ಸಾಂಕೇತಿಕ ಚಿತ್ರ
ಮದ್ದೂರು (ಮಂಡ್ಯ ಜಿಲ್ಲೆ): ತಾಲ್ಲೂಕಿನ ಕೋಣಸಾಲೆ ಗ್ರಾಮದ ಹಂದಿ ಸಾಕಾಣಿಕೆ ಕೇಂದ್ರದಲ್ಲಿ ಹಲವು ವರ್ಷಗಳಿಂದ ಜೀತಕ್ಕೆ ದುಡಿಯುತ್ತಿದ್ದ ಗ್ರಾಮದ ಒಂದು ಕುಟುಂಬ ಹಾಗೂ ವಿಜಯಪುರ ಮೂಲದ ಒಂದು ಕುಟುಂಬವನ್ನು ಜಿಲ್ಲಾಡಳಿತ ರಕ್ಷಿಸಿ ಮಂಡ್ಯದ ಜ್ಞಾನಸಿಂಧು ವೃದ್ಧಾಶ್ರಮಕ್ಕೆ ಸೇರಿಸಿದೆ. ಕೇಂದ್ರದ ಮಾಲೀಕ ಮುರಳಿ ವಿರುದ್ಧ ಬೆಸಗರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರು ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ನೀಡಿದ್ದ ಸೂಚನೆಯ ಮೇರೆಗೆ, ಉಪವಿಭಾಗಾಧಿಕಾರಿ ಶಿವಮೂರ್ತಿ ಅವರೊಂದಿಗೆ ತಹಶೀಲ್ದಾರ್ ಸೋಮಶೇಖರ್ ನೇತೃತ್ವದಲ್ಲಿ ಮಂಗಳವಾರ ರಾತ್ರಿ ಕಾರ್ಯಾಚರಣೆ ನಡೆಸಲಾಗಿದೆ.
ಗ್ರಾಮದ ಪರಿಶಿಷ್ಟ ಜಾತಿಯ ವೆಂಕಟೇಶ್–ಗೀತಾ ದಂಪತಿಯನ್ನು 7 ವರ್ಷಗಳಿಂದ ಜೀತಕ್ಕಿರಿಸಿಕೊಂಡಿದ್ದು, ಅವರಿಗೆ 4 ವರ್ಷದ ಪುತ್ರ ಹಾಗೂ 3 ವರ್ಷದ ಪುತ್ರಿ ಇದ್ದಾರೆ. ವಿಜಯಪುರ ಮೂಲದ ರಮೇಶ್– ಶ್ವೇತಾ ದಂಪತಿಯನ್ನು 6 ವರ್ಷಗಳಿಂದ ಜೀತಕ್ಕಿರಿಸಿಕೊಂಡಿದ್ದು, 12 ವರ್ಷ ಮತ್ತು 8 ವರ್ಷದ ಪುತ್ರಿಯರು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದಾರೆ.
‘ಜೀತದಾಳುಗಳ ಮೇಲೆ ಮಾಲೀಕ ಮುರಳಿ ಅನೇಕ ಬಾರಿ ಹಲ್ಲೆ ನಡೆಸಿ, ಕೈಗೆ ಗಾಯಗೊಳಿಸಿದ್ದ. ಮೂಲಸೌಕರ್ಯವನ್ನೂ ಕೊಟ್ಟಿರಲಿಲ್ಲ’ ಎಂದು ತಹಶೀಲ್ದಾರ್ ತಿಳಿಸಿದ್ದಾರೆ.
‘₹ 1ಲಕ್ಷ ಸಾಲದ ಅಸಲು ಮತ್ತು ಬಡ್ಡಿ ತೀರಿಸಬೇಕೆಂದು ಒಂದು ಕುಟುಂಬವನ್ನು ಜೀತಕ್ಕೆ ಇರಿಸಿಕೊಳ್ಳಲಾಗಿತ್ತು. ಮತ್ತೊಂದು ಕುಟುಂಬಕ್ಕೆ ಆಗಾಗ್ಗೆ ಅಲ್ಪಸ್ವಲ್ಪ ಹಣವನ್ನು ಮಾಲೀಕ ನೀಡುತ್ತಿದ್ದ. ದಿನಸಿ ತರಲು ತಿಂಗಳಿಗೊಮ್ಮೆ ಹೊರಗಡೆ ಬಿಡುತ್ತಿದ್ದ’ ಎಂದು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.