ADVERTISEMENT

ಮಕ್ಕಳು ಕಡೆಗಣಿಸಿದರೆ ಜೀವನಾಂಶಕ್ಕೆ ಅರ್ಜಿ ಸಲ್ಲಿಸಬಹುದು: ನ್ಯಾ. ಎಂ. ಮಹೇಂದ್ರ

ಹಿರಿಯ ನಾಗರಿಕರಿಗೆ ಕಾನೂನು ಸೌಲಭ್ಯಗಳ ಅರಿವು

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2025, 4:53 IST
Last Updated 20 ನವೆಂಬರ್ 2025, 4:53 IST
ಬೆಳಕವಾಡಿ ಗ್ರಾಮದ ಪೊಲೀಸ್ ಠಾಣೆ ಆವರಣದಲ್ಲಿ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಕಾನೂನು ಅರಿವು ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಮಹೇಂದ್ರ ಉದ್ಘಾಟಿಸಿದರು 
ಬೆಳಕವಾಡಿ ಗ್ರಾಮದ ಪೊಲೀಸ್ ಠಾಣೆ ಆವರಣದಲ್ಲಿ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಕಾನೂನು ಅರಿವು ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಮಹೇಂದ್ರ ಉದ್ಘಾಟಿಸಿದರು    

ಬೆಳಕವಾಡಿ: ‘ಇತ್ತೀಚೆಗೆ ಹಿರಿಯ ನಾಗರೀಕರನ್ನು ಕಡೆಗಾಣಿಸುವುದರಿಂದ ಮನೆಯಲ್ಲಿ ಹಿರಿಯರ ಮಾರ್ಗದರ್ಶನ ಇಲ್ಲದೆ ವಿಚ್ಛೇದನ ಪ್ರಕರಣಗಳು ಹೆಚ್ಚಾಗಿವೆ. ಮಕ್ಕಳು ತಂದೆ ತಾಯಿಯನ್ನು ಕಡೆಗಣಿಸಿದರೆ ನ್ಯಾಯಾಲಯದಲ್ಲಿ ಜೀವನಾಂಶಕ್ಕಾಗಿ ಅರ್ಜಿ ಸಲ್ಲಿಸಬಹುದು’ಎಂದು ಜೆಎಂಎಫ್‌ಸಿ ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಮಹೇಂದ್ರ ತಿಳಿಸಿದರು.

ಗ್ರಾಮದ ಪೊಲೀಸ್ ಠಾಣೆ ಆವರಣದಲ್ಲಿ ಬುಧವಾರ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಮತ್ತು ಪೊಲೀಸ್ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಹಿರಿಯ ನಾಗರಿಕರ ಪ್ರಕರಣಗಳನ್ನು ಬೇಗ ಇತ್ಯರ್ಥ ಪಡಿಸಬೇಕು ಎಂದು ಕಾನೂನು ತಿದ್ದುಪಡಿಯಾಗಿದೆ. ಕಡ್ಡಾಯವಾಗಿ ಕ್ರಯಪತ್ರ, ಮರಣಶಾಸನ ಪತ್ರ ರಿಜಿಸ್ಟರ್ ಆಗಬೇಕು. ಇಲ್ಲವಾದರೆ ಅದಕ್ಕೆ ಬೆಲೆ ಇರುವುದಿಲ್ಲ. ಚೆಕ್ ಗೆ ಸಹಿ ಮಾಡಿ ಮೋಸ ಹೋಗಿ ಆರೋಗ್ಯ ಹಾಳು ಮಾಡಿಕೊಳ್ಳಬೇಡಿ’ ಎಂದು ಸಲಹೆ ನೀಡಿದರು.

ADVERTISEMENT

‘ಸರ್ಕಾರದಿಂದ ವೃದ್ಧಾಪ್ಯ ವೇತನ, ಬಸ್‌ಗಳಲ್ಲಿ ರಿಯಾಯಿತಿ ದರದಲ್ಲಿ ಪಾಸ್ ಸಿಗುತ್ತದೆ. ಆಸ್ತಿಗೆ ಸಹಿ ಮಾಡಿ ಅನ್ಯಾಯಕ್ಕೆ ಒಳಗಾಗಿದ್ದರೆ ಉಪವಿಭಾಗಾಧಿಕಾರಿಗೆ ಅರ್ಜಿ ಹಾಕಿದರೆ ಅದನ್ನು ರದ್ದು ಮಾಡುತ್ತಾರೆ ಹಾಗೂ ಉಚಿತವಾಗಿ ಕಾನೂನು ಸೇವಾ ಸಮಿತಿಯಿಂದ ಅನ್ಯಾಯಕ್ಕೆ ಒಳಗಾಗಿರುವ ಹಿರಿಯ ನಾಗರೀಕರಿಗೆ ನ್ಯಾಯ ದೊರಕಿಸಿ ಕೊಡುವ ಕಾರ್ಯವನ್ನು ಒದಗಿಸಿದೆ. ಸದುಪಯೋಗ ಪಡಿಸಿಕೊಳ್ಳಿ’ ಎಂದರು.

ಪಿಎಸ್ಐ ಬಿ.ವಿ.ಪ್ರಕಾಶ್ ಮಾತನಾಡಿ, ‘ಮಕ್ಕಳಿಗಾಗಿ ಆಸ್ತಿಯನ್ನು ಮಾಡಬೇಡಿ. ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ. ಆಗ ಮಕ್ಕಳು ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. ನಿಮಗೆ ತೊಂದರೆ ಬಂದರೆ ನಿಮ್ಮ ಜತೆಗೆ ನಾವು ಇದ್ದೇವೆ’ ಎಂದರು.

ಹಿರಿಯ ಸಿ.ಜೆ ಮತ್ತು ಜೆಎಂಎಫ್ ಸಿ ಸಹಾಯಕ ಸರ್ಕಾರಿ ಅಭಿಯೋಜಕ ಎಂ. ಶಂಕರಸ್ವಾಮಿ, ಅಪರ ಸರ್ಕಾರಿ ವಕೀಲ ಎಂ.ಎಸ್.ಶ್ರೀಕಂಠಸ್ವಾಮಿ, ಎಎಸ್ಐ ಭುಜಲಿಂಗಯ್ಯ, ಪೊಲೀಸ್ ಸಿಬ್ಬಂದಿ, ಹಿರಿಯ ನಾಗರಿಕರು ಪಾಲ್ಗೊಂಡಿದ್ದರು.

ಹಿರಿಯ ನಾಗರಿಕರು ಯೋಗ ವಾಯುವಿಹಾರ ಮಿತ ಆಹಾರ ಸೇವನೆ ಮಾಡಿ ಆರೋಗ್ಯ ಚೆನ್ನಾಗಿ ಇಟ್ಟುಕೊಳ್ಳಿ.
– ಎಂ.ಮಹೇಂದ್ರ, ಹಿರಿಯ ಸಿವಿಲ್ ನ್ಯಾಯಾಧೀಶ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.