ADVERTISEMENT

ಯುವತಿ ಅತ್ಯಾಚಾರ, ಕೊಲೆ: ಪ್ರತಿಭಟನೆ

ಜಿಲ್ಲೆಯಾದ್ಯಂತ ಪ್ರತಿಭಟನೆ: ಮೃತದೇಹ ಸುಟ್ಟುಹಾಕಿದ ಯುಪಿ ಪೊಲೀಸರ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2020, 16:35 IST
Last Updated 3 ಅಕ್ಟೋಬರ್ 2020, 16:35 IST
ಉತ್ತರಪ್ರದೇಶದಲ್ಲಿ ನಡೆದ ದಲಿತ ಯುವತಿ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಖಂಡಿಸಿ ಮಳವಳ್ಳಿ ಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದವು
ಉತ್ತರಪ್ರದೇಶದಲ್ಲಿ ನಡೆದ ದಲಿತ ಯುವತಿ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಖಂಡಿಸಿ ಮಳವಳ್ಳಿ ಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದವು   

ಮಳವಳ್ಳಿ: ಉತ್ತರಪ್ರದೇಶದ ಹಥರಾಸ್‌ನಲ್ಲಿ ನಡೆದ ದಲಿತ ಯುವತಿಯ ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣವನ್ನು ಖಂಡಿಸಿ ವಿವಿಧ ಪ್ರಗತಿಪರ ಸಂಘಟನೆಗಳ ಸದಸ್ಯರು ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

ಶನಿವಾರ ಪಟ್ಟಣದ ತಾಲ್ಲೂಕು ಪಂಚಾಯಿತಿ ಕಚೇರಿಯಿಂದ ಮೆರವಣಿಗೆ ಹೊರಟ ಅಂಬೇಡ್ಕರ್ ವಿಚಾರ ವೇದಿಕೆ, ಬೌದ್ಧಮಹಾಸಭಾ, ಗಂಗಾಮತ ಸಮಾಜ ಸೇರಿದಂತೆ ವಿವಿಧ ಸಂಘಟನೆಗಳ ಸದಸ್ಯರು ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ದ ಧಿಕ್ಕಾರ ಕೂಗಿದರು. ಪಟ್ಟಣದ ಅನಂತ್‌ರಾಂ ಸರ್ಕಲ್‌ನಲ್ಲಿ ಮಾನವ ಸರಪಳಿ ನಿರ್ಮಿಸಿ ಯೋಗಿ ಆದಿತ್ಯನಾಥ್ ಪ್ರತಿಕೃತಿ ದಹಿಸಿದರು. ನಂತರ ತಾಲ್ಲೂಕು ಕಚೇರಿ ಮುಂದೆ ಜಮಾಯಿಸಿದರು.

ನರೇಂದ್ರ ಮೋದಿ ಅವರು ಹೆಣ್ಣುಮಕ್ಕಳ ಹಿತ ಕಾಪಾಡುವ ಬಗ್ಗೆ ಭಾಷಣ ಮಾಡುತ್ತಾರೆ. ಆದರೆ ಅವರದೇ ಪಕ್ಷ ಆಡಳಿತದಲ್ಲಿ ಇರುವ ಉತ್ತರಪ್ರದೇಶದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಲೇ ಇದೆ. ಪ್ರಧಾನಿ ಅವರಿಗೆ ಮಹಿಳೆಯರ ಮೇಲೆ ಕಾಳಜಿ ಮತ್ತು ಗೌರವ ಇದ್ದರೆ ಉತ್ತರಪ್ರದೇಶ ಸರ್ಕಾರವನ್ನು ಕೂಡಲೇ ವಜಾ ಮಾಡಬೇಕು ಎಂದು ಆಗ್ರಹಿಸಿದರು.

ADVERTISEMENT

ಮೃತಪಟ್ಟ ಯುವತಿಯ ಮೃತದೇಹವನ್ನು ಕುಟುಂಬದವರಿಗೂ ನೀಡದೆ ಅಲ್ಲಿನ ಪೊಲೀಸರು ದರ್ಪ ತೋರಿ ರಾತ್ರೋರಾತ್ರಿ ಸುಟ್ಟುಹಾಕಿರುವುದು ಅಕ್ಷಮ್ಯ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು. ಶಿರಸ್ತೇದಾರ್‌ ಚೆನ್ನವೀರಬಸವಪ್ಪ ಅವರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ತಾ.ಪಂ.ಪ್ರಭಾರ ಅಧ್ಯಕ್ಷ ಸಿ.ಮಾಧು, ಪುರಸಭೆ ಮಾಜಿ ಸದಸ್ಯರಾದ ಮಹೇಶ್, ಗಂಗಾಧರ್, ಮೆಹಬೂಬ್‌ಪಾಷಾ, ಜಯರಾಜ್, ಸಿಐಟಿಯುನ ಜಿ.ರಾಮಕೃಷ್ಣ, ಮುಖಂಡರಾದ ಎನ್.ಎಲ್.ಭರತ್ ರಾಜ್ ಇದ್ದರು.

ಬಿಎಸ್ಪಿ ತಾಲ್ಲೂಕು ಘಟಕದ ವತಿಯಿಂದ ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಕುಮಾರ್, ಶಿವಮೂರ್ತಿ, ತಮ್ಮಯ್ಯ, ವೀರಭದ್ರಯ್ಯ, ಸತೀಶ್ ಭಾಗವಹಿಸಿದ್ದರು.
ನಾಗಮಂಗಲ ವರದಿ: ಉತ್ತರ ಪ್ರದೇಶದಲ್ಲಿ ನಡೆದಿರುವ ಯುವತಿಯ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಖಂಡಿಸಿ ತಾಲ್ಲೂಕು ಬಹುಜನ ಸಮಾಜ ಪಕ್ಷದ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿದರು. ಕೇಂದ್ರ ಸರ್ಕಾರ ಮತ್ತು ಯು.ಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಬಿ.ಎಸ್ಪಿ ಜಿಲ್ಲಾ ಕಾರ್ಯದರ್ಶಿ ಮಹದೇವ್ ಮಾತನಾಡಿ, ಉತ್ತರ ಪ್ರದೇಶದಲ್ಲಿ ಅತ್ಯಾಚಾರ ಮತ್ತು ದೌರ್ಜನ್ಯ ಪ್ರಕರಣಗಳು ಪ್ರತಿನಿತ್ಯ ನಡೆಯುತ್ತಿವೆ ಎಂದರು.

ಬಿ.ಎಸ್.ಪಿ ತಾಲ್ಲೂಕು ಅಧ್ಯಕ್ಷ ಚಂದ್ರಶೇಖರ್, ಜಿಲ್ಲಾ ಖಜಾಂಚಿ ಲೋಕೇಶ್, ಕಾರ್ಯಕರ್ತರಾದ ರಮೇಶ್, ಬಾಬು, ವರದರಾಜು, ಆನಂದ್, ಕಾಂತರಾಜು ಇದ್ದರು.

ಶ್ರೀರಂಗಪಟ್ಟಣ ವರದಿ: ಉತ್ತರಪ್ರದೇಶದಲ್ಲಿ ಮೇಲಿಂದ ಮೇಲೆ ಮಹಿಳೆಯರ ಅಪಹರಣ, ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳು ನಡೆಯುತ್ತಿದ್ದು, ಯೋಗಿ ಆದಿತ್ಯನಾಥ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿ ಬಿಎಸ್ಪಿ ಕಾರ್ಯಕರ್ತರು ಶನಿವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಯೋಗಿ ಆದಿತ್ಯನಾಥ ಸರ್ಕಾರ ಜನರನ್ನು ರಕ್ಷಿಸುವಲ್ಲಿ ವಿಫಲವಾಗಿದೆ. ಯುವತಿಯ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣವನ್ನು ಮುಚ್ಚಿ ಹಾಕಿದೆ ಎಂದು ಬಿಎಸ್ಪಿ ತಾಲ್ಲೂಕು ಘಟಕದ ಅಧ್ಯಕ್ಷ ವಿ.ಟಿ. ಗೋವಿಂದರಾಜು ಆಗ್ರಹಿಸಿದರು.

ಉತ್ತರಪ್ರದೇಶದಲ್ಲಿ ಆದಿತ್ಯನಾಥ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ನಡೆದ ಎಲ್ಲ ಅಪರಾಧ ಕೃತ್ಯಗಳ ಬಗ್ಗೆ ಕೂಲಂಕಷ ತನಿಖೆ ನಡೆಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಪಕ್ಷದ ಉಸ್ತುವಾರಿ ವಿ. ಸುರೇಶ್‌ ಒತ್ತಾಯಿಸಿದರು. ಉಪ ತಹಶೀಲ್ದಾರ್‌ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು. ರವಿಕುಮಾರ್‌, ವೀರಭದ್ರಯ್ಯ, ಚುಂಚಯ್ಯ, ಮಂಜುನಾಥ್‌, ಕಿರಣಕುಮಾರ್‌, ಶಿವಲಿಂಗಯ್ಯ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.