ADVERTISEMENT

ಪ್ರಜಾವಾಣಿ@75 ಇತಿಹಾಸ ರಸಪ್ರಶ್ನೆ ಸ್ಪರ್ಧೆಗೆ ಕ್ಷಣಗಣನೆ

ಬೆಳ್ಳಿಪರದೆಯಲ್ಲಿ ಮೂಡಿ ಬರಲಿವೆ ಪ್ರಶ್ನೆಗಳು, ಉತ್ತರ ನೀಡಲಿದ್ದಾರೆ ಪದವಿ ವಿದ್ಯಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2023, 14:12 IST
Last Updated 6 ಫೆಬ್ರುವರಿ 2023, 14:12 IST
ಪ್ರಜಾವಾಣಿ ಅಮೃತ ಮಹೋತ್ಸವದ ಅಂಗವಾಗಿ ಮಂಡ್ಯದ ಪಿಇಎಸ್‌ ವಿಜ್ಞಾನ, ಕಲಾ ಮತ್ತು ವಾಣಿಜ್ಯ ಕಾಲೇಜು ಮಂಗಳವಾರ ಆಯೋಜಿಸಿರುವ ಇತಿಹಾಸ ರಸಪ್ರಶ್ನೆ ಸ್ಪರ್ಧೆಗೆ ಅಂತಿಮ ಹಂತದ ಸಿದ್ಧತೆ ನಡೆಯುತ್ತಿರುವುದು
ಪ್ರಜಾವಾಣಿ ಅಮೃತ ಮಹೋತ್ಸವದ ಅಂಗವಾಗಿ ಮಂಡ್ಯದ ಪಿಇಎಸ್‌ ವಿಜ್ಞಾನ, ಕಲಾ ಮತ್ತು ವಾಣಿಜ್ಯ ಕಾಲೇಜು ಮಂಗಳವಾರ ಆಯೋಜಿಸಿರುವ ಇತಿಹಾಸ ರಸಪ್ರಶ್ನೆ ಸ್ಪರ್ಧೆಗೆ ಅಂತಿಮ ಹಂತದ ಸಿದ್ಧತೆ ನಡೆಯುತ್ತಿರುವುದು   

ಮಂಡ್ಯ: ಪ್ರಜಾವಾಣಿ ಅಮೃತ ಮಹೋತ್ಸವದ ಅಂಗವಾಗಿ ಪಿಇಎಸ್‌ ವಿಜ್ಞಾನ, ಕಲಾ ಮತ್ತು ವಾಣಿಜ್ಯ ಕಾಲೇಜು ಆಯೋಜಿಸಿರುವ ಕೆ.ವಿ.ಶಂಕರಗೌಡ ಸ್ಮರಣೆಯ ‘ಜಿಲ್ಲಾ ಮಟ್ಟದ ಇತಿಹಾಸ ರಸಪ್ರಶ್ನೆ ಸ್ಪರ್ಧೆ’ಗೆ ಕ್ಷಣಗಣನೆ ಆರಂಭವಾಗಿದೆ.

ಕಾಲೇಜು ಆವರಣದಲ್ಲಿರುವ ವಿವೇಕಾನಂದ ರಂಗಮಂದಿರದಲ್ಲಿ ಮಂಗಳವಾರ (ಫೆ.7) ಬೆಳಿಗ್ಗೆ 10 ಗಂಟೆಯಿಂದ ಕಾರ್ಯಕ್ರಮ ಆರಂಭವಾಗಲಿದೆ. ಇತಿಹಾಸ ವಿಭಾಗದ ವತಿಯಿಂದ ಸ್ಪರ್ಧೆ ಆಯೋಜಿಸಲಾಗಿದೆ. ಸ್ಪರ್ಧೆಯು ಸಂಪೂರ್ಣ ಡಿಜಿಟಲ್‌ಮಯವಾಗಿದ್ದು ಪ್ರೊಜೆಕ್ಟರ್‌, ಸ್ಕ್ರೀನ್‌ ಮೂಲಕ ರಸಪ್ರಶ್ನೆ ನಡೆಯಲಿದೆ. ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರೊ.ಕಿರಣ್‌ ಅವರು ರಸಪ್ರಶ್ನೆ ನಡೆಸಿಕೊಡಲಿದ್ದಾರೆ.

ಲಿಖಿತ ಪರೀಕ್ಷೆಯ ಮೂಲಕ ಸ್ಪರ್ಧೆಗೆ ಸ್ಪರ್ಧಾಳುಗಳನ್ನು ಆಯ್ಕೆ ಮಾಡಲಾಗುತ್ತದೆ. ಪ್ರತಿ ಕಾಲೇಜಿನಿಂದ ಗರಿಷ್ಠ 2 ತಂಡಗಳಿಗೆ ಅವಕಾಶವಿರುತ್ತದೆ, ಪ್ರತಿ ತಂಡದಲ್ಲಿ ಇಬ್ಬರು ಮಾತ್ರ ಭಾಗವಹಿಸಬಹುದು. ಸ್ಪರ್ಧೆಗೆ ಜಿಲ್ಲಾಧಿಕಾರಿ ಡಾ.ಎಚ್‌.ಎನ್‌.ಗೋಪಾಲಕೃಷ್ಣ ಚಾಲನೆ ನೀಡಲಿದ್ದಾರೆ. ಜನತಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಕೆ.ಎಸ್‌.ವಿಜಯ್‌ ಆನಂದ್‌ ಅಧ್ಯಕ್ಷತೆಯಲ್ಲಿ ಸಮಾರಂಭ ನಡೆಯಲಿದೆ.

ADVERTISEMENT

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್‌.ಯತೀಶ್‌, ಜಿಲ್ಲಾ ಪಂಚಾಯಿತಿ ಸಿಇಒ ಶಾಂತಾ ಎಲ್‌ ಹುಲ್ಮನಿ, ಹಿರಿಯ ಸಿವಿಲ್‌ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎ.ಎಂ.ನಳಿನಿಕುಮಾರಿ, ಪಿಇಟಿ ಜಂಟಿ ಕಾರ್ಯದರ್ಶಿ ಕೆ.ಆರ್‌.ದಯಾನಂದ್‌, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎಚ್‌.ಎನ್‌.ನಾಗರಾಜು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಪಿಇಎಸ್‌ ಪದವಿ ಕಾಲೇಜು ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ.ಡೇವಿಡ್‌ ಕಾರ್ಯಕ್ರಮ ನಿರ್ವಹಣೆ ಮಾಡುವರು.

ಕನ್ನಡದ ಕೋಟ್ಯಾಧಿಪತಿ ಮಾದರಿ: ಖಾಸಗಿ ವಾಹಿನಿಯಲ್ಲಿ ದಿ.ನಟ ಪುನೀತ್‌ ರಾಜ್‌ಕುಮಾರ್‌ ಅವರು ನಡೆಸಿಕೊಡುತ್ತಿದ್ದ ‘ಕನ್ನಡದ ಕೋಟ್ಯಾಧಿಪತಿ’ ರಿಯಾಲಿಟಿ ಶೋ ಮಾದರಿಯಲ್ಲಿ ಸ್ಪರ್ಧೆ ನಡೆಯಲಿದೆ. ವಿವೇಕಾನಂದ ರಂಗಮಂದಿರದಲ್ಲಿರುವ ಬೆಳ್ಳಿಪರದೆ ಮೇಲೆ ಪ್ರೋಜೆಕ್ಟರ್‌ ಮೂಲಕ ಪ್ರಶ್ನೆಗಳು ಮೂಡಿ ಬರಲಿವೆ.

ಮೊದಲ ಭಾಗ ಆಯ್ಕೆ ಸುತ್ತು, ಲಿಖಿತ ಪರೀಕ್ಷೆಯ ಮೂಲಕ (ಬಹು ಆಯ್ಕೆ) ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗುವುದು. 2ನೇ ಭಾಗದಲ್ಲಿ ನೇರ ಪ್ರಶ್ನೆಗಳಿರುತ್ತವೆ. ಮೊದಲ ಹಂತದಲ್ಲಿ 4 ಸುತ್ತಿನ ಬಹು ಆಯ್ಕೆ ಪ್ರಶ್ನೆಗಳು ಇರುತ್ತವೆ. 2 ಮತ್ತು 3ನೇ ಹಂತದಲ್ಲಿ 3 ಸುತ್ತಿನ ನೇರ ಪ್ರಶ್ನೆಗಳಿರುತ್ತವೆ.

ಮೊದಲ ಹಂತದಲ್ಲಿ 50; 50 ಲೈಫ್‌ಲೈನ್‌ ಬಳಸಹುದು. 2 ಮತ್ತು 3ನೇ ಹಂತದಲ್ಲಿ ಡಬಲ್‌ ಡಿಪ್‌, ಸುಳಿವು ಲೈಫ್‌ಲೈನ್‌ ಬಳಸಲು ಅವಕಾಶವಿರುತ್ತದೆ. ಶಾಸನಗಳು, ನಾಗರಿಕತೆ, ಪ್ರಮುಖ ಯುದ್ಧಗಳು, ಸ್ವಾತಂತ್ರ ಸಂಗ್ರಾಮ, ಪ್ರಮುಖ ರಾಜ ಮನೆತನ, ಐತಿಹಾಸಿಕ ದಿನಗಳು, ಐತಿಹಾಸಿಕ ಸ್ಥಳ ಮತ್ತು ವ್ಯಕ್ತಿಗಳು, ಕಲೆ, ಸಾಹಿತ್ಯ ಮತ್ತು ಪರಂಪರೆ, ವಾಸ್ತುಶಿಲ್ಪ ಮತ್ತು ಇನ್ನಿತರ ಮುಖ್ಯ ವಿಷಯಗಳ ಪಠ್ಯಧಾರಿತ ಪ್ರಶ್ನೆಗಳು ಇರಲಿವೆ.

ವಿಜೇತರಿಗೆ ನಗದು, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆ ವಿತರಣೆ ಮಾಡಲಾಗುವುದು. ಜಿಲ್ಲೆಯ ವಿವಿಧ ಪದವಿ ಕಾಲೇಜುಗಳ ವಿದ್ಯಾರ್ಥಿಗಳು ಸ್ಪರ್ಧೆಗೆ ಹೆಸರು ನೋಂದಣಿ ಮಾಡಿಸಿಕೊಂಡಿದ್ದಾರೆ. ಬೆಳಿಗ್ಗೆ 9.30ಕ್ಕೆ ವಿವೇಕಾನಂದ ರಂಗಮಂದಿರದ ಬಳಿ ಹಾಜರಾಗಿ ಕೂಡ ಹೆಸರು ನೋಂದಣಿ ಮಾಡಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಮೊ; 9844026804, 9535755675, 9448470143 ಸಂಪರ್ಕಿಸಬಹುದು.

**

ಜ್ಞಾನ ಹಾಗೂ ಸ್ಪರ್ಧೆಗೆ ಇನ್ನೊಂದು ಹೆಸರೇ ಪ್ರಜಾವಾಣಿ ಪತ್ರಿಕೆ. ಪ್ರಜಾವಾಣಿ ಅಮೃತ ಮಹೋತ್ಸವದ ಅಂಗವಾಗಿ ನಮ್ಮ ಕಾಲೇಜಿನಲ್ಲಿ ರಸಪ್ರಶ್ನೆ ನಡೆಯುತ್ತಿರುವುದು ಹೆಮ್ಮೆಯ ವಿಷಯ

– ಡಾ.ಜೆ.ಮಹಾದೇವ, ಪ್ರಾಚಾರ್ಯರು, ಪಿಇಎಸ್‌ ಪದವಿ ಕಾಲೇಜು

ಬಹುಮಾನ ವಿವರ
₹ 3000– ಪ್ರಥಮ ಬಹುಮಾನ
₹ 2000– ದ್ವಿತೀಯ ಬಹುಮಾನ
₹ 1000– ತೃತೀಯ ಬಹುಮಾನ
₹ 500– ಸಮಾಧಾನಕರ ಬಹುಮಾನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.