ADVERTISEMENT

ಅದ್ಯಾಪಕರ ಉದ್ಯೋಗ ಭದ್ರತೆಯಿಂದ ಮಕ್ಕಳ ಭವಿಷ್ಯ ಭದ್ರ: ಪ್ರೊ.ಹಿ.ಶಿ.ರಾಮಚಂದ್ರೇಗೌಡ

ಕುವೆಂಪು ಜನ್ಮದಿನ, ಪ್ರಶಸ್ತಿ ಪ್ರದಾನ ಸಮಾರಂಭ; ಪ್ರೊ.ಹಿ.ಶಿ.ರಾಮಚಂದ್ರೇಗೌಡ ಅಭಿಮತ

​ಪ್ರಜಾವಾಣಿ ವಾರ್ತೆ
Published 13 ಜನವರಿ 2020, 12:57 IST
Last Updated 13 ಜನವರಿ 2020, 12:57 IST
ಕುವೆಂಪು ಜನ್ಮದಿನಾಚರಣೆ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರಿಗೆ ತಾಯಮ್ಮ ಹಾಗೂ ಎಸ್‌.ಸಿ.ಮಲ್ಲಯ್ಯ ಜಾನಪದ ದತ್ತಿ ಪ್ರಶಸ್ತಿ ಪ್ರದಾನ ಮಾಡಲಾಯಿತು
ಕುವೆಂಪು ಜನ್ಮದಿನಾಚರಣೆ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರಿಗೆ ತಾಯಮ್ಮ ಹಾಗೂ ಎಸ್‌.ಸಿ.ಮಲ್ಲಯ್ಯ ಜಾನಪದ ದತ್ತಿ ಪ್ರಶಸ್ತಿ ಪ್ರದಾನ ಮಾಡಲಾಯಿತು   

ಮಂಡ್ಯ: ‘ಯಾವ ದೇಶದಲ್ಲಿ ಅಧ್ಯಾಪಕರ ಉದ್ಯೋಗ ಭದ್ರವಾಗಿರುವುದಿಲ್ಲವೋ ಆ ದೇಶದ ಮಕ್ಕಳ ಭವಿಷ್ಯವೂ ಭದ್ರವಾಗಿರುವುದಿಲ್ಲ’ ಎಂದು ನಿವೃತ್ತ ಪ್ರಾಧ್ಯಾಪಕ ಪ್ರೊ.ಹಿ.ಶಿ.ರಾಮಚಂದ್ರೇಗೌಡ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ, ಪಿಇಎಸ್‌ ಕಾಲೇಜು ವತಿಯಿಂದ ಕಾಲೇಜಿನ ವಿವೇಕಾನಂದ ರಂಗ ಮಂದಿರದಲ್ಲಿ ಸೋಮವಾರ ನಡೆದ ರಾಷ್ಟ್ರಕವಿ ಕುವೆಂಪು ಜನ್ಮದಿನಾಚರಣೆ, ತಾಯಮ್ಮ ಹಾಗೂ ಎಸ್‌.ಸಿ.ಮಲ್ಲಯ್ಯ ರಾಜ್ಯ ಮಟ್ಟದ ಜಾನಪದ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

‘ಖಾಸಗಿ ಸಂಸ್ಥೆಗಳಲ್ಲಿ ಕಡಿಮೆ ಸಂಬಳಕ್ಕೆ ಅಧ್ಯಾಪಕರು ದುಡಿಯುತ್ತಿದ್ದಾರೆ. ಅವರ ಭವಿಷ್ಯ ಅಭದ್ರವಾಗಿದ್ದರೆ ವಿದ್ಯಾರ್ಥಿಗಳಿಗೆ ಸೃಜನಾತ್ಮಕ, ಕಲಾತ್ಮಕವಾಗಿ ಏನು ತಾನೆ ಬೋಧಿಸುತ್ತಾರೆ? ಅವರ ಜೀವನ ಭದ್ರವಾಗಿದ್ದರೆ ವಿದ್ಯಾರ್ಥಿಗಳ ಜೀವನವನ್ನು ಭದ್ರಪಡಿಸುವಲ್ಲಿ ಕಾರ್ಯೋನ್ಮುಖರಾಗುತ್ತಾರೆ. ಅಧ್ಯಾಪಕರ ಉದ್ಯೋಗ ಭದ್ರತೆ ತುರ್ತಾಗಿ ಆಗಬೇಕು’ ಎಂದು ಹೇಳಿದರು.

ADVERTISEMENT

‘ಪ್ರಸ್ತುತ ಸಂದರ್ಭ ಇಡೀ ದೇಶದಲ್ಲಿ ಉದ್ಯೋಗ ಭದ್ರತೆ, ಆಹಾರ ಭದ್ರತೆಗೆ ಸಂಚಾಕಾರ ಉಂಟಾಗಿದೆ. ಪದವಿ ಪಡೆದವರಿಗೆಲ್ಲಾ ಕೆಲಸ ಸಿಗುತ್ತಿಲ್ಲ. ಇದ್ದ ಕೆಲಸವನ್ನೂ ಕಳೆದುಕೊಂಡು ಜೀವನಕ್ಕಾಗಿ ತಲೆಕೆಡಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಉದ್ಯೋಗಾವಕಾಶಗಳು ಶೇ 4 ರಷ್ಟು ಕಡಿಮೆಯಾಗಿವೆ. ಮೊದಲು ಉದ್ಯೋಗ ಅರಸಿ ಮಹಾನಗರಗಳ ಕಡೆ ವಲಸೆ ಹೋಗುತ್ತಿದ್ದರು. ಅಲ್ಲಿ ಕೆಲಸ ಸಿಗುತ್ತಿದ್ದವು. ಪ್ರಸ್ತುತ ಸನ್ನಿವೇಶವೇ ಬದಲಾಗಿದ್ದು ಬೆಂಗಳೂರಿನ ಪೀಣ್ಯ ಕೈಗಾರಿಕೆ ಪ್ರದೇಶದಲ್ಲಿ ಶೇ 30 ರಷ್ಟು ಉದ್ಯೋಗ ಕಡಿತವಾಗಿದೆ. ನಗರವಾಸಿಗಳೆಲ್ಲರೂ ಹಳ್ಳಿಗಳಿಗೆ ಮರಳುವ ಸ್ಥಿತಿ ನಿರ್ಮಾಣವಾಗಿದೆ’ ಎಂದರು.

‘ವಿದ್ಯಾರ್ಥಿಗಳು ವಿದ್ಯಾಭ್ಯಾಸದೊಂದಿಗೆ ಕೌಶಲಗಳನ್ನೂ ರೂಢಿಸಿಕೊಳ್ಳಬೇಕು. ಇಂದಿನ ದಿನಗಳಲ್ಲಿ ಎಲ್ಲರನ್ನೂ ಕೆಲಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಸರ್ಕಾರಿ ಕಚೇರಿಗಳಲ್ಲಿಯೂ ಉದ್ಯೋಗ ಭರ್ತಿಗಳಾಗುತ್ತಿಲ್ಲ. ವಿದ್ಯಾರ್ಥಿಗಳು ಹೋರಾಟಗಾರರಂತಿರಬೇಕು. ಸಮಾಜದಲ್ಲಿ ಸಮಾನ ಜೀವನಕ್ಕೆ ಮುನ್ನಡಿ ಇಡಬೇಕು. ವಸ್ತು ನಿಷ್ಟ, ಬಂಧ ನಿಷ್ಟರಾಗಿ ವಿದ್ಯಾರ್ಥಿಗಳು ರೂಪುಗೊಳ್ಳಬೇಕು’ ಎಂದು ಸಲಹೆ ನೀಡಿದರು.

‘ವಿಜ್ಞಾನ, ತಂತ್ರಜ್ಞಾನದ ಬಗ್ಗೆ ವಿರೋಧವಿದ್ದರೂ ಎಲ್ಲರಿಗೂ, ಎಲ್ಲ ಕಾಲಕ್ಕೂ ಉದ್ಯೋಗ ಬೇಕಾಗಿದೆ. ಉದ್ಯೋಗ ನೀಡುವವರು ಕೆಲಸಗಾರರನ್ನು ಮಾನವ ಸಂಪನ್ಮೂಲದಂತೆ ಪರಿಭಾವಿಸುವುದರಿಂದ ಭಾವನಾತ್ಮಕ ಬಂಧ ಹೋಗಿ ಕೆಲಸ ಕಳೆದು ಹೋಗುತ್ತಿವೆ. ಜಾತಿ ತಾರತಮ್ಯದ ಹೊರತಾಗಿಯೂ ಜಗತ್ತಿನ ಅಭಿವೃದ್ಧಿ ಶೀಲತೆ ಎಂದಿರುವುದು ಹಳ್ಳಿಗಳಲ್ಲಿ ಮಾತ್ರ. ಹಳ್ಳಿಗಳಲ್ಲಿ ಉದ್ಯೋಗ ಇಲ್ಲದವರೇ ಇರುತ್ತಿರಲಿಲ್ಲ. ಆದರೆ ಈಗ ಇರುವುದೆಲ್ಲವನ್ನು ಬಿಟ್ಟು ಇಲ್ಲದ ಕಡೆ ನಡೆಯುವುದೇ ಜೀವನವಾಗಿದೆ‌’ ಎಂದು ವಿಷಾದಿಸಿದರು.

‘ನಮ್ಮ ತಳಮಟ್ಟದ ಬೇರನ್ನೇ ಕತ್ತರಿಸುವ ಹುನ್ನಾರ ನಡೆಯುತ್ತಿದೆ. ಎಲ್ಲವೂ ಎಲ್ಲರಿಗಾರಿ ಎನ್ನುವ ವಿಕಾಸ ತತ್ವದ ಮೇಲೆ ನಮ್ಮ ಮೂಲ ನೆಲೆಯನ್ನು ಕಟ್ಟಿಕೊಳ್ಳಬೇಕಿದೆ. ಮೇಲು, ಕೀಳು ದಲಿತ, ಶೂದ್ರ ಎಂಬ ಬೇಧ ಭಾವ ಮನದಲ್ಲಿ ತುಂಬಿಕೊಂಡಿದ್ದರೆ ನಿಜಕ್ಕೂ ವಿಕಾಸ ಆಗುವುದಿಲ್ಲ. ವಿಕಾಸ ಹೊಂದಲು ಜಾತಿ, ಜಾತಿಗಳ ನಡುವಿನ ತಾರತಮ್ಯ ಹೋಗಲಾಡಿಸುವ ಮನಸ್ಸುಗಳನ್ನು ಬೆಳೆಸಬೇಕು’ ಎಂದರು.

ಕಸಾಪ ಗೌರವ ಕಾರ್ಯದರ್ಶಿ ವ.ಚ.ಚನ್ನೇಗೌಡ ಮಾತನಾಡಿ ‘ಕುವೆಂಪು ಅವರ ಸಾಹಿತ್ಯ ವೈಚಾರಿಕ, ಪ್ರಗತಿ ಪೂರ್ಣವಾಗಿದೆ. ಮನುಕುಲದ, ಜಗದ ಹಿತಾಸಕ್ತಿ ಬರೆದು ವಿಶ್ವ ಚಿಂತಕರಾಗಿದ್ದಾರೆ. ಅವರ ಸಾಹಿತ್ಯ ತರ್ಜುಮೆಯಾಗಿದ್ದರೆ ಅವರಿಗೆ ನೋಬೆಲ್‌ ಪ್ರಶಸ್ತಿ ಬಂದಿರಬೇಕಿತ್ತು’ ಎಂದರು.

ಬೆಳಗಾವಿಯ ಮಲ್ಲವ್ವ ಬಸಪ್ಪ ಮ್ಯಾಗೇರಿ, ಬೆಂಗಳೂರಿನ ಜಾನಪದ ಕಲಾವಿದ ಜೋಗಿಲ ಸಿದ್ದರಾಜು, ಶ್ರೀರಂಗಪಟ್ಟಣ ತಾಲ್ಲೂಕಿನ ಮಹದೇವಸ್ವಾಮಿ ಗಾಮನಹಳ್ಳಿ ಅವರಿಗೆ ಎಸ್‌.ಸಿ.ಮಲ್ಲಯ್ಯ ದತ್ತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪ್ರಾಂಶುಪಾಲ ಡಾ.ಸಿ.ಆರ್‌.ರಾಜು, ಕಾಡಾ ಮಾಜಿ ಅಧ್ಯಕ್ಷ ಎನ್‌.ಶಿವಲಿಂಗಯ್ಯ, ಸಾಂಸ್ಕೃತಿಕ ಸಮಿತಿ ಸಂಚಾಲಕ ಡಾ.ಜೆ.ಮಹದೇವು, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಕೆ.ರವಿಕುಮಾರ್‌ ಚಾಮಲಾಪುರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.