ADVERTISEMENT

ಶ್ರೀರಂಗಪಟ್ಟಣ: ಕುಸಿಯುತ್ತಿದೆ ಸೆಂದಿಲ್‌ ಕೋಟೆ!

ಗಣಂಗೂರು ನಂಜೇಗೌಡ
Published 5 ಫೆಬ್ರುವರಿ 2024, 7:42 IST
Last Updated 5 ಫೆಬ್ರುವರಿ 2024, 7:42 IST
ಶ್ರೀರಂಗಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯ ರಸ್ತೆಯಲ್ಲಿರುವ ಸೆಂದಿಲ್‌ಕೋಟೆ ಕುಸಿಯುತ್ತಿರುವುದು
ಶ್ರೀರಂಗಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯ ರಸ್ತೆಯಲ್ಲಿರುವ ಸೆಂದಿಲ್‌ಕೋಟೆ ಕುಸಿಯುತ್ತಿರುವುದು   

ಶ್ರೀರಂಗಪಟ್ಟಣ: ಪಟ್ಟಣದ ಮಹತ್ವದ ಐತಿಹಾಸಿಕ ಪಳೆಯುಳಿಕೆಗಳಲ್ಲಿ ಒಂದಾದ ಸೆಂದಿಲ್‌ ಕೋಟೆ ದಿನೇ ದಿನೆ ಕುಸಿಯುತ್ತಿದ್ದು, ಅದರ ಸಂರಕ್ಷಣೆಗೆ ಕ್ರಮ ವಹಿಸದೇ ಇರುವುದು ಟೀಕೆಗೆ ಗ್ರಾಸವಾಗಿದೆ.

ಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯ ರಸ್ತೆಯಲ್ಲಿ, ಮಿನಿ ವಿಧಾನಸೌಧಕ್ಕೆ ಕೂಗಳತೆಯ ದೂರದಲ್ಲಿರುವ ಸೆಂದಿಲ್‌ ಕೋಟೆ ಎರಡು ಕಡೆ ಕುಸಿದು ಬಿದ್ದಿದೆ. ಕೋಟೆಯನ್ನು ನಿರ್ಮಿಸಲು ಬಳಸಿರುವ ದಪ್ಪ ಗಾತ್ರದ ಕಲ್ಲುಗಳು ಒಂದೊಂದಾಗಿ ಉದುರುತ್ತಿವೆ. ಈ ಕೋಟೆಯ ಮೇಲೆ ಗಿಡಗಳು ಬೆಳೆದು ತಳಗುಂಟ ಬೇರು ಬಿಟ್ಟಿರುವುದರಿಂದ ಕೋಟೆಯ ಅಸ್ಥಿತ್ವಕ್ಕೆ ಧಕ್ಕೆ ಉಂಟಾಗುತ್ತಿದೆ. ಬೇರುಗಳು ಕೋಟೆಯ ತಳ ಭಾಗದ ವರೆಗೆ ಹಬ್ಬಿದ್ದು ಕಲ್ಲುಗಳನ್ನು ಸಡಿಲ ಮಾಡುತ್ತಿವೆ. ಇದರಿಂದಾಗಿ ಕೋಟೆ ನಿರ್ಮಿಸಲು ಬಳಸಿರುವ ಕಲ್ಲುಗಳು ಚುರಕಿ ಗಾರೆ ಸಹಿತ ಬೀಳುತ್ತಿವೆ.

ಕಳೆದ ವರ್ಷ ಸುರಿದ ಕುಂಭದ್ರೋಣ ಮಳೆಗೆ ಸ್ವಲ್ಪ ಪ್ರಮಾಣದಲ್ಲಿ ಕುಸಿತ ಕಂಡಿದ್ದ ಈ ಕೋಟೆಯನ್ನು ತಕ್ಷಣ ದುರಸ್ತಿ ಮಾಡಿದ್ದರೆ ಉಳಿದ ಭಾಗ ಕುಸಿಯುವುದನ್ನು ತಡೆಯಲು ಸಾಧ್ಯವಿತ್ತು. ಆದರೆ ವಸ್ತುಸಂಗ್ರಹಾಲಯಗಳು ಮತ್ತು ಪ್ರಾಚ್ಯವಸ್ತು ಇಲಾಖೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದರಿಂದ ಕೋಟೆ ಕುಸಿಯುವ ಪ್ರಕ್ರಿಯೆ ಮುಂದುವರೆದಿದೆ. ಕುಸಿತ ಹೀಗೇ ಮುಂದುವರೆದರೆ ಮಹತ್ವದ ಸ್ಮಾರಕವೊಂದು ಸಂಪೂರ್ಣ ನಾಮಾವಶೇಷವಾಗುವ ಸಂಭವವಿದೆ.

ADVERTISEMENT
ಶ್ರೀಗಂಧದ ಕೋಠಿ:
ಟಿಪ್ಪು ಸುಲ್ತಾನ್‌ ಕಾಲದಲ್ಲಿ ಶ್ರೀಗಂಧವನ್ನು ಸಂಗ್ರಹಿಸಿ ಇಡಲು ಈ ಕೋಟೆಯನ್ನು ನಿರ್ಮಿಸಲಾಗಿತ್ತು. 18ನೇ ಶತಮಾನದ ಅಂತ್ಯ ಭಾಗದಲ್ಲಿ ಸಾಂಬಾರು ಪದಾರ್ಥಗಳ ಜತೆಗೆ ಶ್ರೀಗಂಧವನ್ನೂ ಕೂಡ ಮೈಸೂರು ರಾಜ್ಯದಿಂದ ಟರ್ಕಿ ಇತರ ದೇಶಗಳಿಗೆ ರಫ್ತು ಮಾಡಲಾಗುತ್ತಿತ್ತು. ರಫ್ತು ಮಾಡುವ ಮುನ್ನ ಗುಣಮಟ್ಟದ ಶ್ರೀಗಂಧವನ್ನು ಸಂರಕ್ಷಿಸಿ ಇಡುವ ಉದ್ದೇಶದಿಂದ ಟಿಪ್ಪು ಸುಲ್ತಾನನ ಅಧಿಕೃತ ಅರಮನೆ ಲಾಲ್‌ ಮಹಲ್‌ ಸಮೀಪದಲ್ಲೇ ಈ ಕೋಟೆಯನ್ನು ನಿರ್ಮಿಸಲಾಗಿತ್ತು. ಇದರಿಂದಾಗಿ ಈ ಕೋಟೆಗೆ ಸೆಂದಿಲ್‌ ಕೋಟೆ (ಸ್ಯಾಂಡಲ್‌ ಫೋರ್ಟ್‌) ಎಂಬ ಹೆಸರು ಬಂದಿದೆ. ಶ್ರೀಗಂಧದ ಕೋಠಿ ಎಂತಲೂ ಕರೆಯಲಾಗುತ್ತದೆ.

ಆಕ್ರೋಶ:

ಶ್ರೀರಂಗಪಟ್ಟಣ ದ್ವೀಪದಲ್ಲಿದ್ದ ತೂಗು ಸೇತುವೆ, ಗ್ಯಾರಿಸನ್‌ ಹಾಸ್ಟಿಟಲ್‌, ರಾಕೆಟ್‌ ಫೋರ್ಟ್‌, ಥಾಮಸ್‌ ಇನ್‌ಮಾನ್‌ ಡಂಜನ್‌ ಕಮಾನು ಈಗಾಗಲೇ ನಾಮಾವಶೇಷವಾಗಿವೆ. ಸೆಂದಿಲ್‌ ಕೋಟೆಯನ್ನು ಸಂರಕ್ಷಿಸದೇ ಇದ್ದರೆ ಇದೂ ಕೂಡ ಅವುಗಳ ಸಾಲಿಗೆ ಸೇರಲಿದೆ. ಪ್ರವಾಸೋದ್ಯಮ ಮತ್ತು ಪ್ರಾಚ್ಯವಸ್ತು ಇಲಾಖೆಗಳ ನಿರ್ಕ್ಷ್ಯದಿಂದ ಅಮೂಲ್ಯ ಸ್ಮಾರಕಗಳು ಅವನತಿಯ ಅಂಚಿಗೆ ಸರಿಯುತ್ತಿವೆ ಎಂದು ಸ್ಥಳೀಯ ಇತಿಹಾಸಾಸಕ್ತರಾದ ಶಿವಕುಮಾರ್‌, ವೆಂಕಟರಮಣಸ್ವಾಮಿ ಇತರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೆಂದಿಲ್‌ ಕೋಟೆ ಕುಸಿಯುತ್ತಿರುವುದು ಮತ್ತು ಅದರ ಸಂರಕ್ಷಣೆಗೆ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ಪಡೆಯಲು ವಸ್ತುಸಂಗ್ರಹಾಲಯಗಳು ಮತ್ತು ಪ್ರಾಚ್ಯವಸ್ತು ಇಲಾಖೆಯ ಕ್ಯೂರೇಟರ್‌ ಸಂಪರ್ಕಕ್ಕೆ ಸಿಕ್ಕಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.