ADVERTISEMENT

ರೇಣುಕಾ ಯಲ್ಲಮ್ಮ ದೇವಿ ಜಾತ್ರಾ ಮಹೋತ್ಸವ ಇಂದಿನಿಂದ

ತಳಿರು ತೋರಣಗಳಿಂದ ದೇವಸ್ಥಾನ ಸಿಂಗಾರ, ವಿದ್ಯುತ್ ದೀಪಾಲಂಕಾರ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2025, 19:42 IST
Last Updated 10 ಫೆಬ್ರುವರಿ 2025, 19:42 IST
ಮದ್ದೂರಿನ ರೇಣುಕಾ ಯಲ್ಲಮ್ಮದೇವಿ
ಮದ್ದೂರಿನ ರೇಣುಕಾ ಯಲ್ಲಮ್ಮದೇವಿ   

ಮದ್ದೂರು: ಪಟ್ಟಣದ ಹೊಳೆಬೀದಿಯಲ್ಲಿ ಚಿಕ್ಕಸವದತ್ತಿ ಎಂದೇ ಪ್ರಸಿದ್ಧಿಯಾಗಿರುವ ಶ್ರೀರೇಣುಕಾ ಯಲ್ಲಮ್ಮದೇವಿ 53ನೇ ವರ್ಷದ ಜಾತ್ರಾ ಮಹೋತ್ಸವವು ಫೆ.11ರಿಂದ ನಡೆಯಲಿದೆ.

ಎಲ್ಲೆಡೆ ತಳಿರು ತೋರಣಗಳಿಂದ ಸಿಂಗರಿಸಿದ್ದು, ಪೇಟೆ ಬೀದಿ, ಹೊಳೇಬೀದಿ ಸಂಪರ್ಕಿಸುವ ಮಾರ್ಗಗಳಲ್ಲಿ ಹಾಗೂ ದೇವಸ್ಥಾನದ ಮಹಾದ್ವಾರದ ಬಳಿ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ.

11ರಂದು ಸಂಜೆ 6.30ಕ್ಕೆ ಮೂಲ ದೇವರಿಗೆ ಅನುಜ್ಞೆ ಹಾಗೂ ಗಣಪತಿ ಪೂಜೆ ಸಲ್ಲಿಸಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಗುವುದು. ಕಳಸ ಪ್ರತಿಷ್ಠಾಪನೆ ನಂತರ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಕಾರ್ಯಕ್ರಮವು ಜರುಗಲಿದೆ.

ADVERTISEMENT

12ರಂದು ಬೆಳಿಗ್ಗೆ 8.30ಕ್ಕೆ 26ನೇ ವರ್ಷದ ಮಹಾಚಂಡಿಕಾಯಾಗ ನಡೆಯಲಿದೆ. ನಂತರ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಹಾಗೂ ಮುತ್ತೈದೆಯರಿಂದ ತಂಬಿಟ್ಟಿನ ಆರತಿ, ಮಧ್ಯಾಹ್ನ 1ರಿಂದ 4ರವರೆಗೆ ಅನ್ನಸಂತರ್ಪಣೆ ನಡೆಯಲಿದೆ.

4.15ರಿಂದ ಸಂಜೆ 5.30ರವರೆಗೆ ನಿಂಬೆಹಣ್ಣಿನ ದೀಪದ ಆರತಿ ಮತ್ತು ಉಯ್ಯಾಲೋತ್ಸವವನ್ನು ದೇವಸ್ಥಾನದ ಟ್ರಸ್ಟ್ ವತಿಯಿಂದ ಏರ್ಪಡಿಸಲಾಗಿದೆ. ರಾತ್ರಿ 7ಕ್ಕೆ ಹೊಳೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಆರಂಭಿಸಿ ದೇವಿಯ ಮುತ್ತಿನ ಪಲ್ಲಕ್ಕಿ ಉತ್ಸವ ನಡೆಯಲಿದ್ದು, ವಿವಿಧ ವಿಶೇಷ ಹೂವುಗಳಿಂದ ಹಾಗೂ ದೀಪಾಲಂಕಾರದಿಂದ ಪಲ್ಲಕ್ಕಿ ಉತ್ಸವ ಕಂಗೊಳಿಸಲಿದೆ.

ತಿರುಪತಿ ತಿರುಮಲ ದೇವಸ್ಥಾನದ ಮಂಜು ಬಾಲಾಜಿ ಅವರ ವಾದ್ಯಗೋಷ್ಠಿ, ಮಂಗಳೂರಿನ ಯಕ್ಷಗಾನ, ಕೇರಳದ ಚಂಡೆ ಮೇಳ, ತಮಿಳುನಾಡಿನ ಬ್ಯಾಂಡ್ ಸೆಟ್ ಸೇರಿದಂತೆ ಮದ್ದೂರಮ್ಮನವರ ಪೂಜಾ ಕುಣಿತ, ದಂಡಿನಮಾರಮ್ಮನವರ ಪೂಜಾ ಕುಣಿತ, ಕಲಾವಿದರಿಂದ ತಮಟೆ, ನಗಾರಿ, ಜಾನಪದ ಮೇಳಗಳು ಮೆರವಣಿಗೆಯಲ್ಲಿ ಸಾಗಲಿವೆ. ರಾತ್ರಿ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ಸಾಗಿ ಭಾನುವಾರ ಬೆಳಿಗ್ಗೆ 6ಕ್ಕೆ ದೇವಸ್ಥಾನದ ಮೂಲಸ್ಥಾನ ತಲುಪಲಿದೆ ಎಂದು ದೇವಸ್ಥಾನದ ಧರ್ಮದರ್ಶಿ, ಕಾರ್ಯದರ್ಶಿ ಶ್ರೀನಿವಾಸ್ ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.