ADVERTISEMENT

ನಾಗಮಂಗಲ: ರವಿಕೃಷ್ಣಾರೆಡ್ಡಿ ಸೇರಿ 7 ಮಂದಿ ಬಂಧನ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2021, 15:42 IST
Last Updated 10 ಮಾರ್ಚ್ 2021, 15:42 IST

ನಾಗಮಂಗಲ (ಮಂಡ್ಯ): ಅಕ್ರಮವಾಗಿ ಮಿನಿವಿಧಾನಸೌಧ ಪ್ರವೇಶಿಸಿ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಅನುಚಿತ ವರ್ತನೆ ತೋರಿದ್ದಾರೆ ಎಂಬ ಆರೋಪದ ಮೇಲೆ ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್‌) ರಾಜ್ಯ ಘಟಕದ ಅಧ್ಯಕ್ಷ ರವಿಕೃಷ್ಣಾರೆಡ್ಡಿ ಸೇರಿ 7 ಮಂದಿ ಕಾರ್ಯಕರ್ತರನ್ನು ಪಟ್ಟಣ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ರವಿಕೃಷ್ಣರೆಡ್ಡಿ ಹಾಗೂ 20ಕ್ಕೂ ಹೆಚ್ಚು ಸದಸ್ಯರು ಮಿನಿವಿಧಾನಸೌಧದ ಕಂದಾಯ ವಿಭಾಗಕ್ಕೆ ನುಗ್ಗಿ ಅಧಿಕಾರಿಗಳನ್ನು ನಿಂದಿಸಿದ್ದಾರೆ, ಮಹಿಳಾ ಸಿಬ್ಬಂದಿ ನಾಮಫಲಕ ಹಾಕಿಲ್ಲ ಎಂದು ಪ್ರಶ್ನಿಸಿ ಅನುಚಿತ ವರ್ತನೆ ತೋರಿದ್ದಾರೆ ಎಂದು ಆರೋಪಿಸಿ ಕಂದಾಯ ಇಲಾಖೆ ನೌಕರರು ಪೊಲೀಸ್‌ ಠಾಣೆಗೆ ದೂರು ಸಲ್ಲಿಸಿದ್ದರು. ದೂರಿನ ಆಧಾರದ ಮೇಲೆ ಪೊಲೀಸರು ರವಿಕೃಷ್ಣರೆಡ್ಡಿ ಹಾಗೂ ಇತರ ಆರು ಮಂದಿಯನ್ನು ಬಂಧಿಸಿ, ಎಫ್‌ಐಆರ್‌ ದಾಖಲಿಸಿದ್ದಾರೆ.

ಬುಧವಾರ ಬೆಳಿಗ್ಗೆ 11 ಗಂಟೆ ಸಮಯದಲ್ಲಿ‌ ಕೆಆರ್‌ಎಸ್ ಕಾರ್ಯಕರ್ತರು ಕಂದಾಯ ವಿಭಾಗಕ್ಕೆ ತೆರಳಿ ಸಿಬ್ಬಂದಿಯ ಕಾರ್ಯವೈಖರಿಯನ್ನು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಅಧಿಕಾರಿಗಳು ಹಾಗೂ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಸ್ಥಳದಲ್ಲಿ ಬಿಗುವಿನ ಪರಿಸ್ಥಿತಿ ಉಂಟಾದ ಕಾರಣ ಪೊಲೀಸರು ಮಧ್ಯಪ್ರವೇಶಿಸಿ ಸನ್ನಿವೇಶ ತಿಳಿಗೊಳಿಸಿದರು.

ADVERTISEMENT

ನಂತರ ಕಚೇರಿ ಸಿಬ್ಬಂದಿ ಪೊಲೀಸ್‌ ಠಾಣೆಗೆ ದೂರು ಸಲ್ಲಿಸಿದರು. ಬಂಧಿತ ಕಾರ್ಯಕರ್ತರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ನ್ಯಾಯಾಲಕ್ಕೆ ಹಾಜರುಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.