ADVERTISEMENT

ಕ್ವಾರಂಟೈನ್‌ ವಾಸಿಗಳು ಬಿಡುಗಡೆ

14 ದಿನ ಮುಗಿಸಿದವರಿಗೆ ಜಿಲ್ಲಾಧಿಕಾರಿ ವೈದ್ಯಕೀಯ ಪ್ರಮಾಣ ಪತ್ರ ವಿತರಣೆ

​ಪ್ರಜಾವಾಣಿ ವಾರ್ತೆ
Published 28 ಮೇ 2020, 14:36 IST
Last Updated 28 ಮೇ 2020, 14:36 IST
ಗವಿಮಠದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ  ಕ್ವಾರಂಟೈನ್ ಆಗಿದ್ದ ಮುಂಬೈ ವಸಲಸಿಗರಿಗೆ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ವೈದ್ಯಕೀಯ ಪ್ರಮಾಣಪತ್ರ ನೀಡಿ ಬೀಳ್ಕೊಟ್ಟರು
ಗವಿಮಠದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ  ಕ್ವಾರಂಟೈನ್ ಆಗಿದ್ದ ಮುಂಬೈ ವಸಲಸಿಗರಿಗೆ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ವೈದ್ಯಕೀಯ ಪ್ರಮಾಣಪತ್ರ ನೀಡಿ ಬೀಳ್ಕೊಟ್ಟರು   

ಕೆ.ಆರ್.ಪೇಟೆ: ಮುಂಬೈನಿಂದ ಬಂದು ವಿವಿಧ ವಸತಿ ನಿಲಯಗಳಲ್ಲಿ ಕ್ವಾರಂಟೈನ್‌ ಆಗಿದ್ದವರಿಗೆ ಗುರುವಾರ ಬಿಡುಗಡೆ ಭಾಗ್ಯ ದೊರೆಯಿತು. ಸ್ವತಃ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಅವರೇ ಸ್ಥಳಕ್ಕೆ ತೆರಳಿ ಬಿಡುಗಡೆಯಾದವರಿಗೆ ವೈದ್ಯಕೀಯ ಪ್ರಮಾಣ ಪತ್ರ ವಿತರಣೆ ಮಾಡಿದರು.

ಗವಿಮಠದ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಶೆಟ್ಟನಾಯಕನಹಳ್ಳಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ. ಮಾರ್ಗೋನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳಲ್ಲಿ ಕ್ವಾರಂಟೈನ್‌ ಆಗಿದ್ದ 107 ಮಂದಿ 14 ದಿನಗಳ ಕ್ವಾರಂಟೈನ್‌ ಅವಧಿ ಮುಗಿಸಿ ಮನೆಗೆ ತೆರಳಿದರು.

ಮುಂಬೈನಿಂದ ಬಂದ ಅವರನ್ನು ಚೆಕ್‌ಪೋಸ್ಟ್‌ನಲ್ಲಿಯೇ ತಡೆದು ಕ್ವಾರಂಟೈನ್‌ ಮಾಡಲಾಗಿತ್ತು. ತಕ್ಷಣವೇ ಅವರ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ನೆಗೆಟಿವ್‌ ವರದಿ ಬಂದರೂ ಮುಂಜಾಗೃತೆ ದೃಷ್ಟಿಯಿಂದ 14 ದಿನಗಳ ಕಾಲ ಕ್ವಾರಂಟೈನ್‌ ಮಾಡಲಾಗಿತ್ತು. 2ನೇ ಬಾರಿ ಕೋವಿಡ್ ಪರೀಕ್ಷೆ ನಡೆಸಿ ನೆಗೆಟಿವ್‌ ಬಂದವರಿಗೆ ಪ್ರಮಾಣ ಪತ್ರ ನೀಡಿ ಮನೆಗೆ ಕಳುಹಿಸಲಾಯಿತು.

ADVERTISEMENT

ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಮಾತನಾಡಿ ‘ ಮುಂದೆ ಪ್ರತಿಯೊಬ್ಬರು ಕೊರೊನಾ ಸೋಂಕಿನೊಂದಿಗೆ ಬದುಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಆತ್ಮವಿಶ್ವಾಸದಿಂದಲೇ ಈ ರೋಗವನ್ನು ಗೆಲ್ಲಬೇಕಿದೆ. ಬಿಡುಗಡೆಗೊಂಡು ಮನೆಗೆ ಹೋಗುತ್ತಿರುವವರು ತಮ್ಮ ತಮ್ಮ ಮನೆಗಳಲ್ಲಿಯೇ ಮತ್ತೆ 14 ದಿನಗಳ ಕಾಲ ಹೋಂ ಕ್ವಾರಂಟೈನ್ ನಲ್ಲಿರಬೇಕು’ ಎಂದು ಸೂಚನೆ ನೀಡಿದರು.

‘ಗ್ರಾಮಕ್ಕೆ ತೆರಳಿದ ನಂತರ ಯಾರೂ ಅನವಶ್ಯಕವಾಗಿ ಓಡಾಡಬಾರದು. ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡಿರಬೇಕು. ಪೌಷ್ಟಿಕಾಂಶದ ಆಹಾರ ಸೇವಿನೆ ಮಾಡಬೇಕು. ಗ್ರಾಮದಲ್ಲಿ ವಾಸ ಮಾಡುವ ಇತರರಿಗೆ ಯಾವುದೇ ರೀತಿಯಿಂದಲೂ ಭಯ ಮೂಡಿಸಬಾರದು. ಕೊರೊನಾ ಸೋಂಕಿನ ವಿರುದ್ಧ ಹೋರಾಟಕ್ಕೆ ಎಲ್ಲರೂ ಸಹಕಾರ ನೀಡಬೇಕು’ ಎಂದು ತಿಳಿಸಿದರು.

‘ಕೋವಿಡ್‌ ಆಸ್ಪತ್ರೆಯಲ್ಲಿರುವ ಎಲ್ಲರೂ ಚಿಕಿತ್ಸೆಗೆ ಸ್ಪಂದನೆ ನೀಡುತ್ತಿದ್ದಾರೆ. ವಲಸಿಗರಿಗೆ ಅತ್ಯಂತ ವೇಗವಾಗಿ ಪರೀಕ್ಷೆ ನಡೆಸಿದ ಕಾರಣ ಮಂಡ್ಯ ಜಿಲ್ಲೆಯಲ್ಲಿ ರೋಗಿಗಳ ಸಂಖ್ಯೆಯೂ ವೇಗವಾಗಿ ಏರಿಕೆಯಾಯಿತು. ಆದರೆ ಕಳೆದ ಮೂರು ದಿನಗಳಿಂದ ಸೋಂಕಿತರ ಸಂಖ್ಯೆ ಕಡಿಮೆಯಾಗಿದೆ’ ಎಂದು ಹೇಳಿದರು.

‘ಮೇ 31ರ ನಂತರ ಲಾಕ್‌ಡೌನ್‌ ಮತ್ತಷ್ಟು ಸಡಿಲಿಕೆಯಾದರೆ ಇನ್ನಷ್ಟು ಎಚ್ಚರಿಕೆಯಿಂದ ಇರಬೇಕು. ಕೇಂದ್ರ ಸರ್ಕಾರ ಕೈಗೊಳ್ಳುವ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಿ ನಡೆಯಬೇಕು. ಈಗ ಮುಂಬೈನಿಂದ ಬರುವವರಿಗೆ ಅವಕಾಶ ಇಲ್ಲ. ಮುಂದೆ ಅವಕಾಶ ನೀಡಿದರೆ ಬರುವವರ ಸಂಖ್ಯೆ ಹೆಚ್ಚಳವಾಗುತ್ತದೆ. ರೋಗಿಗಳ ಸಂಖ್ಯೆಯೂ ಹೆಚ್ಚಳವಾಗಬಹುದು. ಹೀಗಾಗಿ ಪರಿಸ್ಥಿತಿ ಎದುರಿಸಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದರು.

ತಹಶೀಲ್ದಾರ್‌ ಎಂ.ಶಿವಮೂರ್ತಿ ಮಾತನಾಡಿ ‘ತಾಲ್ಲೂಕಿನಲ್ಲಿ ಈವರೆವಿಗೆ 193 ಕೋವಿಡ್‌ ಪ್ರಕರಣಗಳು ಕಾಣಿಸಿಕೊಂಡಿವೆ. ಇಬ್ಬರು ಗುಣಮುಖರಾಗಿದ್ದಾರೆ. ಬುಧವಾರದವರೆಗೆ 191 ಸಕ್ರಿಯ ಪ್ರಕರಣಗಳಿವೆ. 2452 ಮಂದಿಗೆ ಗಂಟಲು ದ್ರವ ಸಂಗ್ರಹಿಸಲಾಗಿದೆ. 1818 ಫಲಿತಾಂಶ ಬಂದಿದ್ದು 634 ಫಲಿತಾಂಶ ಬರಬೇಕಿದೆ’ ಎಂದರು.

‘ಜೀವ ಭಯದಿಂದ ಓಡಿಬಂದ ನಮ್ಮನ್ನು ಚೆನ್ನಾಗಿ ನೋಡಿಕೊಂಡಿದ್ದೀರಿ. ಜಿಲ್ಲಾಡಳಿತ, ತಾಲ್ಲೂಕು ಆಡಳಿತಕ್ಕೆ ಕೃತಜ್ಞತೆ ಸಲ್ಲಿಸುತ್ತೇವೆ’ ಎಂದು ವಲಸಿಗರು ಹೇಳಿದರು.

ಜಿಲ್ಲಾ ಬಿಸಿಎಂ ಅಧಿಕಾರಿ ಸೋಮಶೇಖರ್, ಮೊರಾರ್ಜಿ ಶಾಲೆಯ ಪ್ರಾಂಶುಪಾಲ ಪ್ರಸನ್ನಕುಮಾರ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮಧುಸೂದನ್, ಜಿಲ್ಲಾ ನೋಡೆಲ್ ಆರೋಗ್ಯಾಧಿಕಾರಿ ಡಾ.ಬೆಟ್ಟಸ್ವಾಮಿ, ರಾಜಶ್ವನಿರೀಕ್ಷಕ ರಾಜಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.