
ಮಂಡ್ಯ: ‘ಶೋಷಣೆಗೆ ಒಳಗಾದವರು ಯಾರೇ ಆಗಿರಲಿ ಆಯೋಗಕ್ಕೆ ಬಂದು ಪ್ರಕರಣ ದಾಖಲಿಸಬಹುದು. ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಅಯೋಗ ಸದಾ ನಿಮ್ಮೊಂದಿಗೆ ಇರುತ್ತದೆ’ ಎಂದು ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗ ಅಧ್ಯಕ್ಷ ಡಾ.ಎಲ್. ಮೂರ್ತಿ ಹೇಳಿದರು.
ಜಿಲ್ಲಾ ಪಂಚಾಯಿತಿ ಕಾವೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
‘20 ದಿನಗಳ ಹಿಂದೆ ನಾನು ಆಯೋಗಕ್ಕೆ ನೂತನ ಅಧ್ಯಕ್ಷನಾಗಿ ನೇಮಕಗೊಂಡಿದ್ದೇನೆ. ಆಯೋಗದಲ್ಲಿ ಒಟ್ಟಾರೆ 1,503 ಪ್ರಕರಣಗಳು ಹಾಗೂ 4,943 ಪತ್ರ ವ್ಯವಹಾರದ ಕಡತಗಳು ಬಾಕಿ ಇವೆ. ಎಲ್ಲವನ್ನೂ ಶೀಘ್ರವಾಗಿ ವಿಲೇವಾರಿ ಮಾಡಲು ಶ್ರಮಿಸುತ್ತೇನೆ’ ಎಂದು ಹೇಳಿದರು.
ತಿಂಗಳಿಗೆ ರಾಜ್ಯದ 3 ಜಿಲ್ಲೆಗಳಲ್ಲಿ ಪ್ರಗತಿ ಪರಿಶೀಲನೆ ಮಾಡಲಾಗುವುದು. ಅದಾಲತ್ ಮಾದರಿಯಲ್ಲಿ ಸಣ್ಣ ಪುಟ್ಟ ವ್ಯಾಜ್ಯಗಳನ್ನು ಜಿಲ್ಲಾ ಹಂತದಲ್ಲಿಯೇ ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತದೆ. ಮಂಡ್ಯ ಜಿಲ್ಲೆಯ ಹೆಚ್ಚಾಗಿ ಕಂದಾಯ, ದೌರ್ಜನ್ಯ, ಖಾತೆ, ಪಾಣಿ, ಸ್ಮಶಾನದ ವಿಚಾರಗಳ ಕುರಿತಾಗಿ ಪ್ರಕರಣಗಳು ದಾಖಲಾಗಿವೆ ಎಂದು ತಿಳಿಸಿದರು.
ಮುಖ್ಯವಾಗಿ ಎಸ್‌ಸಿಎಸ್‌ಪಿ/ಟಿಎಸ್‌ಪಿ ಹಣ ಸರಿಯಾಗಿ ಅರ್ಹ ಯೋಜನೆಗಳಿಗೆ ತಲುಪಬೇಕು. ಇನ್ನೊಂದು ತಿಂಗಳ ಒಳಗೆ ಜಿಲ್ಲೆಯಲ್ಲಿ ದೊಡ್ಡದಾಗಿ ಕುಂದು ಕೊರತೆ ಸಭೆ ಆಯೋಜನೆ ಮಾಡಿ ಎಲ್ಲರ ಅಹವಾಲುಗಳನ್ನು ಸ್ವೀಕರಿಸಲಾಗುವುದು. ಎಸ್‌ಸಿ, ಎಸ್‌ಟಿ ಸಮುದಾಯಗಳ ನಾಗರಿಕ ಹಕ್ಕುಗಳು, ಶಿಕ್ಷಣ ಹಾಗೂ ಅವರನ್ನು ಸಾಮಾಜಿಕವಾಗಿ ಸದೃಢ ಮಾಡಲು ಅಧಿಕಾರಿಗಳು ಶ್ರಮವಹಿಸಬೇಕು. ಪದವಿ, ತಾಂತ್ರಿಕ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗ ದೊರಕಿಸಿ ಕೊಡುವ ದೃಷ್ಟಿಯಿಂದ ತರಬೇತಿ ನೀಡಿ ಎಂದು ತಿಳಿಸಿದರು.
ಪರಿಶಿಷ್ಟ ಜನಾಂಗದವರಿಗೆ ಸ್ಮಶಾನ ನೀಡುವಾಗ ಸರ್ವೆ ನಡೆಸಿ, ಯಾವ ಗ್ರಾಮದಲ್ಲಿ ಹೆಚ್ಚಾಗಿ ಕೂಲಿ ಕಾರ್ಮಿಕರು ಹಾಗೂ ಸ್ವಂತ ಜಮೀನು ಇಲ್ಲದ ಪರಿಶಿಷ್ಟರಿಗೆ ಸ್ಮಶಾನ ಮಂಜೂರು ಮಾಡಿ ಎಂದು ಸೂಚನೆ ನೀಡಿದರು.
ನಂತರ ಸಂಘ ಸಂಸ್ಥೆಗಳಿಂದ ಅಹವಾಲುಗಳನ್ನು ಸ್ವೀಕಾರ ಮಾಡಿದರು.
ಸಭೆಯಲ್ಲಿ ಆಯೋಗದ ಕಾರ್ಯದರ್ಶಿ ಶಿವರಾಂ, ರಾಜ್ಯ ಸಣ್ಣ ಕೈಗಾರಿಕೆಗಳ ಉಪಾಧ್ಯಕ್ಷೆ ವಿಜಯಲಕ್ಷ್ಮಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್. ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಶ್ರೀನಿವಾಸ್ ಪಾಲ್ಗೊಂಡಿದ್ದರು.
ಜಿಲ್ಲಾಧಿಕಾರಿ ಕುಮಾರ ಮಾತನಾಡಿ ‘ಜಿಲ್ಲೆಯಲ್ಲಿ ಒಟ್ಟು 1301 ಸ್ಮಶಾನಗಳು ಇದ್ದು ಪ್ರತ್ಯೇಕವಾಗಿ 195 ಸ್ಮಶಾನಗಳು ಪರಿಶಿಷ್ಟ ಜಾತಿ ಜನಾಂಗದವರಿಗೆ ಸೇರಿವೆ. ರಾಜ್ಯದಲ್ಲಿ ಪರಿಶಿಷ್ಟ ಜಾತಿ ಕಾಲೊನಿಗಳಿಗೆ ಮೂಲಸೌಕರ್ಯ ಒದಗಿಸಲು ಪ್ರಗತಿ ಕಾಲೊನಿ ಯೋಜನೆಯಡಿ 2023ರಿಂದ ಇಲ್ಲಿಯವರೆಗೂ 222 ಕಾಮಗಾರಿಗಳನ್ನು ಗುರುತಿಸಲಾಗಿದೆ. ಅದರಲ್ಲಿ 97 ಕಾಮಗಾರಿಗಳು ಮುಕ್ತಾಯಗೊಂಡಿದ್ದು 124 ಕಾಮಗಾರಿಗಳು ಪ್ರಗತಿ ಹಂತದಲ್ಲಿವೆ ಎಂದು ಸಭೆಗೆ ಮಾಹಿತಿ ನೀಡಿದರು. 2025ನೇ ಸಾಲಿನಲ್ಲಿ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡದ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ 67 ಸಂತ್ರಸ್ತರಿಗೆ ಒಟ್ಟು ₹7512500 ಮಂಜೂರು ಮಾಡಲಾಗಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.