
ಶ್ರೀರಂಗಪಟ್ಟಣ: ಕಾರ್ತೀಕ ಮಾಸದ ಕಡೇ ಸೋಮವಾರದ ನಿಮಿತ್ತ ಪಟ್ಟಣದ ಜಿಬಿ ಗೇಟ್ ಬಳಿ, ಕಾವೇರಿ ನದಿ ತೀರದಲ್ಲಿರುವ ಚಂದ್ರಮೌಳೇಶ್ವರಸ್ವಾಮಿ ದೇವಾಲಯದಲ್ಲಿ ಲೋಕ ಕಲ್ಯಾಣಾರ್ಥವಾಗಿ ರುದ್ರ ಹೋಮ ನಡೆಯಿತು.
ದೇವಾಲಯ ಮುಂದೆ ಅಗ್ನಿಯನ್ನು ಪ್ರತಿಷ್ಠಾಪಿಸಿ ಹೋಮ, ಹವನಗಳನ್ನು ನೆರವೇರಿಸಲಾಯಿತು. ಚಂದ್ರಮೌಳೇಶ್ವರ ದೇವರಿಗೆ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ರುದ್ರ ಪಾರಾಯಣ, ನವಗ್ರಹ ಹೋಮ ಇತರ ಕೈಂಕರ್ಯಗಳು ಜರುಗಿದವು.
ಜ್ಯೋತಿಷಿ ವಿ. ಭಾನುಪ್ರಕಾಶ ಶರ್ಮಾ, ವೈದಿಕರಾದ ಕೃಷ್ಣಭಟ್, ಯಜ್ಞಪತಿಭಟ್, ಶಶಿಕುಮಾರ್ ಇತರ ವೈದಿಕರ ತಂಡ ಧಾರ್ಮಿಕ ವಿಧಿ, ವಿಧಾನಗಳನ್ನು ನೆರವೇರಿಸಿತು. ಪಟ್ಟಣ ಮಾತ್ರವಲ್ಲದೆ ಆಸುಪಾಸಿನ ಗ್ರಾಮಗಳ ಭಕ್ತರು ಚಂದ್ರಮೌಳೇಶ್ವರ ದೇವರಿಗೆ ಪೂಜೆ ಸಲ್ಲಿಸಿದರು. ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
ಪಟ್ಟಣದ ಐತಿಹಾಸಿಕ ಗಂಗಾಧರೇಶ್ವರ, ಜ್ಯೋತಿರ್ಮಹೇಶ್ವರ, ವೆಲ್ಲೆಸ್ಲಿ ಸೇತವೆ ಸಮೀಪದ ಪ್ರಸನ್ನ ನಂಜುಂಡೇಶ್ವರ, ಪಟ್ಟಣ ಸಮೀಪದ ದೊಡ್ಡ ಗೋಸಾಯಿಘಾಟ್‌ನ ಕಾಶಿ ವಿಶ್ವನಾಥ್, ಚಂದ್ರವನ ಆಶ್ರಮದ ಕಾಶಿ ಚಂದ್ರಮೌಳೇಶ್ವರ, ತಾಲ್ಲೂಕಿನ ಮಹದೇವಪುರ ಕಾಶಿ ವಿಶ್ವನಾಥ, ಗಣಂಗೂರಿನ ಬಸವೇಶ್ವರ, ಕೂಡಲಕುಪ್ಪೆಯ ಶಕ್ತಿ ಶನೇಶ್ವರ, ಅರಕೆರೆಯ ಈಶ್ವರ, ಮೇಳಾಪುರದ ಹೆಗಡೇಶ್ವರ ಇತರ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.