ADVERTISEMENT

ಮಂಡ್ಯ: ಪೌರಕಾರ್ಮಿಕರಿಗೆ ‘ಗೃಹ ಭಾಗ್ಯ’ ಕಲ್ಪಿಸಿ-ಜಿಲ್ಲಾಧಿಕಾರಿ

ಸಾರ್ವಜನಿಕ ಶೌಚಾಲಯ ಸರಿಯಾಗಿ ನಿರ್ವಹಿಸಿ, ರಸ್ತೆಯಲ್ಲಿ ಕಸ ಹಾಕಿದರೆ ದಂಡ ಹಾಕಿ: ಡಿಸಿ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2025, 4:52 IST
Last Updated 22 ನವೆಂಬರ್ 2025, 4:52 IST
ಮಂಡ್ಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಕುಮಾರ ಅವರು ನಗರಸಭೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದರು 
ಮಂಡ್ಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಕುಮಾರ ಅವರು ನಗರಸಭೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದರು    

ಮಂಡ್ಯ: ‘ಪೌರಕಾರ್ಮಿಕರಿಗೆ ಇ‌.ಎಸ್.ಐ., ಪಿ.ಎಫ್, ಸಂಬಳ ಹಾಗೂ ಸುರಕ್ಷಿತ ಪರಿಕರಗಳನ್ನು ಸಮರ್ಪಕವಾಗಿ ನೀಡಲಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಿ. ಪೌರಕಾರ್ಮಿಕರ ಹಿತ ಕಾಯುವುದು ನಗರಸಭೆಯ ಜವಾಬ್ದಾರಿ’ ಎಂದು ಜಿಲ್ಲಾಧಿಕಾರಿ ಕುಮಾರ ಅವರು ನಗರಸಭೆ ಪೌರಾಯುಕ್ತರಿಗೆ ಸೂಚಿಸಿದರು. 

ನಗರಸಭೆಯಲ್ಲಿ ಶುಕ್ರವಾರ ಆಯೋಜಿಸಿದ್ದ ನಗರ ವ್ಯಾಪ್ತಿಯ ಕೆಲಸಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಗರಸಭೆ ವ್ಯಾಪ್ತಿಯಲ್ಲಿ 314 ಪೌರಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ. ಪೌರಕಾರ್ಮಿಕರ ಆರೋಗ್ಯ ವಿವರಗಳನ್ನೊಳಗೊಂಡ ಪಟ್ಟಿಯ ಪ್ರತ್ಯೇಕ ಕಡತವನ್ನು ನಿರ್ವಹಣೆ ಮಾಡಿ. ಚಿಕಿತ್ಸೆ ಅಗತ್ಯವಿರುವ ಪೌರಕಾರ್ಮಿಕರಿಗೆ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸಿ ಎಂದು ಹೇಳಿದರು. 

25 ಪೌರಕಾರ್ಮಿಕರು ಪೌರಕಾರ್ಮಿಕ ಗೃಹ ಭಾಗ್ಯ ಯೋಜನೆಯಡಿ ಅರ್ಹರಿದ್ದಾರೆ. ಒಂದು ವಾರದೊಳಗೆ ಪೌರಕಾರ್ಮಿಕ ಗೃಹ ಭಾಗ್ಯ ಯೋಜನೆಯನ್ನು ಅರ್ಹರಿಗೆ ತಲುಪಿಸಿ ಎಂದು ಹೇಳಿದರು.

ADVERTISEMENT

ನಗರದ ಪ್ರಮುಖ ರಸ್ತೆಗಳಲ್ಲಿ ಕಸದ ರಾಶಿಗಳು ಹೆಚ್ಚಾಗಿ ಕಾಣುತ್ತಿವೆ. ಕಸಗಳನ್ನು ಸರಿಯಾಗಿ ನಿರ್ವಹಣೆ ಮಾಡಿ. ರಸ್ತೆಗಳಲ್ಲಿ ಕಸವನ್ನು ಹಾಕುವ ಅಂಗಡಿಗಳ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಹಾಗೂ ಟ್ರೇಡ್ ಲೈಸನ್ಸ್ ಅನ್ನು ರದ್ದುಗೊಳಿಸಿ. ನಗರಸಭೆ ವ್ಯಾಪ್ತಿಯಲ್ಲಿ ಬರುವ 10 ಸಾರ್ವಜನಿಕ ಶೌಚಾಲಯಗಳನ್ನು ಸೂಕ್ತವಾಗಿ ನಿರ್ವಹಿಸಿ ಎಂದು ಹೇಳಿದರು.

ನಿತ್ಯ 60 ಟನ್‌ ಘನತ್ಯಾಜ್ಯ:

ನಗರಸಭೆ ವ್ಯಾಪ್ತಿಯಲ್ಲಿ ಪ್ರತಿ ದಿನ 60 ಟನ್ ಘನ ತ್ಯಾಜ್ಯ ಉತ್ಪಾದನೆಯಾಗುತ್ತಿದೆ. ಘನತ್ಯಾಜ್ಯ ವನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡಿ. ತ್ಯಾಜ್ಯ ವಿಲೇವಾರಿಗೆ 10 ಟ್ರ್ಯಾಕ್ಟರ್ ಬಳಸಲಾಗುತ್ತಿದೆ. ನಗರಸಭೆ ಎಲ್ಲ ವಾಹನಗಳ ಚಾಲಕರಿಗೆ ಡಿ.ಎಲ್ ಇದೆಯೇ? ವಾಹನಗಳಿಗೆ ದಾಖಲೆಗಳು ಸರಿ ಇದೆಯೇ? ಪರಿಶೀಲಿಸಿ. ಈಗಾಗಲೇ ನಗರಸಭೆ ಎಲ್ಲಾ ವಾಹನಗಳಿಗೂ ಜಿಪಿಎಸ್ ಟ್ರ್ಯಾಕರ್‌ ಅಳವಡಿಸಲಾಗಿದೆ ಎಂದು ತಿಳಿಸಿದರು.

ನೀರು ಸೋರಿಕೆ ಸರಿಪಡಿಸಿ:

ಮಹಾವೀರ ವೃತ್ತದ ರೈಲ್ವೆ ಅಂಡರ್ ಪಾಸ್ ಬಳಿ ನೀರು ಸೋರಿಕೆ ಆಗುತ್ತಿರುವ ಕುರಿತು ದೂರು ಕೇಳಿ ಬಂದಿದೆ. ಸಂಬಂಧಪಟ್ಟ ಅಧಿಕಾರಿಗಳು ಶೀಘ್ರವೇ ಅದನ್ನು ಸರಿಪಡಿಸಲು ಕ್ರಮವಹಿಸಿ. ನಗರಸಭೆ ವ್ಯಾಪ್ತಿಯಲ್ಲಿ ಶೇ 78ರಷ್ಟು ಟ್ಯಾಕ್ಸ್ ಸಂಗ್ರಹಿಸಲಾಗಿದೆ. ವರ್ಷ ಕಳೆಯಲು ಒಂದು ತಿಂಗಳು ಬಾಕಿ ಇರುವುದರಿಂದ ಶೀಘ್ರವಾಗಿ ತೆರಿಗೆ ಸಂಗ್ರಹಣೆ ಮಾಡಿ ಎಂದು ಸೂಚಿಸಿದರು.

ಸಭೆಯಲ್ಲಿ ನಗರಸಭೆ ಪೌರಾಯುಕ್ತ ಪಂಪಾಶ್ರೀ, ನಗರಾಭಿವೃದ್ಧಿ ಕೋಶದ ಕಾರ್ಯಪಾಲಕ ಎಂಜಿನಿಯರ್‌ ಪ್ರತಾಪ್, ನಗರಸಭೆ ಪರಿಸರ ಎಂಜಿನಿಯರ್‌ ರುದ್ರೇಗೌಡ ಹಾಜರಿದ್ದರು. 

ಕಸ ವಿಲೇವಾರಿ ಸಮರ್ಪಕವಾಗಿ ನಿರ್ವಹಿಸಿ  ರೈಲ್ವೆ ಅಂಡರ್‌ಪಾಸ್‌ನಲ್ಲಿ ನೀರು ಸೋರಿಕೆ ತಡೆಗಟ್ಟಿ  ‘ಸಾವಯವ ಗೊಬ್ಬರ’ದ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಿ

400 ಟನ್ ‘ಸಾವಯವ ಗೊಬ್ಬರ’ ದಾಸ್ತಾನು ‘

ನಗರಸಭೆ ವ್ಯಾಪ್ತಿಯಲ್ಲಿ ಬರುವ ತ್ಯಾಜ್ಯಗಳಿಂದ 400 ಟನ್ ಸಾವಯವ ಗೊಬ್ಬರ ತಯಾರಿಸಿ ದಾಸ್ತಾನು ಮಾಡಲಾಗಿದೆ. ವಾರಕ್ಕೆ ಎರಡು ಟನ್ ಸಾವಯವ ಗೊಬ್ಬರ ಮಾರಾಟವಾಗುತ್ತಿದ್ದು ಇದರ ಕುರಿತು ಹೆಚ್ಚಾಗಿ ರೈತರಿಗೆ ತಿಳಿಯಬೇಕು. ಕೃಷಿ ಇಲಾಖೆ ತೋಟಗಾರಿಕೆ ಇಲಾಖೆ ಜೊತೆ ಕೈಗೂಡಿ ಸದರಿ ಗೊಬ್ಬರವನ್ನು ಬ್ರ್ಯಾಂಡಿಂಗ್‌ ಮಾಡಿ ಮಾರಾಟ ಮಾಡಲು ಸೂಕ್ತ ಕ್ರಮ ವಹಿಸಿ’ ಎಂದು ಜಿಲ್ಲಾಧಿಕಾರಿ ಕುಮಾರ ಸೂಚಿಸಿದರು.  ನಗರಸಭೆಯಲ್ಲಿ ಇ-ಖಾತಾ ಟ್ರೇಡ್ ಲೈಸೆನ್ಸ್ ಇನ್ನಿತರ ಖಾತೆಗಳನ್ನು ಸೃಜಿಸಲು ತಡವಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಸಾರ್ವಜನಿಕರಿಗೆ ತೊಂದರೆ ಆಗದಂತೆ ಕಾಲಮಿತಿಯೊಳಗೆ ಎಲ್ಲ ಖಾತೆಗಳನ್ನು ಪಾರದರ್ಶಕವಾಗಿ ನೀಡಬೇಕು ಎಂದು ತಿಳಿಸಿದರು.

‘ಬ್ಯಾನರ್‌ ಕಟ್ಟುವವರ ವಿರುದ್ಧ ಕ್ರಮ’

ರಸ್ತೆಗಳ ಮಧ್ಯೆ ನಗರಸಭೆ ಪರವಾನಗಿ ಇಲ್ಲದೆ ಬ್ಯಾನರ್ ಅಳವಡಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಿ. ರಸ್ತೆಗಳ ಮಧ್ಯ ಬ್ಯಾನರ್ ಕಟ್ಟುವುದರಿಂದ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚು ಇರುತ್ತದೆ. ಗಾಳಿಗೆ ಬ್ಯಾನರ್‌ಗಳು ಬೈಕ್‌ ಸವಾರರ ಮೇಲೆ ಬಿದ್ದು ಅವಘಡಗಳು ಉಂಟಾಗುತ್ತವೆ. ಜಿಲ್ಲೆಯಲ್ಲಿನ ಬ್ಯಾನರ್ ಪ್ರಿಂಟರ್ ಮಾಲೀಕರ ಜೊತೆ ಸಭೆ ನಡೆಸಿ ಜಾಗೃತಿ ಮೂಡಿಸಿ ಎಂದು ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.