
ಶ್ರೀರಂಗಪಟ್ಟಣ ತಾಲ್ಲೂಕಿನ ಕರಿಘಟ್ಟದ ವೆಂಕಟರಮಣಸ್ವಾಮಿ ದೇವಾಲಯಕ್ಕೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಭೇಟಿ ನೀಡಿ, ದೇವರ ದರ್ಶನ ಪಡೆದರು
ಮಂಡ್ಯ: ‘ರಾಜ್ಯದಲ್ಲಿ ದಿನನಿತ್ಯ ಪ್ರತಿಭಟನೆಗಳು, ಹಗರಣಗಳು, ಕುರ್ಚಿ ಕಾಳಗ, ಆಡಳಿತ ಪಕ್ಷದ ಶಾಸಕರ ಬ್ರೇಕ್‌ಫಾಸ್ಟ್ ಹಾಗೂ ಡಿನ್ನರ್ ಮೀಟಿಂಗ್‌ಗಳು ಸೇರಿ ಒಟ್ಟು ಕಾಂಗ್ರೆಸ್ ಸರ್ಕಾರವು ಸಾವಿರ ದಿನಗಳನ್ನು ಪೂರೈಸಿದೆ. ಗ್ಯಾರಂಟಿಯಿಂದ ದಿವಾಳಿಯಾಗಿರುವ ಈ ಸರ್ಕಾರವು ಕರ್ನಾಟಕವನ್ನು ‘ಪಾಪರ್’ ಆಗಿ ಮಾಡಲು ತೀರ್ಮಾನಿಸಿದೆ’ ಎಂದು ಪ್ರತಿಪಕ್ಷದ ನಾಯಕ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಕೇವಲ ಎರಡು ಮುಕ್ಕಾಲು ವರ್ಷಗಳ ಅವಧಿಯಲ್ಲಿಯೇ ₹3.15 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಇದೇ ರೀತಿ ಐದು ವರ್ಷಗಳಲ್ಲಿ ₹6 ಲಕ್ಷ ಕೋಟಿ ಸಾಲ ಮಾಡುವುದರ ಜತೆಗೆ ಪ್ರತಿ ಸಾರ್ವಜನಿಕರ ತಲೆ ಮೇಲೆ ತಲಾ ₹1 ಲಕ್ಷ ಸಾಲದ ಹೊರೆ ಹೊರೆಸುತ್ತಾರೆ’ ಎಂದು ದೂರಿದರು.
ಶೇ 40ರಷ್ಟು ಭ್ರಷ್ಟಾಚಾರವೆಂದು ನಮ್ಮ ಸರ್ಕಾರದ ಮೇಲೆ ಆರೋಪ ಮಾಡಿದ್ದರು. ಆದರೆ ಅದ್ಯಾವುದೂ ನ್ಯಾಯಾಲಯದಲ್ಲಿ ಸಾಬೀತಾಗಲಿಲ್ಲ. ಆದರೀಗ ಕಾಂಗ್ರೆಸ್ ಸರ್ಕಾರ ಮೂರು ಪಟ್ಟು ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಗುತ್ತಿಗೆದಾರರೇ ದೂರಿದ್ದಾರೆ ಎಂದು ಹೇಳಿದರು.
ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧ ಸಿಗುತ್ತಿಲ್ಲ, ಸರ್ಕಾರ ಟೆಂಡರ್ ಕರೆಯುತ್ತೇವೆ ಎಂದು ಹೇಳುತ್ತಿದೆ. ಆದರೆ ಕಾರ್ಯಗತವಾಗಿಲ್ಲ, ಸುಮಾರು 150 ಔಷಗಳು ಮಾತ್ರ ಸಿಗುತ್ತಿವೆ. ಯಾವ ಆಸ್ಪತ್ರೆಗೆ ಹೋದರೂ ಖಾಸಗಿ ಮೆಡಿಕಲ್‌ಗಳಿಗೆ ಚೀಟಿ ಬರೆದು ಕೊಡಲಾಗುತ್ತಿದೆ ಎಂದು ಆರೋಪಿಸಿದರು.
ಮಾ.12ರಂದು ವೈದ್ಯರು ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಇದೇನಾದರೂ ಆದರೆ, ಶಸ್ತ್ರಚಿಕಿತ್ಸೆಗಳನ್ನು ಮುಂದೂಡಬೇಕಾಗುತ್ತದೆ. ರೋಗಿಗಳು ಪರದಾಡುತ್ತಾರೆ. ಔಷಧ ಜೊತೆಗೆ ವೈದ್ಯರು ಇಲ್ಲದಿರುವ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ಆರೋಗ್ಯ ಇಲಾಖೆಯು ಅನಾರೋಗ್ಯ ಇಲಾಖೆಯಾಗಿದೆ ಎಂದು ದೂರಿದರು.
‘ಮುಖ್ಯಮಂತ್ರಿ ಸೀಟು ಸೇರಿದಂತೆ ಮಂತ್ರಿಗಳ ಸೀಟು ಅಲುಗಾಡುತ್ತಿದೆ. ಈಗ ಐದು ರಾಜ್ಯಗಳ ಚುನಾವಣೆ ನಡೆಯುತ್ತಿದೆಯಲ್ಲ, ಅದಕ್ಕೆ ಹಣ ಒದಗಿಸೋಕೆ ಡಿ.ಕೆ. ಶಿವಕುಮಾರ್ ಅವರು ಇದರಲ್ಲಿ ಎಕ್ಸ್‌ಪರ್ಟ್ ಇದ್ದಾರೆ. ಸಚಿವ ಸಂಪುಟ ಪುನರ್ ರಚನೆಯಾದರೆ, ಮಂತ್ರಿ ಸ್ಥಾನಕ್ಕೆ ರೇಟ್ ಫಿಕ್ಸ್ ಆಗುತ್ತದೆ. ತಮಿಳುನಾಡು, ಪಶ್ಚಿಮ ಬಂಗಾಳ, ಅಸ್ಸಾಂ, ಕೇರಳಕ್ಕೆ ಹಣ ಕಳುಹಿಸಲು ಜಾರ್ಜ್, ದಿನೇಶ್ ಗುಂಡೂರಾವ್ ಅವರನ್ನೇ ಉಸ್ತುವಾರಿ ಹಾಕಲಾಗಿದೆ. ಏಕೆಂದರೆ ಹಣ ಕೊಡಲು ದೇಶದಲ್ಲಿ ಉಳಿದಿರುವುದೊಂದೇ ಕರ್ನಾಟಕ. ಇನ್ನುಳಿದ ರಾಜ್ಯಗಳೆಲ್ಲಾ ದಿವಾಳಿ ಆಗಿವೆ’ ಎಂದು ಅಶೋಕ್ ಆರೋಪಿಸಿದರು.
‘ಬಜೆಟ್ ಅಧಿವೇಶನದಲ್ಲಿ ಕಾಂಗ್ರೆಸ್ ಮಾಡಿರುವ ತಪ್ಪುಗಳ ಬಗ್ಗೆ ಚರ್ಚೆಯಾಗಲಿದೆ. ಬಿಜೆಪಿ- ಜೆಡಿಎಸ್ ಜಂಟಿಯಾಗಿ ಹೋರಾಟ ಮಾಡಲಿದೆ. ವಿದ್ಯಾರ್ಥಿಗಳ ಹೋರಾಟಕ್ಕೆ ಹೆದರಿ 56 ಸಾವಿರ ನೇಮಕಾತಿ ಮಾಡಲು ತೀರ್ಮಾನಿಸಲಾಗಿದೆ. ಆದರೆ ಬಿಜೆಪಿಯಿಂದ 2 ಲಕ್ಷ ಹುದ್ದೆಗಳ ನೇಮಕಾತಿಗೆ ಆಗ್ರಹಿಸಲಾಗಿತ್ತು’ ಎಂದು ಅಶೋಕ್ ಹೇಳಿದರು.
‘ಮುಖ್ಯಮಂತ್ರಿ ಸಿದ್ದರಾಮಯ್ಯ ಕುರ್ಚಿ ಬಿಟ್ಟು ಕೊಡುವ ರಾಮಯ್ಯ ಅಲ್ಲ. ಎರಡೂವರೆ ವರ್ಷ ಒಪ್ಪಂದ ಆಗಿದೆ ಎಂದು ಡಿಸಿಎಂ ಡಿಕೆಶಿ ಹೇಳುತ್ತಾರೆ. ಆದರೆ ಈ ಬಗ್ಗೆ ಸಿದ್ದರಾಮಯ್ಯ ಮಾತ್ರ ಬಾಯಿ ಬಿಡಲ್ಲ. ರಾಜ್ಯ ಸರ್ಕಾರ ಈಗಾಗಲೇ ಸತ್ತು ಹೋಗಿದೆ. ಸತ್ತಿರುವ ಸರ್ಕಾರದ ಹೆಣ ಹೊರಲು ಡಿಕೆಶಿ ಮುಂದೆ ಬರುತ್ತೇನೆ ಎನ್ನುತ್ತಿದ್ದಾರೆ. ಆದರೆ ಸಿದ್ದರಾಮಯ್ಯ ಬಿಡುತ್ತಿಲ್ಲ. ಒಟ್ಟಾರೆ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌ಗೆ ಪಂಗನಾಮ ಹಾಕುವುದು ಗ್ಯಾರಂಟಿ’ ಎಂದು ಆರ್.ಅಶೋಕ್ ವ್ಯಂಗ್ಯವಾಡಿದರು.
‘ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿ ವಿಚಾರ ಹೈಕಮಾಂಡ್ ತೀರ್ಮಾನ ಮಾಡಲಿದೆ. ರಾಜ್ಯದ ಪರಿಸ್ಥಿತಿ ಬಗ್ಗೆ ಈಗಾಗಲೇ ಉಸ್ತುವಾರಿಗೆ ನಮ್ಮ ಅಭಿಪ್ರಾಯಗಳನ್ನು ಹೇಳಿದ್ದೇವೆ. ಒಂದೊಂದು ಪ್ರಾಂತ್ಯದಲ್ಲಿ ಒಂದೊಂದು ವಿಚಾರ ಇದೆ. ದೇವೇಗೌಡರೇ ಮೊದಲು ಮೈತ್ರಿ ಬೇಡ ಎಂದಿದ್ದರು. ಈಗ ಮೈತ್ರಿ ಬಗ್ಗೆ ಮಾತನಾಡಿದ್ದಾರೆ. ಹೊಂದಾಣಿಕೆ ಬಗ್ಗೆ ಆಮೇಲೆ ನೋಡೋಣ. ಆದರೆ, ಸಿದ್ದರಾಮಯ್ಯ ಅಧಿಕಾರ ಉಳಿದುಕೊಳ್ಳಲು ಸ್ಥಳೀಯ ಚುನಾವಣೆ ಘೋಷಣೆ ಮಾಡಲಿ’ ಎಂದು ಆರ್.ಅಶೋಕ್ ತಿರುಗೇಟು ನೀಡಿದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಇಂದ್ರೇಶ್, ಮುಖಂಡರಾದ ಇಂಡುವಾಳು ಸಚ್ಚಿದಾನಂದ, ಜಿಲ್ಲಾ ವಕ್ತಾರ ಸಿ.ಟಿ. ಮಂಜುನಾಥ್, ವಸಂತ್, ನಾಗಾನಂದ್, ಅಶೋಕ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.