ಮದ್ದೂರು: ‘ಪಟ್ಟಣದಲ್ಲಿ ಪೌರಕಾರ್ಮಿಕರಿಗೆ ಯಾವುದೇ ಸುರಕ್ಷತಾ ಸಾಧನ ಒದಗಿಸದೇ ಬರಿ ಕೈಯಲ್ಲಿ ಒಳಚರಂಡಿಯ ಕೊಳವೆಯನ್ನು ದುರಸ್ತಿ ಮಾಡಿಸಲಾಗಿದೆ’ ಎಂದು ಮಂಡ್ಯ ಜಿಲ್ಲಾ ದಲಿತ ಶೋಷಿತ ಸಮಾಜ ಸಂಘರ್ಷ ಸಮಿತಿ ಸಂಘಟನಾ ಕಾರ್ಯದರ್ಶಿ ಆರ್.ಶ್ರೀನಿವಾಸ್ ಆರೋಪಿಸಿದ್ದಾರೆ.
'ಪಟ್ಟಣದ 10ನೇ ವಾರ್ಡಿನಲ್ಲಿ ಮಂಗಳವಾರ ಕಟ್ಟಿಕೊಂಡಿದ್ದ ಒಳಚರಂಡಿಯನ್ನು ಗುತ್ತಿಗೆದಾರರು ಅಧಿಕಾರಿಗಳ ಅನುಪಸ್ಥಿತಿಯಲ್ಲಿ ಬರಿಕೈಯಲ್ಲಿ ದುರಸ್ತಿ ಮಾಡಿಸಿದ್ದಾರೆ. ಪೌರಕಾರ್ಮಿಕರ ಭದ್ರತೆ ಮತ್ತು ಆರೋಗ್ಯ ದೃಷ್ಟಿಯಿಂದ ಎಸ್‌ಸಿ, ಎಸ್‌ಟಿ ಯೋಜನೆ ಮತ್ತು ನಗರಾಭಿವೃದ್ಧಿ ಯೋಜನೆಯಡಿಯಲ್ಲಿ ಸರ್ಕಾರ ಕಾರ್ಮಿಕರಿಗೆ ಹಲವು ಸುರಕ್ಷತಾ ಸಲಕರಣೆಗಳನ್ನು ನೀಡುತ್ತದೆ. ಆದರೆ, ಅಧಿಕಾರಿಗಳು ಅವುಗಳನ್ನು ಪೌರಕಾರ್ಮಿಕರಿಗೆ ವಿತರಿಸದೇ ಕೇವಲ ಪುಸ್ತಕದಲ್ಲಿ ಲೆಕ್ಕ ತೋರಿಸುತ್ತಿದ್ದಾರೆ’ ಎಂದು ಅವರು ದೂರಿದ್ದಾರೆ.
‘ಪೌರಕಾರ್ಮಿಕರಿಗೆ ಒಳಚರಂಡಿ ದುರಸ್ತಿ ಕಾರ್ಯ ಮಾಡುವಾಗ ಕಾಲುಗಳಿಗೆ ಬೂಟುಗಳನ್ನಾಗಲಿ, ಕೈಗವುಸುಗಳನ್ನಾಗಲಿ ನೀಡದೇ ಬರಿಯ ಕೈಯಲ್ಲಿ ಕೆಲಸ ಮಾಡಿಸುತ್ತಿರುವುದು ಅಮಾನವೀಯ. ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಮೇಲೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಹಾಗೂ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡುತ್ತೇನೆ’ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.