
ಮಂಡ್ಯ: ‘ಜಗತ್ತಿನಲ್ಲಿ ಬೇಕಾದಷ್ಟು ಕ್ರಾಂತಿಗಳಾಗಿವೆ. ಆದರೆ, ನಮ್ಮ ದೇಶದಲ್ಲಿ ಆಗಿರುವ ಕ್ರಾಂತಿ ಎಂದರೆ ಇವತ್ತಿಗೂ ನಮ್ಮನ್ನ ಗುಲಾಮಗಿರಿಯಲ್ಲಿ ಬಾಳಿಸುತ್ತಿರುವಂತಹ ಚಾತುರ್ವಣ್ಯ ವ್ಯವಸ್ಥೆಯ ಮತ ಮೌಢ್ಯ’ ಎಂದು ಸಾಂಸ್ಕೃತಿಕ ಚಿಂತಕ ಪ್ರೊ.ಎಸ್.ಜಿ.ಸಿದ್ದರಾಮಯ್ಯ ವಿಷಾದಿಸಿದರು.
ನಗರದ ಸ್ವಾಮಿ ವಿವೇಕಾನಂದ ರಂಗಮಂದಿರದಲ್ಲಿ ಭಾನುವಾರ ನಡೆದ ಕುವೆಂಪು ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ವಿಚಾರ ಕ್ರಾಂತಿಗೆ ಆಹ್ವಾನದ ಹಿನ್ನೆಲೆಯಲ್ಲಿ ‘ನಿರಂಕುಶ ಮತಿತ್ವ’ ಕುರಿತು ಅವರು ಮಾತನಾಡಿದರು.
‘ಕುವೆಂಪು ಅವರ ಎಲ್ಲಾ ವಿಚಾರಗಳು ಹಾಗೂ ವೈಚಾರಿಕ ಲೇಖನಗಳನ್ನು ನೋಡಿಕೊಂಡು ಬಂದಾಗ, ನೇರವಾಗಿ ನಿರ್ದೇಶಿಸಿದಂತೆ ಹೇಳುತ್ತಿರುವ ವಿಷಯಗಳೆಲ್ಲವೂ ಆ ಮೌಢ್ಯವನ್ನೇ ಕುರಿತಾಗಿವೆ. ಬಿತ್ತುತ್ತಿರುವ ಮೌಢ್ಯದಿಂದ ಬಿಡಿಸಿಕೊಳ್ಳಲು ಬೇಕಾಗಿರುವಂತಹದ್ದೇ ವೈಚಾರಿಕತೆ ಅಥವಾ ವೈಜ್ಞಾನಿಕ ದೃಷ್ಟಿ’ ಎಂದು ತಿಳಿಸಿದರು.
‘ಕುವೆಂಪು ಸಾಹಿತ್ಯ ಪ್ರವೇಶಕ್ಕೆ ಭೂಮಿಕೆ’ ವಿಷಯ ಕುರಿತು ವಿಮರ್ಶಕ ಪ್ರೊ.ಚಂದ್ರಶೇಖರ ನಂಗಲಿ ಮಾತನಾಡಿ, ಕನ್ನಡ ಸಾಹಿತ್ಯಕ್ಕೆ ಅಪರಿಚಿತವಾದ ಎಷ್ಟೋ ವಿಷಯಗಳನ್ನ ತಿಳಿಸಿಕೊಟ್ಟ ಮಹನೀಯರಾದ ಕುವೆಂಪು ಅವರ ಸಾಹಿತ್ಯವೇ ಸಾಕ್ಷಿಯಾಗಿದೆ ಎಂದರು.
ಆಂಧ್ರಪ್ರದೇಶದ ಆದಾಯ ತೆರಿಗೆ ಇಲಾಖೆಯ ಮುಖ್ಯ ಆಯುಕ್ತ ಜಯರಾಮ್ ರಾಯಪುರ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶಗೌಡ ಭಾಗವಹಿಸಿದ್ದರು.