ADVERTISEMENT

ಪಾಂಡವಪುರ | ಕಾರ್ಮಿಕರಿಗೆ ಕ್ವಾರಂಟೈನ್‌, ಕಟಾವಾಗದ ಭತ್ತ

ಯಂತ್ರಗಳೊಂದಿಗೆ ತಮಿಳುನಾಡಿನಿಂದ ಬಂದಿದ್ದ 41 ಕಾರ್ಮಿಕರು: ನೆಲಕ್ಕೆ ಬೀಳುತ್ತಿರುವ ತೆನೆ

ಹಾರೋಹಳ್ಳಿ ಪ್ರಕಾಶ್‌
Published 17 ಮೇ 2020, 20:00 IST
Last Updated 17 ಮೇ 2020, 20:00 IST
ಪಾಂಡವಪುರ ತಾಲ್ಲೂಕಿನ ಅರಳಕುಪ್ಪೆ ಗ್ರಾಮ ಬಳಿ ಕಟಾವಿಗೆ ಬಂದಿರುವ ಭತ್ತದ ಬಯಲು
ಪಾಂಡವಪುರ ತಾಲ್ಲೂಕಿನ ಅರಳಕುಪ್ಪೆ ಗ್ರಾಮ ಬಳಿ ಕಟಾವಿಗೆ ಬಂದಿರುವ ಭತ್ತದ ಬಯಲು   

ಪಾಂಡವಪುರ: ಭತ್ತ ಕಟಾವು ಮಾಡಲು ಯಂತ್ರಗಳೊಂದಿಗೆ ತಮಿಳುನಾಡಿನಿಂದ ಬಂದಿದ್ದ 41 ಮಂದಿ ಕಾರ್ಮಿಕರನ್ನು ಕ್ವಾರಂಟೈನ್‌ ಮಾಡಲಾಗಿದೆ. ಹೀಗಾಗಿ ತಾಲ್ಲೂಕಿನಲ್ಲಿ ಕಟಾವಿಗೆ ಬಂದಿರುವ ಭತ್ತವನ್ನು ಕಟಾವು ಮಾಡುವ ಕಾರ್ಮಿಕರೇ ಇಲ್ಲವಾಗಿದ್ದಾರೆ.

ತಾಲ್ಲೂಕಿನಲ್ಲಿ ಈಗ ಬೇಸಿಗೆ ಬೆಳೆಯ ಸುಮಾರು 1.5 ಸಾವಿರ ಹೆಕ್ಟೇರ್‌ ‍ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದೆ. ಶೇ 80ರಷ್ಟು ಭತ್ತ ಕಟಾವಿಗೆ ಬಂದಿದೆ. ರೈತರು ಆಧುನಿಕ ಕೃಷಿ ಅಳವಡಿಕೊಂಡ ನಂತರ ಭತ್ತ ಕಟಾವು ಮಾಡಲು ಯಂತ್ರಗಳನ್ನು ಬಳಕೆ ಮಾಡುತ್ತಿರುವುದು ಹಲವಾರು ವರ್ಷಗಳಿಂದಲೂ ಚಾಲ್ತಿಯಲ್ಲಿದೆ.

ಮುಂಗಾರು ಮತ್ತು ಬೇಸಿಗೆ ಬೆಳೆ ಭತ್ತವನ್ನು ಕಟಾವು ಮಾಡಲು ತಮಿಳುನಾಡು ಮೂಲದ ಕಾರ್ಮಿಕರು ಪ್ರತಿ ವರ್ಷ ಯಂತ್ರಗಳೊಂದಿಗೆ ಬರುತ್ತಾರೆ. ಕೆಆರ್‌ಎಸ್ ಅಣೆಕಟ್ಟೆಯ ಆಸುಪಾಸಿನಲ್ಲಿರುವ ನಾರ್ತ್‌ ಬ್ಯಾಂಕ್‌, ಚಿಕ್ಕಾಯರಹಳ್ಳಿ, ಕಟ್ಟೇರಿ, ಸೀತಾಪುರ, ಅರಳಕುಪ್ಪೆ, ಹರವು, ಶ್ಯಾದನಹಳ್ಳಿ, ಕ್ಯಾತನಹಳ್ಳಿ, ಎಣ್ಣೆಹೊಳೆಕೊಪ್ಪಲು, ಚಲುವರಸಿಕೊಪ್ಪಲು, ಬೇಟೆ ತಿಮ್ಮನಕೊಪ್ಪಲು ಸೇರಿದಂತೆ ಹಲವು ಹಳ್ಳಿಗಳ ರೈತರ ಗದ್ದೆಗಳಲ್ಲಿ ಈಗಾಗಲೇ ಭತ್ತ ಕಟಾವಿಗೆ ಬಂದು
ನಿಂತಿದೆ.

ADVERTISEMENT

ಕಳೆದ 1 ವಾರಗಳ ಹಿಂದೆ ತಮಿಳುನಾಡಿನಿಂದ ಸುಮಾರು 15–20 ಯಂತ್ರಗಳೊಂದಿಗೆ ಸುಮಾರು 41 ಮಂದಿ ಕೆಲಸಗಾರರು ಭತ್ತ ಕಟಾವು ಮಾಡಲು ಸಿದ್ಧತೆ ನಡೆಸಿದ್ದರು. ತಮಿಳುನಾಡಿನಿಂದ ಬಂದಿರುವ ಈ ಕೆಲಸಗಾರರ ವಿಷಯ ತಿಳಿದ ತಾಲ್ಲೂಕು ಆಡಳಿತವು ಕೊರೊನಾ ವೈರಸ್‌ ಸೊಂಕಿನ ಪರೀಕ್ಷೆಗಾಗಿ ಕಟ್ಟೇರಿ ಸರ್ಕಾರಿ ವಸತಿ ಶಾಲೆಯಲ್ಲಿ ಕ್ವಾರಂಟೈನ್‌ ಮಾಡಿದೆ.

ತಮಿಳುನಾಡಿನ 41 ಮಂದಿ ಕೆಲಸಗಾರರನ್ನು 14 ದಿನ ಕ್ವಾರಂಟೈನ್‌ನಲ್ಲಿ ಇರಬೇಕಾದ ಅನಿವಾರ್ಯತೆ ಇದೆ. ಅಷ್ಟು ಹೊತ್ತಿಗೆ ಭತ್ತ ಕಟಾವು ಇಲ್ಲದೇ ಹಾನಿಯಾಗುವ ಅಪಾಯವಿದೆ. ಕಟಾವಿಗೆ ಬಂದಿರುವ ಭತ್ತದ ತೆನೆಗಳು ಬಾಗುತ್ತಿವೆ. ಸ್ಥಳೀಯವಾಗಿ ಭತ್ತ ಕಟಾವು ಮಾಡುವ ಕೆಲಸಗಾರರು ದೊರೆಯುವುದು ಕಷ್ಟವಾಗಿದೆ. ತಮಿಳುನಾಡಿನ ಭತ್ತ ಕಟಾವಿನ ಕೆಲಸಗಾರರು 14 ದಿನಗಳು ಕ್ವಾರಂಟೈನ್‌ ಮುಗಿಸುವಷ್ಟರಲ್ಲಿ ಬಾಗುತ್ತಿರುವ ಭತ್ತದ ತೆನೆ ಉದುರಿಹೋಗುವ ಸಾಧ್ಯತೆ ಇದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದೆ ಹೋದಿತು ಎಂಬ ಆಂತಕ ರೈತರಲ್ಲಿದೆ.

‘ಒಂದೆರಡು ಯಂತ್ರಗಳಲ್ಲಿ ಮಾತ್ರ ಭತ್ತ ಕಟಾವು ಮಾಡಲಾಗುತ್ತಿದೆ. ಆದರೆ ಇದರಿಂದ ಎಲ್ಲ ಭತ್ತ ಕಟಾವು ಅಸಾಧ್ಯ. ಭತ್ತ ಕಟಾವಿಗೆ ಯಂತ್ರಗಳೊಂದಿಗೆ ಬಂದಿರುವ ತಮಿಳುನಾಡಿನ ಕೆಲಸಗಾರರಿಗೆ ಕೂಡಲೇ ಕೋವಿಡ್‌ ಪರೀಕ್ಷೆ ಮುಗಿಸಿ ಬಿಡುಗಡೆ ಮಾಡಬೇಕು. ಪರೀಕ್ಷೆ ವಿಳಂಬವಾದರೆ ನಮ್ಮ ಗದ್ದೆಯ ಭತ್ತ ನಮ್ಮ ಕೈಗೆ ಸಿಗುವುದಿಲ್ಲ’ ಎಂದು ಈ ಭಾಗದ ರೈತರಾದ ಅರಳಕುಪ್ಪೆ ಮಹೇಂದ್ರ, ಎಣ್ಣೆಹೊಳೆಕೊಪ್ಪಲು ಮಂಜು, ಕ್ಯಾತನಹಳ್ಳಿ ಉಮೇಶ್ ಒತ್ತಾಯಿಸಿದರು.

‘ಭತ್ತ ಕಟಾವು ಮಾಡಲು‌ ಯಂತ್ರಗಳೊಂದಿಗೆ ಕೆ.ಆರ್.ನಗರದಿಂದ ಕೆಲಸಗಾರರು ಬಂದಿದ್ದಾರೆ. ಆದರೆ ಇದು ಸಾಲದು, ತಮಿಳುನಾಡಿನ ಕೆಲಸಗಾರರನ್ನು ಸ್ವಲ್ಪ ಬೇಗನೆ ಕೊರೊನಾ ಪರೀಕ್ಷೆಗೆ ಒಳಪಡಿಸಬೇಕಾಗಿದೆ. ನೆಗೆಟಿವ್‌ ಬಂದ ಕೆಲಸಗಾರರನ್ನು ಭತ್ತ ಕಟಾವು ಮಾಡಲು ಅವಕಾಶ ನೀಡಬೇಕು ಎಂದು ರೈತರು ಒತ್ತಾಯ ಮಾಡುತ್ತಿದ್ದಾರೆ. ಈ ಸಂಬಂಧ ತಾಲ್ಲೂಕು ಆಡಳಿತದ ಗಮನಕ್ಕೆ ತರಲಾಗುವುದು’ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಪ್ರಿಯದರ್ಶಿನಿ ಹೇಳಿದರು.

*
ಹೊರರಾಜ್ಯದ ಕಾರ್ಮಿಕರನ್ನು ಕ್ವಾರಂಟೈನ್‌ ಮಾಡುವುದು ಅನೀವಾರ್ಯ. ರೈತರ ಭತ್ತ ಕಟಾವು ಮಾಡುವುದು ಕೂಡ ಅಗತ್ಯವಿದೆ. ಈ ವಿಚಾರವನ್ನು ಜಿಲ್ಲಾಡಳಿತದ ಕ್ರಮಕ್ಕೆ ಬಿಡಲಾಗಿದೆ.
-ಪ್ರಮೋದ್ ಎಲ್ ಪಾಟೀಲ್, ತಹಶೀಲ್ದಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.