸೇನಾನಿ ಮಾತನಾಡಿ, ‘ಭೂಮಂಡಲದಲ್ಲಿ ಮನುಷ್ಯನಿಗೆ ಇರುವಷ್ಟೇ ಪ್ರಾಮುಖ್ಯತೆ ಮರ, ಗಿಡ, ಬಳ್ಳಿ, ಕ್ರಿಮಿ ಕೀಟ ಪ್ರಾಣಿಗಳಿಗೂ ಇದೆ ಎಂದು ಭಾವಿಸಿದರೆ ಅದೇ ಪರಿಸರಕ್ಕೆ ಕೊಡುವ ದೊಡ್ಡ ಕೊಡುಗೆ. 80 ಲಕ್ಷ ಜೀವಿಗಳಲ್ಲಿ ಮನುಷ್ಯನೊಬ್ಬ ಪರಿಸರದ ಒಂದು ಭಾಗವೆಂದುಕೊಂಡರೆ ಸಾಕು’ ಎಂದು ಅಭಿಪ್ರಾಯಪಟ್ಟರು.
ಕನ್ನಡ ಉಪನ್ಯಾಸಕರ ವೇದಿಕೆ ಅಧ್ಯಕ್ಷ ಲೋಕೇಶ ಬೆಕ್ಕಳಲೆ ಅಧ್ಯಕ್ಷತೆ ವಹಿಸಿದ್ದರು. ಇತ್ತೀಚಿಗೆ ನಿಧನರಾದ ಎಸ್.ಎಲ್.ಭೈರಪ್ಪ ಅವರಿಗೆ ಸಂತಾಪ ಸೂಚಿಸಲಾಯಿತು.
ಕಾರ್ಯಕ್ರಮದಲ್ಲಿ ಗೌರವ ಸಲಹೆಗಾರ ವೈ.ಕೃಷ್ಣಪ್ಪ, ಗೌರವಾಧ್ಯಕ್ಷೆ ಸಿ.ಗೌರಮ್ಮ, ಉಪನ್ಯಾಸಕರಾದ ರವಿ, ಸೋಮಶೆಟ್ಟಿ, ಶಿವಲಿಂಗೇಗೌಡ, ಸಂಪನ್ಮೂಲ ವ್ಯಕ್ತಿ ಎಸ್.ನರಸಿಂಹಸ್ವಾಮಿ, ಶಾಲಾ ಶಿಕ್ಷಣ ಇಲಾಖೆಯ ಸಹಾಯಕ ನಿರ್ದೇಶಕ ಕೆಂಪೇಗೌಡ, ವೇದಿಕೆಯ ಪದಾಧಿಕಾರಿಗಳಾದ ಕೆ.ಟಿ.ಪುಷ್ಪಲತಾ, ವಿನೋದ್ ಸಿಂಗ್, ಪ್ರತಿಮಾರಾಣಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.